ಶಿವರಾಮೇಗೌಡಗಿಂತ ನಿಖಿಲ್ ಉತ್ತಮ ಅಭ್ಯರ್ಥಿ: ಸಚಿವ ಡಿ.ಸಿ.ತಮ್ಮಣ್ಣ

Update: 2019-03-05 13:28 GMT

ಬೆಂಗಳೂರು, ಮಾ.5: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡಗಿಂತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಉತ್ತಮ ಅಭ್ಯರ್ಥಿ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗೆ ಇರಬೇಕಾದ ಎಲ್ಲ ಗುಣಗಳು ನಿಖಿಲ್‌ಗಿದೆ. ಮಂಡ್ಯದಿಂದ ನಿಖಿಲ್ ಸ್ಪರ್ಧಿಸುತ್ತಿರುವ ಕುರಿತು ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಘೋಷಿಸಿದ್ದಾರೆ ಎಂದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ಸುಮಲತಾ ಕಣಕ್ಕಿಳಿಯುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅರ್ಹತೆ ಇರೋರು ಯಾರು ಬೇಕಾದರೂ, ಎಲ್ಲಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ನಿಖಿಲ್ ಕುಮಾರಸ್ವಾಮಿಗೂ ಅರ್ಹತೆ ಇರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್‌ರನ್ನು ಕಣಕ್ಕಿಳಿಸಬೇಕೆಂದು ಕ್ಷೇತ್ರ ವ್ಯಾಪ್ತಿಗೊಳಪಡುವ ಎಂಟು ಶಾಸಕರು ಒಮ್ಮತದ ತೀರ್ಮಾನ ಕೈಗೊಂಡು, ಪಕ್ಷದ ವರಿಷ್ಠರಿಗೆ ತಿಳಿಸಿದ್ದೇವೆ. ಅದರಂತೆ, ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.

ಜೆಡಿಎಸ್ ಪಕ್ಷ ಆರಂಭವಾದಾಗಿನಿಂದಲೂ ಒಂದು ಕುಟುಂಬದ ಪಕ್ಷ ಎಂಬ ಆಪಾದನೆ ಇದೆ. ಹಾಸನ, ಮೈಸೂರು, ಮಂಡ್ಯ ನಮ್ಮ ಮನೆ ಇದ್ದ ಹಾಗೆ, ಅಲ್ಲಿ ಕುಟುಂಬದ ಸದಸ್ಯರನ್ನೆ ಆಯ್ಕೆ ಮಾಡುತ್ತೇವೆ ಎಂದು ತಮ್ಮಣ್ಣ ತಿಳಿಸಿದರು.

ಬೇರೆ ಜಿಲ್ಲೆಯವರನ್ನು ಕರೆ ತಂದು ಮಂಡ್ಯದಲ್ಲಿ ಅಭ್ಯರ್ಥಿ ಮಾಡುವುದು ಬೇಡ ಎಂದು ಕೆಲವು ಸ್ಥಳೀಯ ನಾಯಕರು ನಿಖಿಲ್ ಸ್ಪರ್ಧೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೊರ ಜಿಲ್ಲೆಯವರೆಂದು ವಿರೋಧವೇಕೆ? ಹೊರ ರಾಜ್ಯದವರಾದ ಇಂದಿರಾಗಾಂಧಿ, ಸುಷ್ಮಾ ಸ್ವರಾಜ್, ಸೋನಿಯಾ ಗಾಂಧಿಯನ್ನು ರಾಜ್ಯಕ್ಕೆ ಕರೆ ತಂದು ಗೆಲ್ಲಿಸಿ ಕಳುಹಿಸಲಿಲ್ಲವೇ ಎಂದರು.

ಒಂದು ಪಕ್ಷದಿಂದ ಗೆದ್ದು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ ಎಂದು ನಾವು ದೂರಿನಲ್ಲಿ ತಿಳಿಸಿದ್ದೇವೆ. ಸ್ಪೀಕರ್ ನಮ್ಮ ದೂರಿನ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಉಮೇಶ್ ಜಾಧವ್ ಬಿಜೆಪಿಯವರ 25-30 ಕೋಟಿ ರೂ.ಗಳಿಗೆ ಮಾರಾಟವಾಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಈ ರೀತಿ ತಮ್ಮನ್ನು ಮಾರಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News