ಹೈಕೋರ್ಟ್‌ನ ಕ್ರಿಮಿನಲ್, ಬೋರ್ಡ್ ಬ್ರಾಂಚ್‌ಗಳಲ್ಲಿ ಭ್ರಷ್ಟಾಚಾರ: ವಕೀಲರ ಸಂಘ ಆರೋಪ

Update: 2019-03-03 17:04 GMT

ಬೆಂಗಳೂರು, ಮಾ.3: ಹೈಕೋರ್ಟ್‌ನ ಕ್ರಿಮಿನಲ್ ಮತ್ತು ಬೋರ್ಡ್ ಬ್ರಾಂಚ್‌ಗಳಲ್ಲಿ ಭ್ರಷ್ಟಾಚಾರ ವ್ಯಾಪಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಲು ಬೆಂಗಳೂರು ವಕೀಲರ ಸಂಘ ತೀರ್ಮಾನಿಸಿದೆ.

ಹೈಕೋರ್ಟ್ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲು ವಕೀಲರ ಸಭಾಂಗಣದಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ 16 ನಿರ್ಣಯಗಳನ್ನು ಸ್ವೀಕರಿಸಲಾಗಿದೆ. ನಮ್ಮ ಈ ಮನವಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು 10 ದಿನಗಳ ಒಳಗೆ ಪರಿಗಣಿಸಬೇಕು. ಇಲ್ಲವಾದರೆ ಕೋರ್ಟ್ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ ಹಾಗೂ ಖಜಾಂಚಿ ಶಿವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರ್ಣಯಗಳು: ಕ್ರಿಮಿನಲ್ ಸ್ಕ್ರುಟಿನಿ ಮತ್ತು ಬೋರ್ಡ್ ಬ್ರಾಂಚ್‌ನ ಸಿಬ್ಬಂದಿಯನ್ನು ಆರು ತಿಂಗಳಿಗೊಮ್ಮೆ ವರ್ಗಾವಣೆ ಮಾಡಬೇಕು. ಈ ವಿಭಾಗಗಳಿಗೆ ಕಾನೂನು ಪದವಿ ಅಥವಾ ಕಾನೂನು ಪರಿಜ್ಞಾನ ಹೊಂದಿದ ಸಿಬ್ಬಂದಿಯನ್ನು ನಿಯೋಜಿಸಬೇಕು. ಹೈಕೋರ್ಟ್ ಪ್ರಕರಣಗಳ ಕಾಸ್‌ಲಿಸ್ಟ್ ಅನ್ನು ಪ್ರತಿದಿನ ಸಂಜೆ 7ಗಂಟೆಯೊಳಗೆ ಅಪ್‌ಲೋಡ್ ಮಾಡಬೇಕು. ರಾಜ್ಯಗ್ರಾಹಕರ ಆಯೋಗ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಅಧ್ಯಕ್ಷ ನ್ಯಾಯಮೂರ್ತಿ ಭಕ್ತವತ್ಸಲ ವಕೀಲರ ಜೊತೆ ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ. ತುರ್ತು ಪ್ರಕರಣಗಳನ್ನು ನ್ಯಾಯಪೀಠದ ಮುಂದೆ ಪೋಸ್ಟ್ ಮಾಡಿಸಲು ಈ ಹಿಂದೆ ಡೆಪ್ಯುಟಿ ರಿಜಿಸ್ಟ್ರಾರ್ ಅವರಿಗೆ ಮೊಮೊ ಸಲ್ಲಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕು. ಕ್ರಿಮಿನಲ್ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಹಾಗೂ ರೆಗ್ಯುಲರ್ ಜಾಮೀನು ಅರ್ಜಿಗಳ ವಿಲೇವಾರಿಗೆ ಪ್ರತ್ಯೇಕವಾದ ಹೆಚ್ಚುವರಿ ನ್ಯಾಯಪೀಠ ಸ್ಥಾಪಿಸಬೇಕು. ಕ್ರಿಮಿನಲ್ ಪ್ರಕರಣಗಳನ್ನು ತೀರ್ಮಾನಿಸಲು ವಾರದ ಐದು ದಿನಗಳಲ್ಲಿ ಮಧ್ಯಾಹ್ನದ ಕಲಾಪದ ನಂತರ ಐದು ನ್ಯಾಯಪೀಠಗಳು ಕಾರ್ಯ ನಿರ್ವಹಿಸುವಂತಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News