ಅಯೋಧ್ಯೆ-ಬಾಬರಿ ಮಸೀದಿ ವಿವಾದ ಬಗೆಹರಿಸಲು ನೇಮಕಗೊಂಡ ಸಂಧಾನಕಾರರ ಹಿನ್ನೆಲೆ ಏನು?

Update: 2019-03-08 11:34 GMT
ಜಸ್ಟಿಸ್ ಕಲೀಫುಲ್ಲ,                ಶ್ರೀ ರಾಮ್ ಪಂಚು,                    ರವಿಶಂಕರ್

ಹೊಸದಿಲ್ಲಿ, ಮಾ.8: ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ಸಂಧಾನದ ಮೂಲಕ ಜಸ್ಟಿಸ್ ಎಫ್ ಎಂ ಕಲೀಫುಲ್ಲಾ, ಹಿರಿಯ ವಕೀಲ ಶ್ರೀರಾಮ್ ಪಂಚು ಹಾಗು ಶ್ರೀ ಶ್ರೀ ರವಿಶಂಕರ್ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿ ಎಂಟು ವಾರಗಳೊಳಗಾಗಿ ಪರಿಹರಿಸಬೇಕು ಹಾಗೂ ಸ್ಥಿತಿ ವರದಿಯನ್ನು ನಾಲ್ಕು ವಾರಗಳಲ್ಲಿ ನೀಡಬೇಕೆಂದು ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಇಂದು ಮಹತ್ವದ ತೀರ್ಪು ನೀಡಿದೆ.

ಸಂಧಾನ ಪ್ರಕ್ರಿಯೆಯಲ್ಲಿ ಇನ್ನಷ್ಟು ಜನರನ್ನು ಸೇರಿಸಲು ಈ ಮೂವರು ಸದಸ್ಯರಿಗೆ ಸ್ವಾತಂತ್ರ್ಯವಿದೆ ಎಂದೂ ನ್ಯಾಯಾಲಯ ಹೇಳಿದೆ.

ಜಸ್ಟಿಸ್ ಎಫ್.ಎಂ. ಕಲೀಫುಲ್ಲ: ದಿವಂಗತ ಜಸ್ಟಿಸ್ ಎಂ. ಫಕೀರ್ ಮುಹಮ್ಮದ್ ಅವರ ಪುತ್ರರಾಗಿರುವ 68 ವರ್ಷದ ಕಲೀಫುಲ್ಲ ಅವರು ಆಗಸ್ಟ್ 1975ರಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಸಕ್ರಿಯ ಲೇಬರ್ ಲಾ ಪ್ರಾಕ್ಟೀಸ್ ಕೂಡ ಅವರು  ಮಾಡುತ್ತಿದ್ದರು. 2000ರಲ್ಲಿ ಅವರನ್ನು ಮದ್ರಾಸ್ ಹೈಕೋರ್ಟಿನ ಖಾಯಂ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. ಎಪ್ರಿಲ್ 2, 2012ರಲ್ಲಿ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು.

ಶ್ರೀ ರಾಮ್ ಪಂಚು (69): ಹಿರಿಯ ವಕೀಲರೂ, ಸಂಧಾನಕಾರರೂ ಆಗಿರುವ ಇವರು ಮೀಡಿಯೇಶನ್ ಚೇಂಬರ್ಸ್ ಸ್ಥಾಪಕರಾಗಿದ್ದಾರೆ. ಸಂಧಾನವನ್ನು ಭಾರತದ ನ್ಯಾಯಾಂಗ ವ್ಯವಸ್ಥೆಯ ಭಾಗವನ್ನಾಗಿಸಲು ಪ್ರಮುಖ ಪಾತ್ರ ವಹಿಸಿರುವ ಇವರು 2005ರಲ್ಲಿ ಕೋರ್ಟಿಗೆ ಹೊಂದಿಕೊಂಡ ಪ್ರಥಮ ಸಂಧಾನ ಕೇಂದ್ರ ಸ್ಥಾಪಿಸಿದ್ದರು. ಮಧ್ಯಸ್ಥಿಕೆ ಬಗ್ಗೆ ಎರಡು ಕೃತಿಗಳನ್ನೂ ಅವರು ಬರೆದಿದ್ದಾರೆ. ಸುಪ್ರೀಂ ಕೋರ್ಟ್ ಅವರನ್ನು ಉನ್ನತ ಸಂಧಾನಕಾರ, ಖ್ಯಾತ ತರಬೇತುದಾರ ಎಂದು ಬಣ್ಣಿಸಿದೆ.

ಶ್ರೀ ಶ್ರೀ ರವಿಶಂಕರ್: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ಶ್ರೀ ರವಿಶಂಕರ್ (62) ಆಧ್ಯಾತ್ಮಿಕ ಗುರುವಾಗಿದ್ದು, ಅಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಸಂಧಾನದ ಮೂಲಕ ಪರಿಹರಿಸಬೇಕೆಂದು ಅವರು ಬಹಳ ಸಮಯದಿಂದ ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News