ರಕ್ಷಣಾ ಇಲಾಖೆಯೇ ಕಳವಾಗಿದೆಯೇ?

Update: 2019-03-07 04:31 GMT

ಪುಲ್ವಾಮ ದಾಳಿಯ ಬಳಿಕ ಪಾಕಿಸ್ತಾನ ಭಾರತದ ಗಡಿಯಲ್ಲಿ ನಡೆದ ಬೆಳವಣಿಗೆಯನ್ನು ಉಲ್ಲೇಖಿಸುತ್ತಾ ಪ್ರಧಾನಿ ನರೇಂದ್ರ ಮೋದಿ ‘ರಫೇಲ್ ಯುದ್ಧ ವಿಮಾನಗಳನ್ನು’ ಸ್ಮರಿಸಿ ಕೊಂಡರು. ‘ರಫೇಲ್ ಯುದ್ಧ ವಿಮಾನಗಳಿದ್ದಿದ್ದರೆ ನಾನು ಪಾಕಿಸ್ತಾನಕ್ಕೆ ಸೂಕ್ತ ಉತ್ತರ ಕೊಡುತ್ತಿದ್ದೆ. ವಿರೋಧ ಪಕ್ಷಗಳು ರಫೇಲ್ ವಿರುದ್ಧ ಸಂಚು ನಡೆಸುತ್ತಿವೆೆ’ ಎಂಬ ಹಸಿ ಸುಳ್ಳನ್ನು ಸಾರ್ವಜನಿಕವಾಗಿ ಆಡಿದರು. ರಫೇಲ್ ಯುದ್ಧ ವಿಮಾನ ಒಪ್ಪಂದ ಪ್ರಕ್ರಿಯೆ ಆರಂಭವಾಗಿದ್ದೇ ಯುಪಿಎ ಆಡಳಿತದ ಕಾಲದಲ್ಲಿ. ರಫೇಲ್ ಯುದ್ಧ ವಿಮಾನ ಯುಪಿಎ ಸರಕಾರದ ಕನಸಾಗಿತ್ತು. ಆದರೆ ಆ ಯುದ್ಧ ವಿಮಾನ ಭಾರತಕ್ಕೆ ತಲುಪಲು ತಡವಾಗುವುದರ ಹಿಂದಿರುವವರು ನರೇಂದ್ರ ಮೋದಿ. ಒಪ್ಪಂದದಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನ್ನು ಹೊರ ಹಾಕಿ ಆ ಸ್ಥಾನಕ್ಕೆ ತನ್ನ ಮಿತ್ರ ಅಂಬಾನಿಯ ರಿಲಯನ್ಸ್ ಕಂಪೆನಿಯನ್ನು ಅಕ್ರಮವಾಗಿ ತಂದರು. ಈ ಅಕ್ರಮವೇ ಇಂದು, ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬರುವುದಕ್ಕೆ ಬಹುದೊಡ್ಡ ಅಡ್ಡಿಯಾಗಿದೆ. ಇದರಲ್ಲಿ ಅಕ್ರಮ ನಡೆದಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

