ಏರ್ ಶೋ ವೇಳೆ ಬೆಂಕಿಗಾಹುತಿಯಾದ ವಾಹನಗಳಿಗೆ ಶೀಘ್ರ ಪರಿಹಾರ ಒದಗಿಸಲು ಕ್ರಮ: ಎಂ.ಬಿ.ಪಾಟೀಲ್

Update: 2019-03-05 16:32 GMT

ಬೆಂಗಳೂರು, ಮಾ.5: ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ವೇಳೆ ಬೆಂಕಿ ಅವಘಡದಿಂದ ಬೆಂಕಿಗಾಹುತಿಯಾದ ವಾಹನಗಳಿಗೆ ಶೀಘ್ರವೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಕಿಗಾಹುತಿಯಾದ ಕಾರು ಮಾಲಕರಿಗೆ ಸೂಕ್ತ ಪರಿಹಾರ ನೀಡಲು ಆರ್‌ಟಿಒ ಅಧಿಕಾರಿಗಳು ಹಾಗೂ ವಿಮಾ ಕಂಪೆನಿಗಳ ಮುಖ್ಯಸ್ಥರ ಜೊತೆ ಇಂದು ಸಂಜೆ ಸಭೆ ನಡೆಸುತ್ತಿದ್ದೇನೆ. ಹೀಗಾಗಿ ವಾಹನ ಮಾಲಕರು ಆತಂಕಪಡುವ ಅಗತ್ಯವಿಲ್ಲವೆಂದು ತಿಳಿಸಿದರು.

ಒಟ್ಟು 277 ವಾಹನಗಳು ಏರ್ ಶೋ ವೇಳೆ ಬೆಂಕಿಗಾಹುತಿಯಾಗಿವೆ. ಇದರಲ್ಲಿ 251 ವಾಹನಗಳು ಶೇ.100ರಷ್ಟು ಸಂಪೂರ್ಣ ಸುಟ್ಟು ಹೋದರೆ, 67 ವಾಹನಗಳು ಗುರುತು ಹಿಡಿಯಲಾಗದಷ್ಟು ಕರಕಲಾಗಿವೆ. ಈ ವಾಹನಗಳನ್ನು ಖರೀದಿಸಿದ ವರ್ಷ, ತಿಂಗಳಿನ ಆಧಾರದಲ್ಲಿ ಪತ್ತೆಹಚ್ಚಿ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು.

ಓರಿಯಂಟಲ್ ವಿಮಾ ಕಂಪೆನಿಯಲ್ಲಿ 13 ವಾಹನ ಮಾಲಕರು ವಿಮೆ ಮಾಡಿಸಿದ್ದರು. ಅದರಲ್ಲಿ 11ಕಾರುಗಳಿಗೆ ಶೇ.100ರಷ್ಟು ವಿಮೆ ಪರಿಹಾರವನ್ನು ಒದಗಿಸಲಾಗಿದೆ. ಎರಡು ಕಾರು ಮಾಲಕರು ವಿಮೆ ಮಾಡಿಸದ ಕಾರಣ ರದ್ದು ಮಾಡಲಾಗಿದೆ. ಇದೇ ಮಾದರಿಯಲ್ಲಿ ಉಳಿದ ವಿಮೆ ಕಂಪೆನಿಗಳಿಂದ ಕಾರು ಮಾಲಕರಿಗೆ ಶೀಘ್ರವೆ ಪರಿಹಾರ ಒದಗಿಸಿಕೊಡಲಾಗುವುದು ಎಂದು ಅವರು ಹೇಳಿದರು.

ಓರಿಯಂಟಲ್ ಕಂಪೆನಿ ವತಿಯಿಂದ ಒರಿಸ್ಸಾ ನಿವಾಸಿ ರಮಾಕಾಂತ ಮಹಾಪಾತ್ರರವರ ಮಹೇಂದ್ರ ಎಕ್ಸ್‌ಯುವಿ ಕಾರಿಗೆ 15.95ಲಕ್ಷ ರೂ. ಹಾಗೂ ಚಿತ್ರದುರ್ಗದ ಜಯಮ್ಮ ಅವರ ಮಾರುತಿ ಕಾರಿಗೆ 3.95ಲಕ್ಷ ರೂ.ಪರಿಹಾರದ ಚೆಕ್‌ನ್ನು ಸಚಿವ ಎಂ.ಬಿ.ಪಾಟೀಲ್ ವಿತರಿಸಿದರು.

ವಿಮೆ ಮಾಡಿಸದ ವಾಹನ ಮಾಲಕರಿಗೆ ವಿಮಾ ಕಂಪೆನಿಗಳಿಂದ ಪರಿಹಾರ ಸಿಗುವುದಿಲ್ಲ. ಆದರೆ, ಮಾನವೀಯ ದೃಷ್ಟಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯಧನ ಒದಗಿಸಲು ಈಗಾಗಲೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಅವರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.

-ಎಂ.ಬಿ.ಪಾಟೀಲ್, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News