ಸಿದ್ಧಾಂತವೇ ಅಪರಾಧ ಎನ್ನುವ ದೊಡ್ಡ ವರ್ಗ ಸಾಹಿತ್ಯ ವಲಯದಲ್ಲಿದೆ: ಬರಗೂರು ರಾಮಚಂದ್ರಪ್ಪ

Update: 2019-03-05 16:28 GMT

ಬೆಂಗಳೂರು, ಮಾ. 5: ಅಂಬೇಡ್ಕರ್‌ ವಾದ, ಸಾಮಾಜಿಕ ಸಿದ್ಧಾಂತ ಒಳಗೊಂಡಂತೆ ಸಿದ್ಧಾಂತಗಳನ್ನು ಅನುಸರಿಸುವುದೇ ಅಪರಾಧ ಎಂದು ಪರಿಗಣಿಸುವ ಒಂದು ದೊಡ್ಡ ವರ್ಗವೇ ಸಾಹಿತ್ಯ ವಲಯದಲ್ಲಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಕೃತಿ ಪ್ರಕಾಶನ ಮತ್ತು ಜನ ಪ್ರಕಾಶನ ಆಯೋಜಿಸಿದ್ದ ಪ್ರಕಾಶ್ ಕೊಡಗನೂರು ಬರೆದಿರುವ ‘ಏಟ್ಸ್ ಮತ್ತು ನಾನು’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಿದ್ಧಾಂತವನ್ನು ಒಂದು ಅಪರಾಧ ಎಂಬಂತೆ ನೋಡುವ ಒಂದು ವರ್ಗವಿದೆ. ಒಂದು ಸಿದ್ಧಾಂತಕ್ಕೆ ಬದ್ಧವಾಗಿದ್ದರೆ ಅದು ಅಪರಾಧವೇ? ರಾಜಕರಣ, ಧರ್ಮ ಹಾಗೂ ಸಾಹಿತ್ಯದಲ್ಲಿ ಸಿದ್ಧಾಂತಗಳಿವೆ. ಅದು ನಮ್ಮನ್ನು ಆಳುತ್ತಾ ಅಥವಾ ಅದನ್ನು ನಾವು ಅರಗಿಸಿಕೊಂಡಿದ್ದೇವಾ ಎಂಬುದು ಮುಖ್ಯ. ಅರಗಿಸಿಕೊಂಡಿರುವವರು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುತ್ತಾರೆ ಎಂದು ತಿಳಿಸಿದರು.

ಸಿದ್ಧಾಂತಗಳು ನಮ್ಮ ಬದುಕಿನ ತತ್ವವನ್ನು ಸಾರುತ್ತವೆ. ಅದು ನಮ್ಮನ್ನು ಕಟ್ಟಿ ಹಾಕುತ್ತ ಅಥವಾ ನಮಗೆ ಪ್ರೇರಣೆ ಆಗುತ್ತಾ ಎಂಬುದು ಮುಖ್ಯ. ಸಮಾಜವಾದ, ಅಂಬೇಡ್ಕರ್‌ವಾದ, ಮಾರ್ಕ್ಸ್‌ವಾದ ಬೇಡವೆಂದರೂ ನಮ್ಮಲ್ಲಿ ಅವು ಜಾಗೃತವಾಗಿರುತ್ತವೆ. ಹಿಂದು, ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮ ಆಧರಿತ ಸಿದ್ಧಾಂತಗಳಿಂದ ನಾವು ಏನನ್ನು ಸ್ವೀಕರಿಸಬೇಕು, ಏನನ್ನು ಗ್ರಹಿಸಬೇಕು ಎಂಬ ವಿವೇಚನೆ ನಮ್ಮಲ್ಲಿರಬೇಕು ಎಂದು ಹೇಳಿದರು.

ಸಿದ್ಧಾಂತಗಳು ಬೇಡ ಅನ್ನುವವರೇ ಒಂದು ಸಿದ್ಧಾಂತ. ಸಿದ್ಧಾಂತಗಳನ್ನು ಪಾಲಿಸುವವರು ಪ್ರಜ್ಞಾಪೂರ್ವಕವಾಗಿ ಘೋಷಿಸಿಕೊಳ್ಳುತ್ತಾರೆ. ಹೀಗೆ ಘೋಷಿಸಿಕೊಳ್ಳದವರು ಅಪ್ರಜ್ಞಾಪೂರ್ವಕವಾಗಿ ಪಾಲಿಸುತ್ತಿರುತ್ತಾರೆ. ಕುವೆಂಪು ಅವರು ಎಲ್ಲೂ ಸಮಾಜವಾದಿ ಎಂದು ಘೋಷಿಸಿಕೊಂಡಿಲ್ಲ. ಆದರೂ ಅವರ ಬರಹಗಳಲ್ಲಿ ಸಮಾಜವಾದಿ ಆಶಯಗಳಿವೆ ಎಂದು ನೆನಪಿಸಿದರು.