‘ತನಿಖೆಯ ಅಗತ್ಯವಿಲ್ಲ’ ಎಂದು ಸುಪ್ರೀಂಕೋರ್ಟ್ ಮೂಲಕ ಹೇಳಿಸಿದ್ದಾರೆ. ಆದರೆ ಇದೀಗ ಸುಪ್ರೀಂಕೋರ್ಟ್ ಅದೇ ಪ್ರಕರಣವನ್ನು ಮರು ವಿಚಾರಣೆಗೆ ಕೈಗೆತ್ತಿಕೊಂಡಿದೆ. ರಫೇಲ್ ವ್ಯವಹಾರದಲ್ಲಿ ಅಕ್ರಮ ನಡೆದಿಲ್ಲ ಎಂದಿದ್ದರೆ ತನಿಖೆ ನಡೆಸುವುದಕ್ಕೆ ಪ್ರಧಾನಿ ಮೋದಿಯವರಿಗೆ ಇದ್ದ ಅಡ್ಡಿಯಾದರೂ ಏನು? ರಕ್ಷಣಾ ಇಲಾಖೆಗೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ, ಈ ಪ್ರಕರಣದಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳಳುವುದು ಪ್ರಧಾನಿಯ ಅಗತ್ಯವಾಗಿದೆ. ಈ ಹಿಂದೆ ಹವಾಲಾ ಪ್ರಕರಣದಲ್ಲಿ ತಮ್ಮ ಹೆಸರು ಬಂದಾಗ ಹಿರಿಯ ಬಿಜೆಪಿ ನಾಯಕ ಅಡ್ವಾಣಿಯವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿದ್ದರು. ರಫೇಲ್ ಹಗರಣದಲ್ಲಿ ಕನಿಷ್ಠ ತನಿಖೆಗೆ ಆದೇಶ ನೀಡಿ, ಆ ಸಂಸ್ಥೆಯ ಮೂಲಕವೇ ತನ್ನ ನಿರಪರಾಧಿತ್ವವನ್ನು ಸಾಬೀತು ಮಾಡುವುದು ಮೋದಿಯ ವೈಯಕ್ತಿಕ ಅಗತ್ಯವಾಗಿದೆ. ಆದರೆ ತನಿಖೆ ನಡೆಸುವುದು ಪಕ್ಕಕ್ಕಿರಲಿ, ಸಿಬಿಐ ಈ ಕುರಿತಂತೆ ಆಸಕ್ತಿ ತೋರಿಸುತ್ತಿರುವುದನ್ನು ಗಮನಿಸಿ, ಸಿಬಿಐ ಸಂಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದರು.

ಇದೀಗ ಮರು ವಿಚಾರಣೆಯ ಸಂದರ್ಭದಲ್ಲಿ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಇನ್ನೊಂದು ಮಹತ್ವದ ಅಂಶ ಬೆಳಕಿಗೆ ಬಂದಿದೆ. ಖರೀದಿಗೆ ಸಂಬಂಧಿಸಿ ದಾಖಲೆ ಪತ್ರಗಳು ರಕ್ಷಣಾ ಇಲಾಖೆಯಿಂದ ಕಳವಾಗಿದೆ ಎಂದು ಸರಕಾರ ಸುಪ್ರೀಂಕೋರ್ಟ್‌ನ ಮುಂದೆ ಹೇಳಿಕೆ ನೀಡಿದೆ. ಈ ಹೇಳಿಕೆ ಅದೆಷ್ಟು ಬೇಜವಾಬ್ದಾರಿಯದ್ದೆಂದರೆ, ಸರಕಾರ ದೇಶದ ರಕ್ಷಣೆಯ ವಿಷಯವನ್ನು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಂಡಿದೆ ಎನ್ನುವುದನ್ನು ಹೇಳುತ್ತಿದೆ. ಒಂದೆಡೆ, ‘ಈ ದಾಖಲೆ ಪತ್ರಗಳು ಅತ್ಯಂತ ರಹಸ್ಯ ಹಾಗೂ ಪ್ರತ್ಯೇಕತೆಯಿಂದ ಕೂಡಿರುವುದು. ದೇಶದ ಭದ್ರತಾ ಹಿತದೃಷ್ಟಿಯಿಂದ ಅವುಗಳನ್ನು ಬಹಿರಂಗಪಡಿಸುವಂತಿಲ್ಲ. ಈ ದಾಖಲೆಗಳನ್ನು ಪ್ರಕಟಿಸಿರುವ ‘ದಿ ಹಿಂದೂ’ ಪತ್ರಿಕೆಯ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಸರಕಾರ ವಾದಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಇಂತಹ ಮಹತ್ವದ ದಾಖಲೆಯನ್ನೇ ರಕ್ಷಿಸಲು ಸಾಧ್ಯವಾಗದ ರಕ್ಷಣಾ ಇಲಾಖೆ, ಈ ದೇಶವನ್ನು ಹೇಗೆ ರಕ್ಷಿಸೀತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ‘ದೇಶವು ಸುರಕ್ಷಿತ ಕೈಗಳಲ್ಲಿದೆ’ ಎಂದು ಇತ್ತೀಚೆಗೆ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು. ಸುರಕ್ಷಿತ ಕೈಗಳಲ್ಲಿ ದೇಶವಿದ್ದಿದ್ದರೆ, ರಕ್ಷಣಾ ಇಲಾಖೆಯ ದಾಖಲೆಗಳು ಹೇಗೆ ಕಳವಾದವು. ರಕ್ಷಣಾ ಇಲಾಖೆಯೊಳಗೇ ಕಳ್ಳರನ್ನು ಇಟ್ಟುಕೊಂಡ ಸರಕಾರ, ಈ ದೇಶವನ್ನು ಹೇಗೆ ರಕ್ಷಿಸೀತು?

