ಲೋಕಸಭೆ ಚುನಾವಣೆ ಸೀಟು ಹಂಚಿಕೆ: ಸೋಮವಾರ ಸಮನ್ವಯ ಸಮಿತಿ ಸಭೆ

Update: 2019-03-03 13:03 GMT

ಬೆಂಗಳೂರು, ಮಾ. 3: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರಗಳ ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಮಹತ್ವದ ಸಮನ್ವಯ ಸಮಿತಿ ಸಭೆ ನಾಳೆ(ಮಾ.4) ಬೆಳಗ್ಗೆ 9:30ಕ್ಕೆ ನಡೆಯಲಿದೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆ ಸಂದರ್ಭದಲ್ಲೇ ಎರಡೂ ಪಕ್ಷದ ನಾಯಕರು ಚುನಾವಣಾ ಪೂರ್ವ ಮೈತ್ರಿಯ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದರು. ಆದರೆ, ಸೀಟು ಹಂಚಿಕೆಗೆ ಸಂಬಂಧಪಟ್ಟಂತೆ ಈವರೆಗೂ ಯಾವುದೇ ಚರ್ಚೆಗಳು ನಡೆದಿರಲಿಲ್ಲ.

ಇದೀಗ ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಈಗ ಲೋಕಸಭೆ ಕ್ಷೇತ್ರಗಳ ಹಂಚಿಕೆ ಸಂಬಂಧಪಟ್ಟಂತೆ ಮಾತುಕತೆಗಳು ಆರಂಭಗೊಳ್ಳುತ್ತಿದೆ. ಜೆಡಿಎಸ್ ವರಿಷ್ಠ ದೇವೇಗೌಡ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಇನ್ನಿತರ ಮುಖಂಡರು ಚರ್ಚಿಸಲಿದ್ದಾರೆ.

ಜೆಡಿಎಸ್ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಜತೆ ನೇರವಾಗಿ ಚರ್ಚಿಸಿ ಸೀಟು ಹಂಚಿಕೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ, ಸ್ಥಳೀಯ ನಾಯಕರ ಅಭಿಪ್ರಾಯ ಕಡೆಗಣಿಸಿ ಮಾತುಕತೆ ನಡೆಸುವುದು ಸೂಕ್ತವಲ್ಲ ಎಂದು ಹೈಕಮಾಂಡ್ ಅಭಿಪ್ರಾಯದ ಹಿನ್ನೆಲೆಯಲ್ಲಿ ಮೊದಲು ರಾಜ್ಯದ ನಾಯಕರ ಜತೆ ಚರ್ಚಿಸುವಂತೆ ಸಲಹೆ ನೀಡಿದೆ. ಹೀಗಾಗಿ ನಾಳೆ ಸಮನ್ವಯ ಸಮಿತಿ ಸಭೆ ನಿಗದಿಯಾಗಿದೆ.

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹಾಗೂ ಜೆಡಿಎಸ್‌ನಿಂದ ಸಚಿವ ಎಚ್.ಡಿ.ರೇವಣ್ಣ, ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮೊದಲ ಹಂತದಲ್ಲಿ ಸೀಟು ಹಂಚಿಕೆ ಸಂಬಂಧ ಚರ್ಚಿಸಿದ್ದರು. ಆದರೆ, ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ಹತ್ತು ಕ್ಷೇತ್ರಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದ್ದು, ಮೇಲ್ಕಂಡ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿದಿದೆ. ಆದರೆ, ಈ ಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ ಸಂಸದರಿದ್ದಾರೆ. ಹಾಲಿ ಸಂಸದರಿಗೂ ಟಿಕೆಟ್ ತಪ್ಪಿಸಿ ಆ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್ ಸಿದ್ದವಿಲ್ಲ. ಈ ನಡುವೆ ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಮೈಸೂರು ಕ್ಷೇತ್ರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಜತೆಗೆ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ನ ಎಲ್.ಆರ್.ಶಿವರಾಮೇಗೌಡ ಸಂಸದರಾಗಿದ್ದಾರೆ. ಆ ಕ್ಷೇತ್ರಕ್ಕೆ ಅಂಬರೀಶ್ ಅವರ ಪತ್ನಿ ಸುಮಲತಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಈ ಮಧ್ಯೆ ಕೋಲಾರ ಕ್ಷೇತ್ರವನ್ನು ಕಾಂಗ್ರೆಸ್, ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಹಾಲಿ ಸಂಸದ ಕೆ.ಎಚ್.ಮುನಿಯಪ್ಪತಮ್ಮ ಅಸ್ಥಿತ್ವಕ್ಕಾಗಿ ಬಿಜೆಪಿಯತ್ತ ಮುಖ ಮಾಡುವ ಸಾಧ್ಯತೆಗಳಿವೆ ಎಂಬ ವದಂತಿಯೂ ಹಬ್ಬಿದೆ. ಹೀಗಾಗಿ ನಾಳೆ ನಡೆಯಲಿರುವ ಸಮನ್ವಯ ಸಮಿತಿ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News