ಮುಖ್ಯಮಂತ್ರಿಯೇ ಇಲ್ಲದ ಗೋವಾ ಸರಕಾರ

Update: 2019-03-05 06:05 GMT

ಮನುಷ್ಯ ಎಂದ ಮೇಲೆ ಒಂದಲ್ಲ ಒಂದು ರೋಗಗಳಿಗೆ ಆತ ಮುಖಾಮುಖಿಯಾಗಲೇಬೇಕು. ರೋಗಗಳು ಮನುಷ್ಯನ ಒಳಹೊರಗುಗಳನ್ನು ಬದಲಾಯಿಸಿ ತೆರಳುತ್ತವೆ. ಕೆಲವೊಮ್ಮೆ ಅದು ರೋಗಿಯನ್ನು ತನ್ನ ಜೊತೆಗೇ ಒಯ್ಯುತ್ತದೆ. ಆದರೂ ಅದು ಆ ರೋಗಿಯ ಸುತ್ತಮುತ್ತಲಿರುವವರ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರಿ ಮರಳುತ್ತದೆ. ಕೆಲವೊಮ್ಮೆ ಬದುಕಿನ ಕುರಿತಂತೆ ಹೊಸ ದೃಷ್ಟಿಕೋನವನ್ನು ಕೊಟ್ಟು ಹೋಗುತ್ತದೆ. ರೋಗದ ಇನ್ನೊಂದು ಹಿರಿಮೆಯೆಂದರೆ ಅದು ಅಪ್ಪಟ ಸಮತಾವಾದಿ. ಬಡವರು, ಶ್ರೀಮಂತರು ಎನ್ನುವ ಭೇದವನ್ನು ಮಾಡುವುದಿಲ್ಲ. ರಾಜಕಾರಣಿಗಳು, ಉದ್ಯಮಿಗಳು, ನಟ, ನಟಿಯರು ಹೀಗೆ ಬೇರೆ ಬೇರೆ ಕ್ಷೇತ್ರಗಳನ್ನೂ ಅದು ಬಿಡದೇ ಕಾಡುತ್ತದೆ.

ಇತ್ತೀಚೆಗೆ ಕ್ಯಾನ್ಸರ್ ರೋಗ ಹಲವು ರಾಜಕಾರಣಿಗಳನ್ನು ಬಲಿ ತೆಗೆದುಕೊಂಡಿದೆ. ಹಲವು ಪ್ರಮುಖ ರಾಜಕಾರಣಿಗಳನ್ನು ಈ ಕ್ಯಾನ್ಸರ್ ಬಿಡದೆ ಸುತ್ತಿಕೊಂಡಿದೆ. ಆದರೆ ಈ ಎಲ್ಲ ಕ್ಯಾನ್ಸರ್ ಪೀಡಿತರಲ್ಲಿ ಗೋವಾದ ಮುಖ್ಯಮಂತ್ರಿ ಪಾರಿಕ್ಕರ್ ಒಂದಿಷ್ಟು ಭಿನ್ನ ಕಾರಣಕ್ಕಾಗಿ ಸುದ್ದಿ ಮಾಡುತ್ತಿದ್ದಾರೆ. ಪಾರಿಕ್ಕರ್ ಅವರ ಕ್ಯಾನ್ಸರ್ ಗಂಭೀರ ಸ್ಥಿತಿ ತಲುಪಿದೆ ಎಂದು ಬಿಜೆಪಿಯ ನಾಯಕರೇ ಅಧಿಕೃತವಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಗೋವಾದ ಸಚಿವರೊಬ್ಬರು, ‘ಅವರ ರೋಗ ಉಲ್ಬಣಾವಸ್ಥೆಯಲ್ಲಿದೆ. ಆದರೂ ಅವರು ಆಡಳಿತ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಗೋವಾ ಸರಕಾರದ ಸ್ಪೀಕರ್ ‘‘ಪಾರಿಕ್ಕರ್ ಕೊನೆಯವರೆಗೂ ಮುಖ್ಯಮಂತ್ರಿಯಾಗಿ ಉಳಿಯಲಿದ್ದಾರೆ’’ ಎಂಬ ಹೇಳಿಕೆಯನ್ನೂ ನೀಡಿದ್ದಾರೆ.