ಅಲ್ಲದೆ, ಪಂಪನ ಕಾಲದಲ್ಲಿ ಸಮಾಜವಾದ, ಲೋಹಿಯಾವಾದ, ಅಂಬೇಡ್ಕರ್‌ವಾದ ಏನೂ ಇರಲಿಲ್ಲ. ಆದರೂ ಮನುಷ್ಯ ಜಾತಿ ತಾನೊಂದೆ ವಲಂ ಎಂದು ಹೇಳಿದ್ದ. ಏಕೆ ಹೇಳಿದ್ದ, ಮನುಷ್ಯ ಜಾತಿ ಒಂದೇ ಎಂದು ಹೇಳಿದರಾ ಹಿಂದೆ ಜಾತಿ- ಧರ್ಮದ ವಿನಾಶದ ಆಶಯವಿತ್ತು. ಅದು ಪಂಪನ ಸಿದ್ಧಾಂತ ಆಗಬಹುದು. ಹಾಗಾದರೆ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಹೇಳಿದ್ದನ್ನು ಏನೆಂದು ಕರೆಯೋಣ ಎಂದು ಪ್ರಶ್ನಿಸಿದರು.

ರಾಜ್ಯದ ರಾಜಧಾನಿಯನ್ನು ಹೊರತು ಪಡಿಸಿಯೂ ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲೂ ಸೃಜನಾತ್ಮಕ ಬರಹಗಾರರಿದ್ದಾರೆ. ಯುವ ಸಮುದಾಯದಲ್ಲಿ ಬರವಣಿಗೆಯು ಕಡಿಮೆಯಾಗಿದೆ ಎನ್ನುತ್ತಿದ್ದಾರೆ. ಆದರೆ, ಯುವ ಬರಹಗಾರರು ಅನೇಕರಿದ್ದಾರೆ. ಅವರಿಗೆ ನಿರ್ದಿಷ್ಟ ದಿಕ್ಸೂಚಿಯಿಲ್ಲವಷ್ಟೇ. ಅಲ್ಲದೆ, ಉತ್ತರ ಕರ್ನಾಟಕದ ಯಾವುದೋ ಪ್ರದೇಶದಲ್ಲಿ ಪುಸ್ತಕ ಬಿಡುಗಡೆಯಾದರೆ, ಅದು ಎಲ್ಲರನ್ನೂ ತಲುಪುವುದಿಲ್ಲ ಎಂಬ ಬೆಳವಣಿಗೆಯಿಂದ ಸಾಹಿತ್ಯ ಸೊರಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಡಾ.ಬೈರಮಂಗಲ ರಾಮೇಗೌಡ, ಡಾ.ರಾಜಪ್ಪ ದಳವಾಯಿ, ಪ್ರಕೃತಿ ಪ್ರಕಾಶನದ ಮಾಲಕ ಎಚ್.ಎನ್.ಗೋಪಾಲಕೃಷ್ಣ ಹಾಗೂ ಜನ ಪ್ರಕಾಶನದ ಮಾಲಕ ಬಿ.ರಾಜಶೇಖರ ಮೂರ್ತಿ ಉಪಸ್ಥಿತರಿದ್ದರು.

ಸಿದ್ಧಾಂತಗಳನ್ನು ಅನುಸರಿಸುವವರು ಕನಿಷ್ಠರೂ, ಸಿದ್ಧಾಂತವನ್ನು ಅನುಸರಿಸದೇ ತಟಸ್ಥವಾಗಿರುವವರು ಗರಿಷ್ಠರೂ ಎಂಬುದು ತಪ್ಪು. ಅಲ್ಲದೆ, ಸಿದ್ಧಾಂತಗಳಿಂದ ದೂರವಿರುವವರದೂ ಒಂದು ಸಿದ್ಧಾಂತ.

-ಬರಗೂರು ರಾಮಚಂದ್ರ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News