ಜಮ್ಮುಕಾಶ್ಮೀರ: ಜಮಾತೆ ಇಸ್ಲಾಮಿಯ ಮೂವರು ನಾಯಕರ ಬಂಧನ, 12ಕ್ಕೂ ಅಧಿಕ ಸೊತ್ತುಗಳಿಗೆ ಬೀಗಮುದ್ರೆ

Update: 2019-03-03 17:17 GMT

ಜಮ್ಮು, ಮಾ. 3: ಇತ್ತೀಚೆಗೆ ನಿಷೇಧಿಸಲಾಗಿರುವ ಜಮ್ಮು ಕಾಶ್ಮೀರದ ಜಮಾತೆ ಇಸ್ಲಾಮಿ ಸಂಘಟನೆಯ ಮೂವರು ಪ್ರಮುಖ ನಾಯಕರನ್ನು ಬಂಧಿಸಲಾಗಿದೆ ಹಾಗೂ ಜಮ್ಮು ಪ್ರಾಂತ್ಯದ 6 ಜಿಲ್ಲೆಗಳಲ್ಲಿ ನಡೆಸಿದ ದಾಳಿಯ ಸಂದರ್ಭ ಸುಮಾರು 12ಕ್ಕೂ ಅಧಿಕ ಸೊತ್ತುಗಳಿಗೆ ಬೀಗಮುದ್ರೆ ಹಾಕಲಾಗಿದೆ.

ಕಿಸ್ತ್ವಾರ, ಡೋಡಾ, ರಂಬಾನ್, ಪೂಂಛ್, ರಾಜೌರಿ ಹಾಗೂ ಜಮ್ಮು ಜಿಲ್ಲೆಗಳಲ್ಲಿರುವ ಕಾಶ್ಮೀರದ ಜಮಾತೆ ಇಸ್ಲಾಮಿಯ ನಾಯಕರು, ಹೋರಾಟಗಾರರ ಮನೆ ಹಾಗೂ ಕಚೇರಿಗಳ ಮೇಲೆ ದಿನಪೂರ್ತಿ ದಾಳಿ ನಡೆಸಲಾಯಿತು. ಈ ಸಂದರ್ಭ ದೊಡ್ಡ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಗುಂಪಿಗೆ ಸಂಬಂಧ ಹೊಂದಿದ ಕನಿಷ್ಠ 6 ಬ್ಯಾಂಕ್ ಖಾತೆಗಳನ್ನು ಗುರುತಿಸಲಾಗಿದೆ ಹಾಗೂ ಕೂಡಲೇ ಈ ಖಾತೆಗಳನ್ನು ಸ್ತಂಭನಗೊಳಿಸುವಂತೆ ಬ್ಯಾಂಕ್‌ಗಳಿಗೆ ನಿರ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಪ್ರತ್ಯೇಕತಾವಾದಿ ಚಳವಳಿಯನ್ನು ಹೆಚ್ಟುವ ನಿರೀಕ್ಷೆ ಇರುವುದರಿಂದ ಹಾಗೂ ಭಯೋತ್ಪಾದಕ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಇರುವ ಹಿನ್ನೆಲೆಯಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಜಮಾತೆ ಇಸ್ಲಾಮಿಗೆ ಕೇಂದ್ರ ಸರಕಾರ ಗುರುವಾರ ಐದು ವರ್ಷಗಳ ನಿಷೇಧ ಹೇರಿತ್ತು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತ ಉನ್ನತ ಮಟ್ಟದ ಸಭೆ ನಡೆದ ಬಳಿಕ ಗೃಹ ಸಚಿವಾಲಯ ಕಾನೂನು ಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ಜಮಾತೆ ಇಸ್ಲಾಮಿ ಮೇಲೆ ನಿಷೇಧ ಹೇರಿ ಅಧಿಸೂಚನೆ ಹೊರಡಿಸಿತ್ತು. ಜಮ್ಮು ಹಾಗೂ ಕಾಶ್ಮೀರದಿಂದ ಕಳೆದ ವಾರ ಸಂಘಟನೆಯ ಉನ್ನತ ನಾಯಕರು ಹಾಗೂ 150ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News