ಭದ್ರತಾ ಸಂಸ್ಥೆಗಳಿಂದ ವಾಯುಪಡೆಯ ಪೈಲಟ್ ಅಭಿನಂದನ್ ವಿಚಾರಣೆ

Update: 2019-03-03 14:52 GMT

ಹೊಸದಿಲ್ಲಿ,ಮಾ.3: ಪಾಕಿಸ್ತಾನದಿಂದ ವಾಪಸ್ ಆಗಿರುವ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಸದ್ಯ ಹೊಸದಿಲ್ಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಈ ಮಧ್ಯೆ ಭದ್ರತಾ ಸಂಸ್ಥೆಗಳು ರವಿವಾರ ಅಭಿನಂದನ್ ವಿಚಾರಣೆ ನಡೆಸಿವೆ.

ಶುಕ್ರವಾರ ರಾತ್ರಿ ಅಟಾರಿ-ವಾಘಾ ಗಡಿ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಕರೆತರಲ್ಪಟ್ಟ ಅಭಿನಂದನ್ ಅವರನ್ನು ದಿಲ್ಲಿಯಲ್ಲಿ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ಭೇಟಿಯಾದರು. ಅಭಿನಂದನ್ ಅವರನ್ನು ಭದ್ರತಾ ಸಂಸ್ಥೆಗಳು ವಿಚಾರಣೆಗೊಳಪಡಿಸಿದ್ದು ದು ಕೆಲವು ದಿನಗಳ ಕಾಲ ಮುಂದುವರಿಯಲಿದೆ. ಜೊತೆಗೆ ಅವರು ವೈದ್ಯಕೀಯ ಪರೀಕ್ಷೆಗೂ ಒಳಪಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರದಂದು ಭಾರತ ಮತ್ತು ಪಾಕಿಸ್ತಾನದ ಯುದ್ಧವಿಮಾನಗಳು ಆಗಸದಲ್ಲಿ ಕಾಳಗಕ್ಕಿಳಿದ ಸಂದರ್ಭದಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ನಂತರ ಅಭಿನಂದನ್ ಉಡಾಯಿಸುತ್ತಿದ್ದ ಮಿಗ್21 ಯುದ್ಧವಿಮಾನ ಅಪಘಾತಕ್ಕೀಡಾಗಿ ಅವರು ಪಾಕಿಸ್ತಾನದ ಭೂಪ್ರದೇಶದಲ್ಲಿ ಬಿದ್ದಿದ್ದರು. ಶತ್ರುಪಡೆಯಿಂದ ಬಂಧನಕ್ಕೊಳಗಾದರೂ ಧೃತಿಗೆಡದ ಅಭಿನಂದನ್ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲೂ ಧೈರ್ಯ ಮತ್ತು ತಾಳ್ಮೆಯನ್ನು ಪ್ರದರ್ಶಿಸುವ ಮೂಲಕ ಯುದ್ಧತಂತ್ರ ವ್ಯವಹಾರಗಳ ತಜ್ಞರು, ರಾಜಕಾರಣಿಗಳು, ಗಣ್ಯರು ಹಾಗೂ ದೇಶದ ನಾಗರಿಕರಿಂದ ಪ್ರಶಂಸೆ ಪಡೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News