ಪ್ಯಾರಸಿಟಮಲ್ ಬದಲು ನೋವು ನಿವಾರಕ ಮಾತ್ರೆ ನೀಡಿದ ವೈದ್ಯರು: 2 ಶಿಶುಗಳು ಮೃತ್ಯು

Update: 2019-03-08 11:00 GMT

ಹೈದರಾಬಾದ್, ಮಾ.8: ಮಕ್ಕಳಿಗೆ ನೀಡಿದ ಗುಳಿಗೆ ಬದಲಾದ ಪರಿಣಾಮ ಎರಡು ಶಿಶುಗಳು ಸಾವನ್ನಪ್ಪಿದ್ದು, 3 ಶಿಶುಗಳ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ನಂಪಳ್ಳಿಯ ಅರ್ಬನ್ ಹೆಲ್ತ್ ಸೆಂಟರ್ ನಲ್ಲಿ 92 ಶಿಶುಗಳಿಗೆ ಜ್ವರ ನಿವಾರಣೆಗಾಗಿ ನೀಡಲಾಗುವ ಪ್ಯಾರಸಿಟಮಲ್ ಬದಲು ವಯಸ್ಕರಿಗೆ ನೋವು ನಿವಾರಕವಾಗಿ ನೀಡಲಾಗುವ ಟ್ರೆಮೆಡಾಲ್ ಔಷಧವನ್ನು ನೀಡಿದ ಪರಿಣಾಮ ಎರಡು ಶಿಶುಗಳು ಸಾವಿಗೀಡಾಗಿವೆ. 30ಕ್ಕೂ ಅಧಿಕ ಶಿಶುಗಳನ್ನು ಇಲ್ಲಿನ ನಿಲೋಫರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರು ಶಿಶುಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಈ ವೈದ್ಯಕೀಯ ನಿರ್ಲಕ್ಷ್ಯದ ಘಟನೆಯ ಬಗ್ಗೆ ತನಿಖೆ ನಡೆಸಲು ಸರಕಾರ ತನಿಖಾ ಸಮಿತಿಯೊಂದನ್ನು ರಚಿಸಿದೆ.

ಪ್ಯಾರಸಿಟಮಾಲ್ ಮತ್ತು ಟ್ರೆಮೆಡಾಲ್ ಔಷಧಿಗಳ ಪ್ಯಾಕೇಜಿಂಗ್ ಒಂದೇ ರೀತಿ ಇದ್ದುದರಿಂದ ಈ ಪ್ರಮಾದ ಸಂಭವಿಸಿದೆ ಎಂದು ಹೇಳಲಾಗಿದೆ.

“ಟ್ರೆಮೆಡಾಲ್ ಪರಿಣಾಮ 48 ಗಂಟೆಗಳ ಕಾಲ ಇರುತ್ತದೆ.  ಒಂದೂವರೆ ತಿಂಗಳು ಪ್ರಾಯದ ಒಂದು ಶಿಶುವನ್ನು  ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಾಗಲೇ ಮೃತಪಟ್ಟಿತ್ತು. ಪೋಸ್ಟ್ ಮಾರ್ಟಂಗೆ ಹೆತ್ತವರಿಗೆ ಮನಸ್ಸು ಮಾಡದೇ ಇದ್ದುದರಿಂದ ಮೃತದೇಹವನ್ನು ದಫನ ಮಾಡಲಾಗಿದೆ. ಅದನ್ನು ಮತ್ತೆ ಹೊರತೆಗೆದು ಪರೀಕ್ಷಿಸಲಾಗುವುದು,'' ಎಂದು ನಿಲೋಫರ್ ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ.ಮುರಳೀಕೃಷ್ಣ ಹೇಳಿದ್ದಾರೆ.

ಸದ್ಯ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಶುಗಳ ಸ್ಥಿತಿ ಸ್ಥಿರವಾಗಿದೆಯೆಂದೂ ಅವರು ಹೇಳಿದ್ದು ಔಷಧಿಯ ಪರಿಣಾಮದಿಂದ ಶಿಶುಗಳು ಹೊರಬರಲು 72 ಗಂಟೆಗಳು ತಗಲಬಹುದು ಎಂದೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News