ಇಷ್ಟಕ್ಕೂ ಆ ಗುಪ್ತ ದಾಖಲೆಗಳು ಕಳವಾಗುವುದರಿಂದ ಆಗುವ ಲಾಭ ಯಾರಿಗೆ? ಎನ್ನುವ ಪ್ರಶ್ನೆಗೆ ಉತ್ತರವನ್ನು ಪಡೆದುಕೊಂಡರೆ ಇದನ್ನು ಕದ್ದವರು ಯಾರು ಎನ್ನುವುದನ್ನು ನಾವು ಸ್ಪಷ್ಟ ಮಾಡಿಕೊಳ್ಳಬಹುದು. ಈ ಮಹತ್ವದ ದಾಖಲೆಗಳನ್ನು ಆಧರಿಸಿದ ವರದಿಗಳು ದಿ ಹಿಂದೂ ಪತ್ರಿಕೆಯಲ್ಲಿ ಸರಣಿಯಾಗಿ ಪ್ರಕಟವಾದವು. ಈ ದಾಖಲೆಗಳು ರಫೇಲ್ ಹಗರಣದಲ್ಲಿ ಅಕ್ರಮಗಳಾಗಿರುವುದನ್ನು ಸಾಕ್ಷಿ ಸಮೇತ ಬಹಿರಂಗಪಡಿಸುತ್ತವೆ. ಅಂದರೆ ಈ ದಾಖಲೆಗಳು ಸರಕಾರಕ್ಕೆ ಅಥವಾ ಒಪ್ಪಂದದೊಳಗೆ ಶಾಮೀಲಾಗಿರುವ ಅಂಬಾನಿ ಮತ್ತು ಪ್ರಧಾನಿಯವರಿಗೆ ವಿರುದ್ಧವಾಗಿದೆ ಎಂದಂತಾಯಿತು. ಈ ವರೆಗೆ ರಫೇಲ್ ಒಪ್ಪಂದದಲ್ಲಿ ಅಕ್ರಮಗಳಾಗಿಲ್ಲ ಎನ್ನುತ್ತಿದ್ದ ಸರಕಾರ, ಈ ದಾಖಲೆಗಳಲ್ಲಿರುವ ವಿಷಯಗಳ ಕುರಿತಂತೆ ಏನನ್ನು ಹೇಳುತ್ತದೆ? ಮೊತ್ತ ಮೊದಲು ಆ ದಾಖಲೆಗಳು ಕೇಳುವ ಪ್ರಶ್ನೆಗಳಿಗೆ ನರೇಂದ್ರ ಮೋದಿ ಸರಕಾರ ಉತ್ತರಿಸಬೇಕಾಗಿದೆ.

