ಅಯೋಧ್ಯೆ: ಬೇಕಾಗಿರುವುದು ಸಂಧಾನವಲ್ಲ, ಸಂವಿಧಾನ

Update: 2019-03-08 06:01 GMT

ಆರ್ಥಿಕವಾಗಿ, ಸಾಮಾಜಿಕವಾಗಿ ಈ ದೇಶವನ್ನು ಹಲವು ವರ್ಷಗಳಷ್ಟು ಹಿಂದೆ ತಳ್ಳಿದ ಮೋದಿ ನೇತೃತ್ವದ ಸರಕಾರ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಅಭಿವೃದ್ಧಿಯ ಮಾತುಗಳನ್ನು ಪಕ್ಕಕ್ಕಿಟ್ಟು ಭಾವನಾತ್ಮಕವಾಗಿ ಜನರನ್ನು ಮುಖಾಮುಖಿಯಾಗಲು ಮುಂದಾಗಿದೆ. ಪುಲ್ವಾಮ ದುರಂತ ಮತ್ತು ಅದರ ಮುಂದಿನ ಬೆಳವಣಿಗೆಗಳೂ ಬಿಜೆಪಿಯ ಆ ಆಟದ ಭಾಗವಾಗಿತ್ತು. ಆರಂಭದಲ್ಲಿ ಯೋಧರ ಮೃತದೇಹಗಳನ್ನು ಮುಂದಿಟ್ಟು ಜನರನ್ನು ಕೆರಳಿಸಿತು. ಬಳಿಕ, ಅದಕ್ಕೆ ಸೇಡು ತೀರಿಸಿಕೊಂಡೆವು ಎಂಬ ಸುಳ್ಳು ಹೇಳಿಕೆಗಳನ್ನು ಮುಂದಿಟ್ಟು ಜನರನ್ನು ಸಂತೈಸುವ ನಾಟಕವಾಡಿತು. ಆದರೆ ಬಿಜೆಪಿಯ ಈ ಪ್ರಯತ್ನವೂ ‘ಅಭಿನಂದನ್ ಅವರು ಪಾಕಿಸ್ತಾನದ ಸೆರೆಯಾಳಾಗುವ’ ಮೂಲಕ ಭಾಗಶಃ ಕೈಕೊಟ್ಟಿತು. ರಾಜತಾಂತ್ರಿಕತೆಯ ಮೂಲಕ ವಿಶ್ವದ ಮುಂದೆ ಪಾಕಿಸ್ತಾನ ಗುರುತಿಸಿಕೊಂಡಿತು. ಇದು ಭಾರತದ ಪಾಲಿಗೆ ಭಾರೀ ಹಿನ್ನಡೆಯೇ ಆಗಿದೆ. 300 ಉಗ್ರರನ್ನು ಕೊಂದಿದ್ದೇವೆ ಎಂಬ ಮೋದಿಯ ಹೇಳಿಕೆಯೂ ಹುಸಿಯೆನ್ನುವುದು ಇದೀಗ ಸಾಬೀತಾಗಿದೆ.

