ಮಹಿಳಾ ದಿನಾಚರಣೆ: ಹೋರಾಟಗಾರ್ತಿ ಸುಧಾ ಭಾರದ್ವಾಜ್ ಗೆ 'ಹಾರ್ವರ್ಡ್ ಲಾ ಸ್ಕೂಲ್' ಗೌರವ

Update: 2019-03-08 10:21 GMT

ಪುಣೆ, ಮಾ. 8 : ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ 'ಹಾರ್ವರ್ಡ್ ಲಾ ಸ್ಕೂಲ್' ಈ ವರ್ಷ ತಾನು  ಆಯೋಜಿಸಿರುವ ಭಾವಚಿತ್ರ ಪ್ರದರ್ಶನದ ಮೂಲಕ ಗೌರವ ಸಲ್ಲಿಸಿರುವ  21 ಧೀಮಂತ ಮಹಿಳಾ ಸಾಧಕಿಯರ ಪೈಕಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಬಂಧಿತರಾಗಿರುವ ಹಾಗೂ ಪ್ರಸಕ್ತ ಪುಣೆಯ ಕಾರಾಗೃಹದಲ್ಲಿರುವ ಖ್ಯಾತ ವಕೀಲೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್  ಕೂಡ ಸೇರಿದ್ದಾರೆ.

ಸಲಿಂಗ ಕಾಮವನ್ನು ಅಪರಾಧೀಕರಣಗೊಳಿಸುವ ಸೆಕ್ಷನ್ 377ರ ಕೆಲ ಭಾಗಗಳ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದ ವಕೀಲೆ ಮೇನಕಾ ಗುರುಸ್ವಾಮಿಗೆ ಕೂಡ ಹಾರ್ವರ್ಡ್ ಗೌರವ ಸಂದಿದೆ.

ಜಗತ್ತಿನಾದ್ಯಂತ ಕಾನೂನು ಮತ್ತು ನೀತಿ (ಲಾ ಆ್ಯಂಡ್ ಪಾಲಿಸಿ) ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಮಹಿಳೆಯರ ಭಾವಚಿತ್ರಗಳನ್ನು ಈ ಪ್ರದರ್ಶನದಲ್ಲಿರಿಸಿ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಈ ಮಹಿಳಾ ಸಾಧಕಿಯರನ್ನು ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಆರಿಸಿದ್ದಾರೆ.

''ಇಲ್ಲಿ ಕಾಣಿಸಿರುವ ಮಹಿಳೆಯರು, ಅವರು ಹೈಕೋರ್ಟಿನಲ್ಲಿ, ಶಾಲಾ ತರಗತಿಯಲ್ಲಿ ಕುಳಿತಿರಬಹುದು ಯಾ ರಸ್ತೆಗಿಳಿದಿರಬಹುದು,  ತಮ್ಮ ಆಯಾಯ ಕ್ಷೇತ್ರಗಳಲ್ಲಿ ಧೀಮಂತ ದನಿಗಳಾಗಿದ್ದಾರೆ'' ಎಂದು ಸಂಸ್ಥೆ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News