ಸಾರ್ವಜನಿಕರ ಆರೋಗ್ಯ ಕಾಪಾಡುವುದು ಸರಕಾರದ ಕರ್ತವ್ಯ: ಸಚಿವ ಶಿವಾನಂದ ಪಾಟೀಲ್

Update: 2019-03-05 14:34 GMT

ಬೆಂಗಳೂರು, ಮಾ.5: ಸಾರ್ವಜನಿಕರ ಆರೋಗ್ಯ ಕಾಪಾಡುವುದು ಸರಕಾರಗಳ ಕರ್ತವ್ಯವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗಂಭೀರವಾದ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ಮಂಗಳವಾರ ನಗರದ ಇಂದಿರಾನಗರ ಬಳಿಯ ಸರ್.ಸಿ.ವಿ.ರಾಮನ್ ಸರಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಸರಕಾರಗಳ ಪಾತ್ರ ಅತ್ಯಂತ ಪ್ರಮುಖವಾದುದು. ಈ ನಿಟ್ಟಿನಲ್ಲಿ ಆರೋಗ್ಯ ಕಾಪಾಡಲು ಬೇಕಾದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ನಗರ ಪ್ರದೇಶ-ಗ್ರಾಮಾಂತರ ಪ್ರದೇಶ ಎಂಬ ಭೇದ-ಭಾವವಿಲ್ಲದೆ ಎಲ್ಲರಿಗೂ ಒಂದೇ ರೀತಿಯ ಆರೋಗ್ಯ ಸೇವೆ ನೀಡಲು ಸರಕಾರ ಪ್ರಯತ್ನ ಮಾಡುತ್ತಿದೆ. ಸರಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಹೆಚ್ಚು ಶ್ರಮಿಸಬೇಕು. ಆ ಮೂಲಕ ಎಲ್ಲರೂ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದರು.

ಎಲ್ಲ ಕಡೆಗಳಲ್ಲಿ ಹೆಚ್ಚು ಆರೋಗ್ಯ ಮೇಳಗಳನ್ನು ಸಂಘಟಿಸಬೇಕು. ವರ್ಷಕ್ಕೆ ಎರಡು-ಮೂರು ಬಾರಿಯಾದರೂ ಆರೋಗ್ಯ ಮೇಳ ನಡೆಯಬೇಕಿದೆ ಎಂದ ಅವರು, ನಗರದಲ್ಲಿ ಹರಡುತ್ತಿರುವ ಎಚ್1ಎನ್1 ಬಗ್ಗೆ ಎಲ್ಲರೂ ಜಾಗೃತಿ ವಹಿಸಬೇಕು. ಈ ಕುರಿತು ವೈದ್ಯರು ಮಾಹಿತಿ ನೀಡಬೇಕು. ಜತೆಗೆ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವೈದ್ಯರು ಕಾರ್ಯೋನ್ಮುಖರಾಗಬೇಕು ಎಂದು ಅವರು ಸಲಹೆ ನೀಡಿದರು.

2015 ರ ಬಳಿಕ ತಜ್ಞ ವೈದ್ಯರು ಸೇರಿದಂತೆ 600 ಮಂದಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಲ್ಲದೆ, ಅಗತ್ಯಕ್ಕೆ ತಕ್ಕಷ್ಟು ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರಕಾರ ತಯಾರಿದೆ. ಚಿಕಿತ್ಸೆಗೆ ಯಾವುದೇ ವೈದ್ಯರ ಕೊರತೆಯಿಲ್ಲದಂತೆ ಕಾಪಾಡಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಸಂಸದ ಪಿ.ಸಿ.ಮೋಹನ್ ಮಾತನಾಡಿ, ಸಿವಿ ರಾಮನ್‌ನಗರ ಸರಕಾರಿ ಆಸ್ಪತ್ರೆ ಕಳೆದ 70 ವರ್ಷಗಳಿಂದ ನಡೆಯದಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರಿಗಾಗಿ ಘೋಷಣೆ ಮಾಡುವ ಎಲ್ಲ ಯೋಜನೆಗಳನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ರಘು, ಡಾ.ಅಶ್ವತ್ಥನಾರಾಯಣ್, ಡಿಎಚ್‌ಇ ಡಾ.ಪ್ರಕಾಶ್, ಡಾ.ರಜನಿ ಸಿದ್ದೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News