ಕ್ಯಾನ್ಸರ್ ರೋಗ ಪೀಡಿತನೊಬ್ಬ ಉನ್ನತ ಹುದ್ದೆಯನ್ನು ವಹಿಸಬಾರದು ಎಂದೇನಿಲ್ಲ. ಆದರೆ ಪಾರಿಕ್ಕರ್‌ರ ಇತ್ತೀಚಿನ ಚಿತ್ರವೊಂದು ಮಾಧ್ಯಮಗಳಲ್ಲಿ ಪ್ರಕಟವಾಯಿತು. ಮೂಗಿಗೆ ಟ್ಯೂಬ್ ಇಟ್ಟುಕೊಂಡಿದ್ದ, ಕೃಶ ಶರೀರದ ಪಾರಿಕ್ಕರ್ ಸದನ ಕಾರ್ಯದಲ್ಲಿ ಭಾಗವಹಿಸಿದ ಚಿತ್ರ ಅದು. ಅವರ ಕೃಶ ದೇಹ ಯಾವರೀತಿಯಲ್ಲೂ ಆಡಳಿತ ಕಾರ್ಯದಲ್ಲಿ ತೊಡಗುವಂತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಕ್ಯಾನ್ಸರ್ ರೋಗಿಗೆ ಆತನದೇ ಆದ ಒಂದು ಘನತೆ ಇರುತ್ತದೆ. ಜರ್ಝರಿತ ದೇಹ ಮತ್ತು ಮೂಗಿಗೆ ಟ್ಯೂಬ್ ಹಾಕಿಕೊಂಡು ಸದನ ಪ್ರವೇಶಿಸುವುದು ನಾಟಕೀಯವಾಗಿದೆ. ಈ ಸ್ಥಿತಿಯಲ್ಲಿ ಅವರು ಖಂಡಿತವಾಗಿಯೂ ಗೋವಾ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಅಂದರೆ, ಪಾರಿಕ್ಕರ್‌ರನ್ನು ಹೆಸರಿಗಷ್ಟೇ ಮುಂದಿಟ್ಟುಕೊಂಡು ಬಿಜೆಪಿಯು ಗೋವಾದಲ್ಲಿ ಸರಕಾರ ನಡೆಸುತ್ತಿದೆ. ಒಂದು ಅರ್ಥದಲ್ಲಿ ಗೋವಾದಲ್ಲಿ ಮುಖ್ಯಮಂತ್ರಿ ಹುದ್ದೆಯೆನ್ನುವುದೇ ಇಲ್ಲ ಅಥವಾ ಆ ಹುದ್ದೆಯ ಕಚೇರಿಯನ್ನು ಆಸ್ಪತ್ರೆಯ ಕೊಠಡಿಗೆ ವರ್ಗಾಯಿಸಲಾಗಿದೆ. ಈ ಹಂತದಲ್ಲಿ ಪಾರಿಕ್ಕರ್ ತಾವಾಗಿ ರಾಜೀನಾಮೆಯನ್ನು ನೀಡಿ ಮುಖ್ಯಮಂತ್ರಿ ಹುದ್ದೆಯನ್ನು ಇನ್ನೊಬ್ಬರಿಗೆ ವಹಿಸುವುದು ಅವರ ಹೊಣೆಗಾರಿಕೆಯಾಗಿತ್ತು. ಆದರೆ ಅಂತಹ ಬೆಳವಣಿಗೆ ನಡೆದಿಲ್ಲ ಮಾತ್ರವಲ್ಲ, ಕೊನೆಯವರೆಗೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎನ್ನುವುದನ್ನು ಬಿಜೆಪಿ ಕಚೇರಿಯೂ ಸ್ಪಷ್ಟಪಡಿಸಿದೆ.

