ಇನ್ನೊಂದು ಉಗ್ರದಾಳಿ ಎದುರಿಸಲು ಭಾರತ ಸಕಲ ಸನ್ನದ್ಧ: ಅಧಿಕಾರಿಗಳು

Update: 2019-03-05 15:39 GMT

ಹೊಸದಿಲ್ಲಿ,ಮಾ.5: ಉಗ್ರರು ಇನ್ನೊಮ್ಮೆ ದಾಳಿ ನಡೆಸಿದರೆ ಅದನ್ನು ಎದುರಿಸಲು ಭಾರತ ಸಕಲ ರೀತಿಯಲ್ಲೂ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಮಧ್ಯೆ ಉಗ್ರರನ್ನು ಸದೆಬಡಿಯಲು ಪಾಕಿಸ್ತಾನ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತ ಒತ್ತಡ ಹೇರುವುದನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.

ಭಾರತದೊಂದಿಗೆ ವಾಯು ಸಂಘರ್ಷಕ್ಕಿಳಿದ ಪಾಕಿಸ್ತಾನ ಎಫ್-16 ಯುದ್ದವಿಮಾನಗಳನ್ನು ಬಳಸಿತ್ತು ಎಂಬುದಕ್ಕೆ ಈಗಾಗಲೇ ಅಮೆರಿಕಕ್ಕೆ ಸಾಕ್ಷಿಗಳನ್ನು ಒದಗಿಸಲಾಗಿದ್ದು, ಅಮೆರಿಕ ಈ ಪ್ರಕರಣದ ತನಿಖೆ ನಡೆಸುತ್ತಿದೆ ಎಂಬ ವಿಶ್ವಾಸವನ್ನು ಭಾರತೀಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಬಾಲಕೋಟ್ ದಾಳಿ ನಂತರ ಉಗ್ರವಾದ ವಿಷಯದಲ್ಲಿ ಭಾರತ ಪಾಕಿಸ್ತಾನದ ಮೇಲೆ ಗರಿಷ್ಠ ಒತ್ತಡ ಹೇರುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಕೋಟ್‌ನಲ್ಲಿ ಜೈಶೆ ಮುಹಮ್ಮದ್ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ ಪಶ್ಚಿಮ ಭಾಗದ ತನ್ನ ವಾಯುನೆಲೆಗಳಲ್ಲಿ ಅತ್ಯಂತ ಕಟ್ಟೆಚ್ಚರದಿಂದ ಇರುವಂತೆ ಭಾರತೀಯ ವಾಯುಪಡೆಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತದ ದಾಳಿಗೆ ಉತ್ತರವಾಗಿ ಫೆಬ್ರವರಿ 27ರಂದು ಪಾಕಿಸ್ತಾನ ಕಾಶ್ಮೀರದಲ್ಲಿರುವ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ವಿಫಲ ಯತ್ನ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News