ಆದರೆ ವಿಪರ್ಯಾಸವೆಂದರೆ, ತನ್ನ ತಪ್ಪನ್ನು ಮುಚ್ಚಿ ಹಾಕಲು, ಹಿಂದೂ ಪತ್ರಿಕೆಯ ಮೇಲೆ ಸರಕಾರ ಬೆರಳು ತೋರಿಸುತ್ತಿದೆ. ದಾಖಲೆಗಳು ಪ್ರತಿವಾದಿಗಳ ಕೈ ಸೇರಿರುವುದು ಗೌಪ್ಯತಾ ಕಾಯ್ದೆಯ ಉಲ್ಲಂಘನೆ ಎಂದು ಹೇಳಿ ಪ್ರತಿವಾದಿಗಳ ಬಾಯಿ ಮುಚ್ಚಿಸಲು ಹೊರಟಿದೆ. ಬಹುಶಃ ದಿ ಹಿಂದೂ ಪತ್ರಿಕೆ ಈ ದಾಖಲೆಗಳನ್ನು ಪ್ರಕಟಿಸದೇ ಇದ್ದರೆ, ಇಂದು ಸುಪ್ರೀಂಕೋರ್ಟ್ ಮುಂದೆ ಸರಕಾರ ದಾಖಲೆ ಕಳವಾಗಿರುವ ವಿಷಯವನ್ನೇ ಮುಚ್ಚಿಟ್ಟು ಬಿಡುತ್ತಿತ್ತು. ಈ ದಾಖಲೆಗಳು ಪ್ರಧಾನಿಯ ವಿರುದ್ಧ ಸಾಕ್ಷ ಹೇಳುವುದರಿಂದ, ಕಳವಾದರೆ ಅದರ ಲಾಭ ಮತ್ತೆ ಪ್ರಧಾನಿಗೇ ಆಗಿರುತ್ತದೆ. ಆದುದರಿಂದ ಕದ್ದವರು ಯಾರು? ಎಂಬ ಪ್ರಶ್ನೆ ಬಂದಾಗ ಮತ್ತೆ ಜನರ ಅನುಮಾನ ಮೋದಿಯತ್ತಲೇ ತಿರುಗುತ್ತದೆ. ಮಹತ್ವದ ದಾಖಲೆ ರಕ್ಷಣಾ ಇಲಾಖೆಯೊಳಗಿಂದಲೇ ಕಳವಾಗಿರುವುದು ಈ ದೇಶದ ರಕ್ಷಣಾ ಇಲಾಖೆಯ ಘನತೆಗೆ ಭಾರೀ ಧಕ್ಕೆ ತಂದಿದೆ.

ಪುಲ್ವಾಮ ದಾಳಿಗೆ ನಮ್ಮ ನೂರಾರು ಸೈನಿಕರು ಮೃತಪಟ್ಟಾಗ ಭದ್ರತಾ ವೈಫಲ್ಯಕ್ಕೆ ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕಾಗಿತ್ತು. ಆದರೆ ನೈತಿಕ ಹೊಣೆಯನ್ನು ಹೊತ್ತು ಯಾರೂ ರಾಜೀನಾಮೆ ನೀಡಲಿಲ್ಲ. ಇದಾದ ಬಳಿಕ ಗಡಿಯಲ್ಲಿ ಆದ ಅವಾಂತರಗಳು, ನಮ್ಮ ಯೋಧನ ಸೆರೆ, ಬಿಡುಗಡೆ ಇವೆಲ್ಲವೂ ದೇಶದ ಆಂತರಿಕ ಭದ್ರತೆಯ ಮೇಲೆ ತೀವ್ರ ಘಾಸಿಯನ್ನುಂಟು ಮಾಡಿದವು. ಇದೀಗ ಭಾರೀ ಹಗರಣವೆಂದು ಗುರುತಿಸಲ್ಪಟ್ಟಿರುವ ರಫೇಲ್ ಒಪ್ಪಂದದ ಮಹತ್ವದ ದಾಖಲೆಗಳೇ ಕಳವಾಗಿವೆ ಎನ್ನುವ ಮೂಲಕ ರಫೇಲ್‌ನಲ್ಲಿ ಭಾರೀ ಅವ್ಯವಹಾರವಾಗಿದೆ ಎನ್ನುವುದನ್ನು ನ್ಯಾಯಾಲಯದ ಮುಂದೆ ಸರಕಾರ ಪರೋಕ್ಷವಾಗಿ ಒಪ್ಪಿಕೊಂಡಂತೆಯೇ ಆಗಿದೆ. ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾದವರು ರಕ್ಷಣಾ ಸಚಿವರಲ್ಲ, ಪ್ರಧಾನಿ ಮೋದಿ. ಯಾಕೆಂದರೆ ಈ ಹಗರಣದಲ್ಲಿ ಪ್ರಧಾನಿ ಮೋದಿಯವರೇ ನೇರ ಭಾಗಿಯಾಗಿದ್ದಾರೆ. ಕಳವಾಗಿರುವುದು ಕೇವಲ ದಾಖಲೆಗಳಲ್ಲ, ನಮ್ಮ ರಕ್ಷಣಾ ಇಲಾಖೆಯೇ ಕಳವಾಗಿರುವ ಗಂಭೀರ ಪ್ರಕರಣ ಇದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News