ಈ ಎಲ್ಲ ಗದ್ದಲಗಳಲ್ಲಿ ರಫೇಲ್ ಹಗರಣ ಮುಚ್ಚಿ ಹೋಗಬಹುದು ಎಂದು ಅವರು ಭಾವಿಸಿದ್ದರೆ, ಆ ಭೂತ ಮತ್ತೆ ಗವಾಕ್ಷಿಯ ಮೂಲಕ ವಕ್ಕರಿಸಿದೆ. ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟ ಮಹತ್ವದ ದಾಖಲೆಯೇ ರಕ್ಷಣಾ ಇಲಾಖೆಯಿಂದ ಕದ್ದು ಹೋಗಿರುವುದನ್ನು ಸರಕಾರ ನ್ಯಾಯಾಲಯದ ಮುಂದೆ ಒಪ್ಪಿಕೊಳ್ಳಬೇಕಾದಂತಹ ಅನಿವಾರ್ಯ ಸ್ಥಿತಿ ಇದೀಗ ನಿರ್ಮಾಣವಾಗಿದೆ. ರಫೇಲ್ ಹಗರಣ ಸರಕಾರಕ್ಕೆ ತೀವ್ರ ಮುಜುಗರವನ್ನು ಸೃಷ್ಟಿಸುತ್ತಿದೆ. ಬಹುಶಃ ಇದರಿಂದ ಜನರ ಗಮನವನ್ನು ಪಕ್ಕಕ್ಕೆ ಸರಿಸಲು ಸರಕಾರಕ್ಕೆ ಅಯೋಧ್ಯೆ ತೀರ್ಪು ಕಟ್ಟ ಕಡೆಯ ಅಸ್ತ್ರವಾಗಿದೆ. ಈ ಕಾರಣದಿಂದಲೇ ನ್ಯಾಯಾಲಯ ಅಯೋಧ್ಯೆ ಭೂಮಿಯ ಕುರಿತಂತೆ ತಳೆಯುವ ನಿಲುವನ್ನು ಇಡೀ ದೇಶ ಕುತೂಹಲದಿಂದ ಕಾಯುತ್ತಿದೆ. ತೀರ್ಪು ಯಾರ ಪರವಾಗಿ ಬೇಕಾದರೂ ಬರಲಿ, ಬಿಜೆಪಿ ಈ ಬಾರಿ ಅದನ್ನು ತನಗೆ ಪೂರಕವಾಗಿ ಪರಿವರ್ತಿಸಿಕೊಳ್ಳಲಿದೆ. ರಾಮಜನ್ಮಭೂಮಿ ಪರವಾಗಿ ಬಂದರೆ, ಅದನ್ನು ವಿಜಯೋತ್ಸವದ ರೀತಿಯಲ್ಲಿ ಆಚರಿಸಿ ದೇವಾಲಯ ನಿರ್ಮಾಣವನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಬಹುದು. ವಿರುದ್ಧವಾಗಿ ಬಂದರೆ, ಸಂಘಪರಿವಾರ ಕಾರ್ಯಕರ್ತರನ್ನು ಬಳಸಿ ದೇಶಾದ್ಯಂತ ನ್ಯಾಯ ವ್ಯವಸ್ಥೆಯ ವಿರುದ್ಧವೇ ಕಾರ್ಯಾಚರಣೆಗಿಳಿಯಬಹುದು.

