ಗಂಡ ಸತ್ತು ಒಂದೆರಡು ತಿಂಗಳಾಗಿಲ್ಲ: ಸುಮಲತಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ರೇವಣ್ಣ

Update: 2019-03-08 13:54 GMT

ಹೊಸದಿಲ್ಲಿ, ಮಾ. 8: ಪತಿ ಅಂಬರೀಶ್ ತೀರಿಕೊಂಡು ಇನ್ನೂ ಒಂದೆರಡು ತಿಂಗಳುಗಳೂ ಕಳೆದಿಲ್ಲ. ಆಗಲೇ ನಟಿ ಸುಮಲತಾ ಅವರು ರಾಜಕೀಯಕ್ಕೆ ಏಕೆ ಬರಬೇಕಿತ್ತು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ಪ್ರಶ್ನಿಸಿದ್ದಾರೆ. ಸಚಿವ ರೇವಣ್ಣರ ಈ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಶುಕ್ರವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಟ ಅಂಬರೀಶ್ ಅವರು ತೀರಿಕೊಂಡಾಗ ಮನೆಯವರೆ ತೀರಿಕೊಂಡಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಂಬನಿ ಮಿಡಿದಿದ್ದರು. ಆದರೆ, ಚುನಾವಣೆ ಸ್ಪರ್ಧೆ ಬಗ್ಗೆ ಸುಮಲತಾ ಅವರು ಸವಾಲು ಹಾಕುವುದರೊಂದಿಗೆ ಜೆಡಿಎಸ್ ಅನ್ನು ಕೆಣಕಿದ್ದಾರೆ ಎಂದು ಆರೋಪಿಸಿದರು.

ನಟಿ ಸುಮಲತಾ ಅವರ ಸವಾಲನ್ನು ಸ್ವೀಕರಿಸುವುದು ಜೆಡಿಎಸ್ ಪಕ್ಷ ಹಾಗೂ ನಮಗೂ ಅನಿವಾರ್ಯ. ಮೊದಲು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಆಲೋಚನೆ ಇರಲಿಲ್ಲ. ಕೃತಜ್ಞತೆ ಇರದ ಸುಮಲತಾ ಅವರ ಸವಾಲನ್ನು ಸ್ವೀಕರಿಸಿ ಸ್ಪರ್ಧೆಯ ವಿಚಾರ ಮಾಡಿದ್ದೇವೆ ಎಂದು ರೇವಣ್ಣ ಸ್ಪಷ್ಟನೆ ನೀಡಿದರು.

ಹೇಳಿಕೆ ಸಮರ್ಥನೆ: ಹಿಂದೂ ಸಂಸ್ಕೃತಿಯ ಪ್ರಕಾರ ಗಂಡ ಸತ್ತವರು ಕೆಲವು ದಿನ ಮನೆಯಿಂದ ಹೊರಬರಬಾರದು ಎಂಬ ನಿಯಮವಿದೆ. ಹೀಗಾಗಿ ನಾನು ನಟಿ ಸುಮಲತಾ ಅವರ ಸ್ಪರ್ಧೆಯ ಬಗ್ಗೆ ಪ್ರಕ್ರಿಯೆ ನೀಡಿದ್ದೇನೆ ಎಂದು ರೇವಣ್ಣ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಕ್ಷಮೆ ಕೇಳೋಕೆ ಹುಚ್ಚು ಹಿಡಿದಿದೆಯೇ?: ನಾನು ನನ್ನ ಹೇಳಿಕೆಗೆ ಕ್ಷಮೆ ಕೇಳಲ್ಲ. ಕ್ಷಮೆ ಕೇಳೋಕೆ ಹುಚ್ಚು ಹಿಡಿದಿದೆಯೇ? ಎಂದು ಪ್ರಶ್ನಿಸಿದ ರೇವಣ್ಣ, ನಿಖಿಲ್ ಸ್ಪರ್ಧಿಸಬೇಕೆಂಬುದು ಮಂಡ್ಯದ ಜನರ ಮತ್ತು ಕಾರ್ಯಕರ್ತರ ಅಭಿಪ್ರಾಯ. ಮಂಡ್ಯಕ್ಕೆ ನಿಖಿಲ್ ಕೊಡುಗೆ ಏನು ಎಂಬ ಪ್ರಶ್ನೆಯನ್ನು ಕೇಳೋದಾದರೆ, ಸುಮಲತಾ ಅವರು ಮಂಡ್ಯಕ್ಕೆ ಏನು ಮಾಡಿದ್ದಾರೆ ಹೇಳಲಿ ಎಂದು ಕಿಡಿಕಾರಿದರು.

ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸಬೇಡಿ. ಕೆಟ್ಟ ಭಾವನೆಯಿಂದ ಹೇಳಿಕೆ ನೀಡಿಲ್ಲ. ಸುಮಲತಾ ಹಿಂದೆ ಯಾರಿದ್ದಾರೆಂಬುದನ್ನು ಸಮಯ ಬಂದಾಗ ಹೇಳುತ್ತೇನೆ ಎಂದ ಅವರು, ಪ್ರಜ್ವಲ್ ಅವರನ್ನು ಹಾಸನದಿಂದ ಸ್ಪರ್ಧಿಸಲು ಪಕ್ಷದ ವರಿಷ್ಠ ದೇವೇಗೌಡ ಅವರು ಸೂಚಿಸಿದ್ದಾರೆ. ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡಲಿ ಎಂಬುದು ನಮ್ಮ ಆಶಯವಾಗಿತ್ತು ಎಂದರು.

ನಾನು 1978ರಿಂದಲೂ ದೇವೇಗೌಡರ ಹಿಂದೆ ಚೀಲಹೊತ್ತು ತಿರುಗಿದ್ದೇನೆ. ನನಗೂ ರಾಜಕಾರಣ ಗೊತ್ತು. ಸುಮಲತಾ ಇದುವರೆಗೆ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಈಗ ರಾಜಕೀಯದಲ್ಲಿ ನಟನೆ ಮಾಡಲು ಬಂದಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡವೆಂದು ನಾನು ಹೇಳಿಲ್ಲ. ಅವರು ಇನ್ನೂ ನಾಲ್ಕು ಚುನಾವಣೆಗಳಲ್ಲಿ ಸ್ಪರ್ಧಿಸಲಿ ಎಂದು ಪರೋಕ್ಷ ವಾಗ್ದಾಳಿ ನಡೆಸಿದರು.

ಗೌಡರು ಸ್ಪರ್ಧಿಸುತ್ತಾರೆ

ದೇಶದಲ್ಲಿ ನಮ್ಮದೊಂದೇ ಅಪ್ಪ-ಮಕ್ಕಳ ಪಕ್ಷವೇ? ಈಗ ಮೊಮ್ಮಕ್ಕಳನ್ನು ಸ್ಪರ್ಧೆಗೆ ಇಳಿಸುತ್ತಿರುವುದು ತಪ್ಪೇ? ಪ್ರಜ್ವಲ್ ಹಾಸನದಿಂದ ಸ್ಪರ್ಧಿಸಿದರೆ ದೇವೇಗೌಡರು ಬೇರೆ ಕಡೆಯಿಂದ ಸ್ಪರ್ಧಿಸುತ್ತಾರೆ.

-ಎಚ್.ಡಿ.ರೇವಣ್ಣ, ಲೋಕೋಪಯೋಗಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News