ಬಿಜೆಪಿಯು ಪಾರಿಕ್ಕರ್ ಸ್ಥಿತಿಯನ್ನು ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆಯೇ ಎಂಬ ಅನುಮಾನವೊಂದು ತಲೆಯೆತ್ತಿದೆ. ಸೈನಿಕರ ಮೃತದೇಹಗಳನ್ನು ಮುಂದಿಟ್ಟುಕೊಂಡು ರಾಜಕೀಯ ನಡೆಸುತ್ತಿರುವ ಬಿಜೆಪಿ, ಗೋವಾದಲ್ಲಿ ಪಾರಿಕ್ಕರ್‌ರ ತೀವ್ರ ಜರ್ಝರಿತವಾದ ಚಿತ್ರಗಳನ್ನು ತೋರಿಸುತ್ತಾ ‘‘ಈ ಸ್ಥಿತಿಯಲ್ಲಿದ್ದರೂ ಗೋವಾ ಜನರಿಗಾಗಿ ದುಡಿಯುತ್ತಿದ್ದಾರೆ’’ ಎನ್ನುವುದನ್ನು ಬಿಂಬಿಸಲು ಪ್ರಯತ್ನಿಸುತ್ತಿದೆ. ಜನರ ಅನುಕಂಪವನ್ನು ಸೆಳೆಯಲು ಬಿಜೆಪಿ ಕ್ಯಾನ್ಸರ್ ಪೀಡಿತರಾಗಿರುವ ಪಾರಿಕ್ಕರ್‌ರನ್ನು ಬಳಸಿಕೊಳ್ಳುತ್ತಿದೆ. ಇದು ನಿಜಕ್ಕೂ ಅಮಾನವೀಯ ಮಾತ್ರವಲ್ಲ, ಬಿಜೆಪಿಯ ಸದ್ಯದ ದೈನೇಸಿ ಸ್ಥಿತಿಯನ್ನು ತೋರಿಸುತ್ತಿದೆ. ರಾಜಕೀಯಕ್ಕಾಗಿ ಯಾವ ಹಂತಕ್ಕೂ ಇಳಿಯಬಲ್ಲೆ ಎನ್ನುವ ಅದರ ಲಜ್ಜೆಗೆಟ್ಟ ಹೆಜ್ಜೆಯಾಗಿದೆ ಇದು. ಪಾರಿಕ್ಕರ್ ಒಬ್ಬ ವಿಫಲ ರಕ್ಷಣಾ ಸಚಿವ. ಗೋವಾದ ಮುಖ್ಯಮಂತ್ರಿ ಸ್ಥಾನಕ್ಕಾಗಿ ದೇಶದ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವರು. ಗೋವಾದಲ್ಲಿ ಅಡ್ಡದಾರಿಯ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಪಾರಿಕ್ಕರ್ ಪಾತ್ರ ದೊಡ್ಡದಿದೆ.