ನ್ಯಾಯಾಲಯ ಈ ಪ್ರಕರಣದಲ್ಲಿ ಸಂಧಾನಕ್ಕೆ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದೆ. ಇದನ್ನೊಂದು ಭಾವನಾತ್ಮಕ ವಿಷಯವಾಗಿ ಗುರುತಿಸಲು ನ್ಯಾಯಾಲಯ ಆಸಕ್ತಿ ಹೊಂದಿದೆ. ಒಡೆತನ ವಿವಾದವನ್ನು ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ಅದು ಭಾವಿಸಿದೆ. ಇಲ್ಲಿ ನ್ಯಾಯಾಲಯ ಒಂದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ನ್ಯಾಯಾಲಯ ಆಶಿಸುವ ‘ಹೃದಯ ಮನಸ್ಸುಗಳ ಗಾಯ’ ಮಾಯುವುದಕ್ಕಿರುವ ದಾರಿ ಯಾವುದು? ಇಷ್ಟಕ್ಕೂ ಗಾಯವಾದುದು ಯಾವಾಗ, ಯಾರಿಂದ, ಯಾರಿಗೆ? ಎನ್ನುವುದು ಮುಖ್ಯ ಪ್ರಶ್ನೆ. ದೇವಸ್ಥಾನವನ್ನು ಬಾಬರ್ ಒಡೆದು ಅಲ್ಲಿ ಬಾಬರಿ ಮಸೀದಿ ನಿರ್ಮಿಸಿದ ಎನ್ನುವುದನ್ನು ನ್ಯಾಯಾಲಯ ನಂಬುತ್ತದೆಯೇ? ಅದಕ್ಕೆ ಬೇಕಾದ ಸಾಕ್ಷಗಳು ನ್ಯಾಯಾಲಯಕ್ಕೆ ದೊರಕಿವೆಯೇ? ಅಥವಾ ಸಂವಿಧಾನಕ್ಕೆ ವಂಚಿಸಿ, ಬಾಬರಿ ಮಸೀದಿ ಕಟ್ಟಡವನ್ನು ಕೆಡವಿದ ಕ್ರಮವನ್ನೇ ಹೃದಯಕ್ಕಾಗಿರುವ ಗಾಯ ಎಂದು ನ್ಯಾಯಾಲಯ ಹೇಳುತ್ತಿದೆಯೇ? ಈ ಬಗ್ಗೆ ನ್ಯಾಯಾಲಯಕ್ಕೆ ಗೊಂದಲವಿದೆ. ಒಂದು ರೀತಿಯಲ್ಲಿ ಅಡ್ಡ ಗೋಡೆಯ ಮೇಲೆ ದೀಪವಿಟ್ಟು ಮಾತನಾಡಿದೆ. ಗಾಯವಾಗಿರುವುದು ಸಂವಿಧಾನದ ಹೃದಯಕ್ಕೆ ಮತ್ತು ಸಂವಿಧಾನವನ್ನು ಎತ್ತಿ ಹಿಡಿಯುವುದೇ ಆ ಗಾಯವನ್ನು ವಾಸಿ ಮಾಡಲು ನ್ಯಾಯಾಲಯದ ಮುಂದಿರುವ ಏಕೈಕ ವಿಧಾನ. ಸಂಧಾನ ಒಂದು ವಂಚನೆಯ ಪ್ರಕರಣಕ್ಕೆ ತಾತ್ಕಾಲಿಕವಾದ ಪರಿಹಾರವನ್ನು ನೀಡಬಹುದು. ಆದರೆ ಅದು ನ್ಯಾಯವನ್ನು ನೀಡಲಾರದು ಎನ್ನುವುದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಯದ ವಿಷಯವಲ್ಲ.

 ಸರಿ, ನ್ಯಾಯಾಲಯ ಹೇಳುವಂತೆ ಸಂಧಾನದಿಂದಲೇ ಮುಗಿಸೋಣ. ಸಂಧಾನ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬಹುದೇ? ಒಂದು ವೇಳೆ, ಮುಸ್ಲಿಮರು ಆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲು ಅನುಮತಿ ನೀಡಿದರೆಂದೇ ಇಟ್ಟುಕೊಳ್ಳೋಣ. ಆಗ ಸಮಸ್ಯೆ ಸಂಪೂರ್ಣ ಮುಗಿಯುತ್ತದೆ ಎಂದು ನ್ಯಾಯಾಲಯ ಭಾವಿಸುತ್ತದೆಯೇ? ಬಾಬರನು ದೇವಾಲಯವನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸಿದ ಎನ್ನುವ ಕಪೋಲಕಲ್ಪಿತವಾದ ವಾದ ಅಯೋಧ್ಯೆಗೆ ಸಂಬಂಧಿಸಿ ಮಾತ್ರವೇ ಮಂಡಿಸಿರುವುದಲ್ಲ. ಕಾಶಿ, ಮಥುರಾ ಮೊದಲಾದೆಡೆ ಇರುವ ಮಸೀದಿಗಳ ಕುರಿತಂತೆಯೂ ಸಂಘಪರಿವಾರ ಇದೇ ವಾದವನ್ನು ಮಂಡಿಸಿದೆ. ಒಂದು ವೇಳೆ, ಅಯೋಧ್ಯಾ ಪ್ರಕರಣ ಮುಗಿದರೆ, ರಾಜಕೀಯ ನಡೆಸಲು, ಕೋಮುಗಲಭೆ ಎಬ್ಬಿಸಲು ಇರಲಿ ಎಂದು ಈಗಾಗಲೇ ಹಲವು ಮಸೀದಿಗಳ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ. ಆದುದರಿಂದ, ಸಂಧಾನದ ಹೆಸರಿನಲ್ಲಿ ನ್ಯಾಯವನ್ನು ನ್ಯಾಯಾಲಯವೇ ಕಗ್ಗೊಲೆಗೈದರೆ ಅದು ಇನ್ನಷ್ಟು ಕಗ್ಗೊಲೆಗಳಿಗೆ ಕಾರಣವಾಗುತ್ತದೆ.

