ಲೋಕಸಭಾ ಚುನಾವಣೆ ವರೆಗೆ ಬಸ್ ಪ್ರಯಾಣ ದರ ಏರಿಕೆಯಿಲ್ಲ: ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ

Update: 2019-03-05 14:18 GMT

ಬೆಂಗಳೂರು, ಮಾ.5: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಮುಗಿಯುವವರೆಗೆ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ಸುಗಳ ಪ್ರಯಾಣ ದರವನ್ನು ಏರಿಕೆ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.1 ರಿಂದ ಡೀಸೆಲ್ ದರ 3 ರೂ.ಹೆಚ್ಚಾಗಿದೆ. ಇದರಿಂದಾಗಿ, ಪ್ರತಿ ತಿಂಗಳು ಸಾರಿಗೆ ನಿಗಮಗಳಿಗೆ 15 ಕೋಟಿ ರೂ.ಹೆಚ್ಚುವರಿ ಹೊರೆಯಾಗುತ್ತಿದೆ ಎಂದರು.

ಬಸ್ ಪ್ರಯಾಣ ದರ ಹೆಚ್ಚಳ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದು, ಲೋಕಸಭಾ ಚುನಾವಣೆಯವರೆಗೆ ಯಾವುದೇ ಕಾರಣಕ್ಕೂ ಪ್ರಯಾಣ ದರ ಹೆಚ್ಚಳ ಮಾಡದಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ತಮ್ಮಣ್ಣ ಹೇಳಿದರು.

ಬಾಡಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಪಡೆದು ಕಾರ್ಯಾಚರಣೆ ನಡೆಸಿದರೆ ನಿಗಮಕ್ಕೆ ನಷ್ಟವಾಗುತ್ತಿತ್ತು. ಆದುದರಿಂದ, ಗುತ್ತಿಗೆ ಬದಲು ನಿಗಮಕ್ಕೆ ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ರಾಜ್ಯ ಸರಕಾರ ಅನುಮತಿ ನೀಡದಿದ್ದರೂ ಅಧಿಕಾರಿಗಳೇ ಎಲೆಕ್ಟ್ರಿಕ್ ಬಸ್ಸುಗಳನ್ನು ಬಾಡಿಗೆಗೆ ಪಡೆಯಲು ಮುಂದಾಗಿದ್ದರು. ಆದುದರಿಂದ, ನಾನು ವಿರೋಧ ವ್ಯಕ್ತಪಡಿಸಿದೆ ಎಂದು ಅವರು ತಿಳಿಸಿದರು.

ಎಲೆಕ್ಟ್ರಿಕ್ ಬಸ್ಸುಗಳಿಗಾಗಿ ಕೇಂದ್ರ ಸರಕಾರ ನೀಡುವ 78 ಕೋಟಿ ರೂ.ಗಳ ಅನುದಾನಕ್ಕಾಗಿ, ನಮ್ಮ ಸಂಸ್ಥೆಯನ್ನು ನಷ್ಟದ ಕೂಪಕ್ಕೆ ತಳ್ಳುವುದು ಎಷ್ಟು ಸರಿ. ಆದುದರಿಂದ, ಬಾಡಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಪಡೆದುಕೊಳ್ಳುವ ಒಪ್ಪಂದವನ್ನು ರದ್ದು ಮಾಡಲಾಗಿದೆ. ಅಲ್ಲದೇ, ನಿಗಮಕ್ಕೆ ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಸರಕಾರಕ್ಕೂ ಅನುದಾನ ನೀಡುವಂತೆ ಕೋರಿ ಪತ್ರ ಬರೆಯಲಾಗುವುದು ಎಂದು ತಮ್ಮಣ್ಣ ಹೇಳಿದರು.

ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಓ)ಯಲ್ಲಿ ಪ್ರಥಮ ದರ್ಜೆ ಸಹಾಯಕರು ಗುಮಾಸ್ತರ ಕೆಲಸ ಮಾಡುವ ಪರಿಸ್ಥಿತಿಯಿದೆ. ಸಿಬ್ಬಂದಿಗಳ ಕೊರತೆ ಹೆಚ್ಚಿದೆ. ಆದುದರಿಂದ, ಆದಷ್ಟು ಶೀಘ್ರದಲ್ಲಿ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ರಾಜ್ಯ ಲೋಕಸೇವಾ ಆಯೋಗಕ್ಕೆ ಕೇಳಿದ್ದೇವೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರದ ನೂತನ ಮೋಟಾರು ವಾಹನ ಕಾಯ್ದೆಯಿಂದಾಗಿ ನೇಮಕಾತಿಗಳು ವಿಳಂಬವಾಗುತ್ತಿವೆ. ಆದುದರಿಂದ, ರಾಜ್ಯ ಸರಕಾರದಿಂದಲೇ ಹೊಸ ನಿಯಮಾವಳಿಗಳನ್ನು ರೂಪಿಸಿ ನೇಮಕಾತಿ ಮಾಡಿಕೊಂಡು, ಒಂದು ವರ್ಷ ಪ್ರೊಬೆಷನರಿಗಳನ್ನಾಗಿ ತರಬೇತಿ ನೀಡಲು ಉದ್ದೇಶಿಸಿದ್ದೇವೆ. ಲೋಕಸಭಾ ಚುನಾವಣೆಯ ಬಳಿಕ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮಣ್ಣ ತಿಳಿಸಿದರು.

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಕಡೆಯೂ ದಲ್ಲಾಳಿಗಳ ಹಾವಳಿ ಹೆಚ್ಚಿದೆ. ನಾವು ಅಧಿಕಾರ ವಹಿಸಿಕೊಂಡ ಬಳಿಕ ವ್ಯವಸ್ಥೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ವಿಧಾನಸೌಧದವರೆಗೂ ದಲ್ಲಾಳಿಗಳ ಹಾವಳಿಯಿದೆ ಎಂದರು.

ಕುವೆಂಪು ಪ್ರತಿಷ್ಠಾನಕ್ಕೆ 25 ಲಕ್ಷ ರೂ.ದೇಣಿಗೆ

ಬಿಎಂಟಿಸಿ ವತಿಯಿಂದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಕ್ಕೆ 25 ಲಕ್ಷ ರೂ.ಗಳ ದೇಣಿಗೆ ಚೆಕ್ ಅನ್ನು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ವಿಧಾನಸೌಧದಲ್ಲಿ ಸಾಹಿತಿ ಡಾ.ಹಂಪ ನಾಗರಾಜಯ್ಯ ಹಾಗೂ ಡಾ.ಕಮಲಾ ಹಂಪನಾ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News