ಈ ಹಿನ್ನೆಲೆಯಲ್ಲಿ, ಅನುಕಂಪದ ಆಧಾರದಿಂದ ಕೊನೆಯವರೆಗೂ ಅವರೇ ಮುಖ್ಯಮಂತ್ರಿಯಾಗಲಿ ಎಂದೂ ಬಿಜೆಪಿ ಬಯಸಿರಬಹುದು. ಆದರೆ ಅದಕ್ಕಾಗಿ ಗೋವಾದ ಜನರು ಬೆಲೆ ತೆರಬೇಕೇ ಎಂಬ ಪ್ರಶ್ನೆ ಏಳುತ್ತದೆ. ಪಾರಿಕ್ಕರ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿರುವುದರ ಹಿಂದೆ ಇನ್ನೊಂದು ವಾದವಿದೆ. ರಫೇಲ್ ಹಗರಣದಲ್ಲಿ ಪಾರಿಕ್ಕರ್ ಕೂಡ ಭಾಗಿಯಾಗಿದ್ದಾರೆ ಎನ್ನುವ ಆರೋಪಗಳಿವೆ. ರಫೇಲ್ ಹಗರಣದ ಮಹತ್ವದ ವಿವರಗಳು ಪಾರಿಕ್ಕರ್ ಅವರಲ್ಲಿದೆ. ಒಂದು ವೇಳೆ ತನಿಖೆ ನಡೆದರೆ ಪಾರಿಕ್ಕರ್ ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಅವರಿಗೆ ಅಗತ್ಯವಾಗಿದೆ. ಮತ್ತು ರಫೇಲ್ ಅವ್ಯವಹಾರದ ದಾಖಲೆಗಳನ್ನು ಮುಂದಿಟ್ಟುಕೊಂಡು ಅವರು ಬಿಜೆಪಿ ವರಿಷ್ಠರನ್ನು ಬ್ಲ್ಲಾಕ್‌ಮೇಲ್ ಮಾಡುತ್ತಿದ್ದಾರೆ. ರಾಜೀನಾಮೆ ಪಡೆಯದಂತೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ರಫೇಲ್ ಹಗರಣದ ಕುರಿತಂತೆ ಇಂದು ಅತಿ ಹೆಚ್ಚು ವಿವರಗಳು ಗೊತ್ತಿರುವುದು ಮಾಜಿ ರಕ್ಷಣಾ ಸಚಿವರಾಗಿರುವ ಪಾರಿಕ್ಕರ್‌ರಿಗೆ. ಆದರೆ ರಫೇಲ್ ಒಪ್ಪಂದದಲ್ಲಿ ನನ್ನ ಪಾತ್ರವಿಲ್ಲ ಎಂದು ಈ ಹಿಂದೆಯೇ ಅವರು ಸ್ಪಷ್ಟಪಡಿಸಿದ್ದಾರೆ. ಬಹುಶಃ, ಕ್ಯಾನ್ಸರ್ ರೋಗ ಉಲ್ಬಣಾವಸ್ಥೆಯಲ್ಲಿರುವ ನಾಯಕನೊಬ್ಬ ಆಸ್ಪತ್ರೆಯಿಂದಲೇ ಒಂದು ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ನಿರ್ವಹಿಸುತ್ತಿರುವುದು ದೇಶದ ಇತಿಹಾಸದಲ್ಲೇ ಪ್ರಥಮವಿರಬೇಕು. ಬಹುಶಃ ಗೋವಾದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಅರ್ಹವಾಗಿರುವ ಇನ್ನೊಬ್ಬ ನಾಯಕನೇ ಇಲ್ಲ ಎನ್ನುವುದನ್ನೂ ಈ ಮೂಲಕ ಬಿಜೆಪಿ ಒಪ್ಪಿಕೊಂಡಂತಾಗಿದೆ. ಆ ಕಾರಣಕ್ಕಾಗಿಯೇ ಮುಂದಿನ ಲೋಕಸಭಾ ಚುನಾವಣೆಯವರೆಗಾದರೂ ಪಾರಿಕ್ಕರ್ ಭಾವಚಿತ್ರಗಳನ್ನು ಮುಂದಿಟ್ಟು ಜನರಿಂದ ಅನುಕಂಪವನ್ನು ತನ್ನದಾಗಿಸಲು ಹವಣಿಸುತ್ತಿದೆ. ಪ್ರಜಾಸತ್ತೆಗೂ, ಒಬ್ಬ ಕ್ಯಾನ್ಸರ್ ರೋಗಿಗೂ ಜೊತೆಯಾಗಿ ಬಿಜೆಪಿ ಅವಮಾನ ಮಾಡಿದೆ. ಇನ್ನಾದರೂ ಪಾರಿಕ್ಕರ್ ಕೈಯಿಂದ ರಾಜೀನಾಮೆ ಕೊಡಿಸಿ, ಗೋವಾಕ್ಕೆ ಒಬ್ಬ ಹೊಸ ಮುಖ್ಯಮಂತ್ರಿಯನ್ನು ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News