ಸಂಧಾನವೆನ್ನುವುದು ಪರೋಕ್ಷವಾಗಿ ನ್ಯಾಯಾಲಯಕ್ಕೆ ವಂಚಿಸಿ ಬಾಬರಿ ಮಸೀದಿ ಕೆಡವಿರುವುದನ್ನು ಸಮರ್ಥಿಸಿದಂತೆ. ಜೊತೆಗೆ, ಇನ್ನಷ್ಟು ಮಸೀದಿಗಳನ್ನು ಕೆಡವಲು ನ್ಯಾಯಾಲಯವೇ ಸಮ್ಮತಿಸಿದಂತೆ.

ಮುಖ್ಯವಾಗಿ ಇದು ಭಾವನಾತ್ಮಕ ವಿಷಯವೇ ಅಲ್ಲ. ರಾಮಮಂದಿರ ಕಟ್ಟುವವರಾರೂ ರಾಮನ ಆದರ್ಶಗಳನ್ನು ಹೊಂದಿದವರಲ್ಲ. ರಾಮನ ಪರಮಭಕ್ತ ಗಾಂಧೀಜಿಯನ್ನು ಕೊಂದ ಸಮುದಾಯವನ್ನು ಪ್ರತಿನಿಧಿಸುವವರು. ಅವರಿಗಿದು ರಾಜಕೀಯ ವಿಷಯ ಮಾತ್ರ. ಇದು ನ್ಯಾಯಾಲಯಕ್ಕೆ ತಿಳಿಯದ ಸತ್ಯವೇನೂ ಅಲ್ಲ. ಮಂದಿರದ ವಿರುದ್ಧ ತೀರ್ಪು ನೀಡಿದರೆ ಗಲಭೆಯಾಗಬಹುದು ಎಂಬಿತ್ಯಾದಿ ಹೊರಗಿನ ಒತ್ತಡದ ಆಧಾರದಲ್ಲಿ ನ್ಯಾಯಲಯ ತನ್ನ ತೀರ್ಪು ನೀಡುವ ಅಗತ್ಯವಿಲ್ಲ. ಸದ್ಯಕ್ಕೆ ಚುನಾವಣೆಗೆ ಮುನ್ನ ಈ ಬಗ್ಗೆ ಅದು ತೀರ್ಪು ನೀಡದೇ ಇರುವುದೇ ಅತ್ಯುತ್ತಮ ತೀರ್ಪು. ಚುನಾವಣೆಯ ಬಳಿಕ ಸಂವಿಧಾನವನ್ನು ಮಾನದಂಡವಾಗಿಟ್ಟುಕೊಂಡು ನ್ಯಾಯವನ್ನು ನೀಡುವುದು ಸುಪ್ರೀಂಕೋರ್ಟ್‌ಗಿರುವ ಏಕೈಕ ದಾರಿ. ದುಷ್ಕರ್ಮಿಗಳಿಗೆ ಹೆದರಿ ಸಂವಿಧಾನವನ್ನು ಅಮಾನತಿನಲ್ಲಿಟ್ಟರೆ, ಮುಂದೊಂದು ದಿನ ಇದೇ ದುಷ್ಕರ್ಮಿಗಳಿಗಾಗಿ ಸಂವಿಧಾನವನ್ನು ವಜಾಗೊಳಿಸಬೇಕಾದ ದಿನಗಳು ಬರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News