ಕಾಂಗ್ರೆಸ್‌ ನವರು ವಕ್ಫ್ ಆಸ್ತಿ ಲೂಟಿ ಹೊಡೆದು ಕೋಟ್ಯಾಧಿಪತಿಗಳಾಗಿದ್ದಾರೆ: ಅನ್ವರ್ ಮಾಣಿಪ್ಪಾಡಿ

Update: 2019-03-05 14:16 GMT

ಬೆಂಗಳೂರು, ಮಾ.5: ಅಲ್ಪಸಂಖ್ಯಾತರೆಲ್ಲರೂ ಕಾಂಗ್ರೆಸ್‌ಗೆ ಬೆಂಬಲಿಸಬೇಕೆಂದು ಸಚಿವ ಝಮೀರ್‌ ಅಹ್ಮದ್ ನೀಡಿರುವ ಹೇಳಿಕೆ ಹಾಸ್ಯಾಸ್ಪದ. ಅವರ ಪಕ್ಷದ ನಾಯಕರೇ ಸೇರಿ ಅಲ್ಪಸಂಖ್ಯಾತರ ವಕ್ಫ್ ಆಸ್ತಿಯನ್ನು ಲೂಟಿ ಹೊಡೆದು ವೈಯಕ್ತಿಕವಾಗಿ ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಬಿಜೆಪಿ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ.

ಮೂರು ಮೆಡಿಕಲ್ ಕಾಲೇಜುಗಳು, 12 ಎಂಜಿನಿಯರಿಂಗ್ ಕಾಲೇಜುಗಳು ಹಾಗೂ 100ಕ್ಕೂ ಹೆಚ್ಚು ವೃತ್ತಿ ಶಿಕ್ಷಣ ಕಾಲೇಜುಗಳಿದ್ದು, ಅವೆಲ್ಲವೂ ವಕ್ಫ್ ಅಧೀನಕ್ಕೆ ಬಂದು ಬಡ ಮುಸ್ಲಿಮರಿಗೆ ಉಚಿತ ಶಿಕ್ಷಣ ಸಿಗುವಂತೆ ಮಾಡಬೇಕಾಗಿದ್ದ ಕಾಂಗ್ರೆಸ್ ನಾಯಕರು ತಮ್ಮ ಸ್ವಂತ ಆಸ್ತಿ ಮಾಡಿಕೊಂಡಿರುವುದು ಝಮೀರ್ ಅವರಿಗೆ ಗೊತ್ತಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಪಂಚತಾರಾ ಹೊಟೇಲ್‌ಗಳು, ವಾಣಿಜ್ಯ ಸಂಕೀರ್ಣಗಳು ಇವೆಲ್ಲವೂ ಅನೇಕ ಕಡೆಗಳಲ್ಲಿ ವಕ್ಫ್‌ಗೆ ಸೇರಿದ ಜಾಗಗಳಲ್ಲಿದ್ದು, ಇವುಗಳ ಮೌಲ್ಯವೇ 2.30 ಲಕ್ಷ ಕೋಟಿ ರೂ.ಗಳು ಎಂದು ನನ್ನ ವರದಿಯಲ್ಲಿ ದಾಖಲೆ ಸಹಿತ ನಮೂದಿಸಲಾಗಿದ್ದು, ವಿಧಾನಪರಿಷತ್‌ನಲ್ಲಿ ಈ ವರದಿ ಮಂಡನೆಗೆ ಆದೇಶವಾಗಿತ್ತು ಎಂದು ಅನ್ವರ್ ಮಾಣಿಪ್ಪಾಡಿ ತಿಳಿಸಿದ್ದಾರೆ.

ಹೈಕೋರ್ಟ್ ಎರಡು ಬಾರಿ ಈ ಸಂಬಂಧ ಆದೇಶಿಸಿದೆ. ಆದರೆ, ಈ ವರದಿಯನ್ನು ಮಂಡನೆ ಮಾಡದೇ, ಸುಪ್ರೀಂಕೋರ್ಟ್‌ಗೆ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿದ್ದು, ಅದಿನ್ನೂ ಅಂಗೀಕಾರವಾಗಿಲ್ಲ. ರಾಜ್ಯದಲ್ಲಿ ಝಮೀರ್ ಅಹ್ಮದ್ ಅವರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವಿದೆ. ವಕ್ಫ್ ಆಸ್ತಿಯನ್ನು ಹಿಂದಕ್ಕೆ ಪಡೆದು ಅಲ್ಪಸಂಖ್ಯಾತರ ಮತ ಕೇಳಲಿ. ಅದಿಲ್ಲದೇ ಕಾಂಗ್ರೆಸ್ ವಂಚನೆಯನ್ನು ಅಲ್ಪಸಂಖ್ಯಾತರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News