ಬೆಂಗಳೂರು ನಗರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಬದ್ಧ: ಸಿಎಂ ಕುಮಾರಸ್ವಾಮಿ

Update: 2019-03-05 16:02 GMT

ಬೆಂಗಳೂರು, ಮಾ.5: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬೆಂಗಳೂರು ನಗರದ ಜನತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸದಾ ಬದ್ಧವಾಗಿರುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳವಾರ ನಗರದ ಮೋದಿ ಗಾರ್ಡನ್ ಬಳಿ ಆಯೋಜಿಸಿದ್ದ ನಮ್ಮ ಮೆಟ್ರೋ ಯೋಜನೆ ಎರಡನೇ ಹಂತದಲ್ಲಿ ಬರುವ ವೆಲ್ಲಾರ ಜಂಕ್ಷನ್ ಮತ್ತು ಮಹಾತ್ಮಗಾಂಧಿ ರಸ್ತೆಯಲ್ಲಿ ಸುರಂಗ ಮಾರ್ಗ ನಿಲ್ದಾಣಗಳ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆರ್.ಟಿ.ನಗರದ ಬಳಿ ಒಂದು ಕಿ.ಮೀ.ಸುತ್ತಾಡಲು ಈ ಬಾಗದ ಜನರು 7-8 ಕಿ.ಮೀ.ಸುತ್ತಾಡಿಕೊಂಡು ಬರಬೇಕಾಗಿತ್ತು. ಹೀಗಾಗಿ, ಕಾರ್ಮಿಕರು ಸೇರಿದಂತೆ ನಾಗರಿಕರಿಗೆ ಇದು ತೊಂದರೆಯಾಗುತ್ತಿತ್ತು. ಹೀಗಾಗಿ, ಮಧ್ಯಭಾಗದಲ್ಲಿದ್ದ ರಕ್ಷಣಾ ಇಲಾಖೆಯ ಭೂಮಿಯನ್ನು ಸುರಂಗ ಮಾರ್ಗ ನಿರ್ಮಾಣಕ್ಕೆ ಬಿಟ್ಟುಕೊಡಲಾಗಿದ್ದು, ರಕ್ಷಣಾ ಸಚಿವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನಮ್ಮ ಮೈತ್ರಿ ಸರಕಾರದಲ್ಲಿ ಜನರಿಗಾಗಿ ಅಗತ್ಯವಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧವಿದ್ಧೇವೆ. ಅಗತ್ಯವಾದ ಸಾರಿಗೆ ಸೌಲಭ್ಯ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಎಲ್ಲದಕ್ಕೂ ಅಗತ್ಯ ಸಹಕಾರ ನೀಡುತ್ತೇವೆ. ಈಗಾಗಲೇ ಮೊದಲ ಹಂತದ ಮೆಟ್ರೋ ಸಂಚಾರ ಮಾಡುತ್ತಿದ್ದು, ಇನ್ನೊಂದೆರಡು ವರ್ಷದಲ್ಲಿ ಎರಡನೇ ಹಂತದ ಮೆಟ್ರೋ ರೈಲು ಸಂಚರಿಸಲಿದೆ. ಅದರ ಜತೆಗೆ, ಸಬರ್ಬನ್ ರೈಲೂ ಸಂಚಾರ ಮಾಡಲಿದೆ ಎಂದು ಅವರು ಹೇಳಿದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ನಗರದಲ್ಲಿ ಇಂದು 100 ಕೋಟಿ ರು. ವೆಚ್ಚದಲ್ಲಿ ಚಾಲನೆ ನೀಡಿರುವ 12 ಯೋಜನೆಗಳನ್ನು ಶೀಘ್ರವೇ ಸಾರ್ವಜನಿಕ ಸೇವೆಗೆ ಅರ್ಪಿಸಲಾಗುವುದು. ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮೊದಲ ಬಾರಿ ರಕ್ಷಣಾ ಸಚಿವಾಲಯಕ್ಕೆ ಸೇರಿದ ಜಾಗ ನೀಡಿದ್ದರು. ಎರಡನೇ ಬಾರಿ ರಕ್ಷಣಾ ಇಲಾಖೆಗೆ ಸೇರಿದ 55 ಸಾವಿರ ಚದರ ಮೀಟರ್ ಸ್ಥಳ ನೀಡಿರುವುದು ಸ್ವಾಗತಾರ್ಹ ಎಂದರು.

ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಹೊರ ರಾಜ್ಯ ಹಾಗೂ ದೇಶಗಳಿಂದ ಜನ ಬರುತ್ತಿದ್ದಾರೆ. ಹೀಗಾಗಿ, ಇಲ್ಲಿ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದ್ದು, ಅದೊಂದು ದೊಡ್ಡ ಸವಾಲಾಗಿದೆ. ಜೊತೆಗೆ ನಗರದ ಗತಕಾಲದ ವೈಭವವನ್ನು ವಾಪಸ್ ತರುವ ಕೆಲಸವನ್ನು ಮಾಡಲಾಗುತ್ತಿದೆ. ಬೆಂಗಳೂರು ಅಭಿವೃದ್ಧಿಗೆ ಪ್ರಸಕ್ತ ವರ್ಷದಲ್ಲಿ 8015 ಕೋಟಿ ರೂ.ಗಳನ್ನು ಬಿಬಿಎಂಪಿಗೆ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ದೇಶದ ಎಲ್ಲ ರಾಜ್ಯಗಳನ್ನೂ ಸಮವಾಗಿ ಕಾಣುತ್ತಿದೆ. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ನಾವು ಆ ರಾಜ್ಯಕ್ಕೆ ಸ್ಪಂದಿಸುತ್ತೇವೆ. ರಕ್ಷಣಾ ಇಲಾಖೆಗೆ ಸೇರಿದ ಸ್ಥಳದಿಂದ ತೊಂದರೆಯಾಗುತ್ತಿದೆ ಎಂದು ಸಂಸದರು ನನ್ನ ಗಮನಕ್ಕೆ ತಂದಿದ್ದರು. ಈ ಸಂಬಂಧ ಆಗಸ್ಟ್‌ನಲ್ಲಿ ಸಭೆ ಮಾಡಿ ಚರ್ಚಿಸಿದ್ದೆವು. ಈಗ ಪ್ರತಿಫಲ ಸಿಕ್ಕಿದೆ.

-ನಿರ್ಮಲಾ ಸೀತರಾಮನ್, ಕೇಂದ್ರ ರಕ್ಷಣಾ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News