ಎನ್‌ಜಿಟಿ ಆದೇಶದ ವಿರುದ್ಧದ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್

Update: 2019-03-05 14:39 GMT

ಬೆಂಗಳೂರು, ಮಾ.5: ಬೆಂಗಳೂರಿನ ಕೆರೆಗಳ ಬಫರ್ ರೆನ್ ವಿಸ್ತರಣೆ ಕುರಿತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‌ಜಿಟಿ) ನೀಡಿದ್ದ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಮಂಗಳವಾರ ಆರ್.ಟಿ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಮಾತ್ರ ಕೆರೆಗಳ ಬಫರ್ ರೆನ್ ಅನ್ನು 75 ಮೀಟರ್ ವರೆಗೆ ವಿಸ್ತರಿಸಬೇಕೆಂದು ಎನ್‌ಜಿಟಿ ಆದೇಶ ನೀಡಿತ್ತು. ಆದರೆ, ಇತರೆ ನಗರಗಳಿಗೆ 15 ರಿಂದ 35 ಮೀಟರ್ ಬಫರ್ ರೆನ್ ಸಾಕೆಂದು ತಿಳಿಸಿತ್ತು ಎಂದರು.

ಬೆಂಗಳೂರಿನ ಕೆರೆಗಳ ಬಫರ್ ರೆನ್ ಅನ್ನು ಮಾತ್ರ 75 ಮೀಟರ್ ಅಳವಡಿಸಿಕೊಳ್ಳುವಂತೆ ಸೂಚಿಸಿ ಎನ್‌ಜಿಟಿ ನೀಡಿದ್ದ ಆದೇಶವನ್ನು ಪಾಲನೆ ಮಾಡಲು ಮುಂದಾದರೆ, ನಗರದಲ್ಲಿ 36 ಸಾವಿರಕ್ಕೂ ಹೆಚ್ಚು ಮನೆಗಳನ್ನು ಒಡೆದು ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ಪರಮೇಶ್ವರ್ ಹೇಳಿದರು.

ಈ ಹಿನ್ನೆಲೆಯಲ್ಲಿ ಎನ್‌ಜಿಟಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಇಂದು ನ್ಯಾಯಾಲಯವು ನಮ್ಮ ಪರವಾಗಿ ಆದೇಶ ನೀಡಿದೆ. ಆದೇಶದ ಸಂಪೂರ್ಣ ಪ್ರತಿ ಕೈಸೇರಿದ ಬಳಿಕ ಈ ಸಂಬಂಧ ವಿಶ್ಲೇಷಣೆ ನಡೆಸಲಾಗುವುದು ಎಂದು ಅವರು ಹೇಳಿದರು. ವರ್ತೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅಪಾರ್ಟ್‌ಮೆಂಟ್‌ಗಳಲ್ಲೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸುವ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ವರ್ತೂರು ಕೆರೆಯಲ್ಲಿ ನೊರೆ ಸಮಸ್ಯೆ ನೀಗಿಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಎಲ್ಲಾ ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಆದರೂ ಕೆಲ ಅಪಾರ್ಟ್‌ಮೆಂಟ್‌ಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೆರೆ ಸಂರಕ್ಷಣೆಗಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಅಪಾರ್ಟ್‌ಮೆಂಟ್‌ಗಳಲ್ಲಿ ಕಟ್ಟುನಿಟ್ಟಾಗಿ ಅಳವಡಿಸಲು ಸೂಚಿಸಲಾಗುತ್ತದೆ. ಜೊತೆಗೆ, ಆ ಭಾಗದಲ್ಲಿ ಎರಡು ಎಕರೆ ಪ್ರದೇಶದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ನಿರ್ಮಾಣ ಕಾರ್ಯವು ವೇಗವಾಗಿ ನಡೆಯುತ್ತಿದೆ ಎಂದು ಪರಮೇಶ್ವರ್ ಹೇಳಿದರು.

ಈ ಭಾಗದಲ್ಲಿ ರಾಸಾಯನಿಕಯುಕ್ತ ನೀರು ಹರಿಯದಂತೆ ಎಚ್ಚರಿಕೆ ವಹಿಸುವುದು ಹಾಗೂ ಕೊಳಚೆ ನೀರು ಹರಿಸಲು ಪಕ್ಕದಲ್ಲೇ ಕಾಲುವೆ ನಿರ್ಮಾಣ ಕಾರ್ಯ ಕೂಡ ಪೂರ್ಣಗೊಳಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News