ಲೇಖಕ ಬಿ.ಎಚ್.ಶ್ರೀಧರ್ ಸಾಹಿತ್ಯ ಸಾರ್ವಕಾಲಿಕ ಮೌಲ್ಯವುಳ್ಳದ್ದು: ಡಾ.ವಸುಂಧರಾ ಭೂಪತಿ

Update: 2019-03-03 14:15 GMT

ಬೆಂಗಳೂರು, ಮಾ.3: ಹಿರಿಯ ಸಾಹಿತಿ ಬಿ.ಎಚ್.ಶ್ರೀಧರ್ ಸಾರ್ವಕಾಲಿಕ ಮೌಲ್ಯವುಳ್ಳದಾಗಿದ್ದು, ಇವರ ಸಾಹಿತ್ಯದ ಮರು ಓದು ಹಾಗೂ ವಿಮರ್ಶೆ ನಡೆಸಬೇಕಾದ ಅಗತ್ಯವಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ವಸುಂಧರಾ ಭೂಪತಿ ಅಭಿಪ್ರಾಯಿಸಿದರು.

ರವಿವಾರ ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿ, ಕನ್ನಡ ಪುಸ್ತಕ ಪ್ರಾಧಿಕಾರ ನಗರದ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಬಿ.ಎಚ್.ಶ್ರೀಧರರರ ಸಾಹಿತ್ಯಾವಲೋಕನ ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿ.ಎಚ್.ಶ್ರೀಧರ್‌ರವರು ಕದಂಬ ವೈಭವ, ಅಮೃತ ಬಿಂದು, ಮೇಘನಾದ ಸೇರಿದಂತೆ 50ಕ್ಕೂ ಹೆಚ್ಚು ಕಾವ್ಯ, ಕತೆ, ವೈಚಾರಿಕೆ ಲೇಖನಗಳನ್ನು ಬರೆದಿದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಮ್ಮ ಸೃಜನಶೀಲತೆ, ಚಿಂತನೆಯನ್ನು ಧಾರೆಯೆರೆಯುವುದರ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಧರರವರ ಸಾಹಿತ್ಯವು ಯುವ ತಲೆಮಾರಿಗೆ ತಲುಪುವಂತಾಗಬೇಕು. ಆ ನಿಟ್ಟಿನಲ್ಲಿ ಕನ್ನಡ ಕೃತಿಗಳನ್ನು ಮರು ಮುದ್ರಿಸಲು ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಂದು ಅರ್ಜಿಯನ್ನು ಸಲ್ಲಿಸಿದರೆ, ಅದರ ಹಿನ್ನೆಲೆಯಲ್ಲಿ ಪುಸ್ತಕಗಳನ್ನು ಮರು ಮುದ್ರಿಸಲಾಗುವುದು ಎಂದು ಅವರು ಹೇಳಿದರು.

ಟ್ರಸ್ಟ್ ಸ್ಥಾಪನೆಯಾಗಲಿ: ರಾಜ್ಯ ಸರಕಾರ ಹಿರಿಯ ಸಾಹಿತಿಗಳ ಹೆಸರಿನಲ್ಲಿ ಟ್ರಸ್ಟ್‌ಗಳನ್ನು ಸ್ಥಾಪಿಸಿ, ಅವರ ಸಾಹಿತ್ಯ ಕೃತಿಗಳ ಕುರಿತು ಅಧ್ಯಯನ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ. ಇದರ ಭಾಗವಾಗಿ ಹಿರಿಯ ಸಾಹಿತಿ ಬಿ.ಎಚ್.ಶ್ರೀಧರ ಹೆಸರಿನಲ್ಲಿಯೂ ಟ್ರಸ್ಟ್ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಸರಕಾರದ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಬೇಕು ಎಂದು ಅವರು ಹೇಳಿದರು.

ಹಿರಿಯ ವಿಮರ್ಶಕ ಎಂ.ಜಿ.ಹೆಗಡೆ ಮಾತನಾಡಿ, ಸಾಹಿತಿ ಬಿ.ಎಚ್.ಶ್ರೀಧರರವರು ಸಾಹಿತ್ಯದ ಕ್ಷೇತ್ರಗಳಲ್ಲೂ ಬರವಣಿಗೆ ನಡೆಸಿದ್ದಾರೆ. ಅಗಾಧವಾದ ಓದಿನ ಹಾಗೂ ಅನುಭವದ ಪಾಂಡಿತ್ಯವಿದ್ದ ಅವರು, ಬೇರೆ, ಬೇರೆ ಹೆಸರುಗಳಲ್ಲಿ ಎಲ್ಲ ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದರು ಎಂದು ನೆನೆಪು ಮಾಡಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್, ಹಿರಿಯ ಕವಿ ಚಿಂತಾಮಣಿ ಕೊಡ್ಲೆಕೆರೆ, ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯ ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News