ಬಣ್ಣ ಪಡೆಯುತ್ತಿರುವ ಮಂಡ್ಯದ ರಾಜಕೀಯ

Update: 2019-03-09 05:07 GMT

ಲೋಕಸಭಾ ಚುನಾವಣೆ ಘೋಷಣೆಗೆ ಮುನ್ನವೇ ಮಂಡ್ಯದಲ್ಲಿ ರಾಜಕೀಯ ‘ಬಣ್ಣ’ ಪಡೆದಿದೆ. ಜಾತಿ ಮತ್ತು ಸಿನೆಮಾ ಇಂದು ಜನರ ಭಾವನೆಗಳನ್ನು ಆಳುತ್ತಿವೆ. ಇವರೆಡೂ ಜೊತೆಯಾದರೆ ಏನಾಗಬಹುದೋ ಅದನ್ನು ಜನರು ಮಂಡ್ಯದಲ್ಲಿ ನೋಡುತ್ತಿದ್ದಾರೆ. ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಸುಮಲತಾ ಅನುಕಂಪದ ಅಲೆಯನ್ನು ತನ್ನ ರಾಜಕೀಯ ಪ್ರವೇಶಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆ. ಆದರೆ ಕಾಂಗ್ರೆಸ್ ಸುಮಲತಾ ಅವರಿಗೆ ಟಿಕೆಟ್ ನೀಡುವುದಕ್ಕೆ ಹಿಂಜರಿದಿದೆ. ಕಾಂಗ್ರೆಸ್ ಪಕ್ಷ ಮಂಡ್ಯವನ್ನು ಜೆಡಿಎಸ್ ಪಕ್ಷಕ್ಕೆ ಈಗಾಗಲೇ ಒಪ್ಪಿಸಿದೆ. ಅಂಬರೀಷ್ ಕೊನೆಯ ದಿನಗಳಲ್ಲಿ ಕಾಂಗ್ರೆಸ್‌ಗೆ ನಿಷ್ಠರಾಗಿ ಉಳಿದಿರಲಿಲ್ಲ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿದ್ದರು. ಕಾಂಗ್ರೆಸ್‌ಗೆ ವಿರುದ್ಧವಾಗಿ ಕೆಲಸ ಮಾಡಿದ ಆರೋಪ ಅವರ ಮೇಲಿದೆ. ಈ ಕಾರಣದಿಂದ ಅಂಬರೀಷ್ ಪತ್ನಿ ಸುಮಲತಾಗೆ ಟಿಕೆಟ್ ನೀಡುವುದು ಸ್ವತಃ ಕಾಂಗ್ರೆಸ್‌ಗೂ ಇಷ್ಟವಿದ್ದಂತಿರಲಿಲ್ಲ. ಮಂಡ್ಯವನ್ನು ಜೆಡಿಎಸ್‌ಗೆ ಒಪ್ಪಿಸುವುದರ ಹಿಂದೆ, ಸುಮಲತಾರ ರಾಜಕೀಯ ಪ್ರವೇಶವನ್ನು ತಡೆಯುವ ಹುನ್ನಾರವೂ ಇದೆ. ಆದರೆ ಸುಮಲತಾ ಮಂಡ್ಯದಲ್ಲಿ ಸ್ಪರ್ಧಿಸಿಯೇ ಸಿದ್ಧ ಎಂಬ ಹಟದಲ್ಲಿದ್ದಾರೆ. ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆಗಳು ಇರದೇ ಇರುವುದರಿಂದ ಅವರು ಪಕ್ಷೇತರವಾಗಿ ನಿಲ್ಲುತ್ತಾರೆಯೇ ಅಥವಾ ಬಿಜೆಪಿಯಿಂದ ಸ್ಪರ್ಧಿಸುತ್ತಾರೆಯೇ ಎನ್ನುವುದು ಇನ್ನೂ ಅಂತಿಮವಾಗಿಲ್ಲ.

   ಅಂಬರೀಷ್ ನಟನಾಗಿದ್ದವರಷ್ಟೇ ಅಲ್ಲ, ಜನರೊಂದಿಗೆ ತಳಸ್ತರದ ಸಂಬಂಧವನ್ನು ಇಟ್ಟುಕೊಂಡವರು. ಆ ಕಾರಣದಿಂದಲೇ ಅವರಿಗೆ ಮಂಡ್ಯದ ಮೂಲಕ ರಾಜಕೀಯ ಪ್ರವೇಶ ಸುಲಭವಾಯಿತು. ಆದರೆ ಆ ವರ್ಚಸ್ಸನ್ನು ನಟಿ ಸುಮಲತಾ ಹೊಂದಿಲ್ಲ. ಅಂಬರೀಷ್ ಅವರ ಪತ್ನಿ ಎನ್ನುವ ಒಂದೇ ಹೆಗ್ಗಳಿಕೆಯನ್ನಿಟ್ಟುಕೊಂಡು ಅವರು ಜನರನ್ನು ಮುಖಾಮುಖಿಯಾಗಲು ಮುಂದಾಗಿದ್ದಾರೆ. ಸುಮಲತಾ ಸಿನೆಮಾರಂಗವನ್ನು ತೊರೆದು ಬಹಳಕಾಲವಾಗಿದೆ. ಅಂಬರೀಷ್ ಅವರ ಜೊತೆಗೆ ಸಾರ್ವಜನಿಕವಾಗಿ ಎಂದೂ ಸುಮಲತಾ ಗುರುತಿಸಿಕೊಂಡಿಲ್ಲ. ಜನಸಾಮಾನ್ಯರೊಂದಿಗೆ ಬೆರೆಯುವ ವ್ಯಕ್ತಿತ್ವವೂ ಅವರದಲ್ಲ. ಜಾತಿಯ ಬಲವೂ ಅವರಲ್ಲಿಲ್ಲ. ರಾಜಕೀಯದ ಒಳಸುಳಿಗಳ ಅರಿವೂ ಅವರಿಗಿಲ್ಲ. ಇದೇ ಸಂದರ್ಭದಲ್ಲಿ ದೇವೇಗೌಡ ಕುಟುಂಬ ಮಂಡ್ಯದಲ್ಲಿ ತಳಸ್ತರದಲ್ಲಿ ತನ್ನ ಬೇರನ್ನು ಇಳಿಸಿಕೊಂಡಿದೆ. ಸುಮಲತಾ ಅವರಿಗೆ ಹೇಗೆ ಸಿನೆಮಾ ಹಿನ್ನೆಲೆಯಿದೆಯೋ ದೇವೇಗೌಡರ ಕುಟುಂಬಕ್ಕೂ ಆ ಸಿನೆಮಾ ಹಿನ್ನೆಲೆಯಿದೆ. ಗೌಡರ ಮೊಮ್ಮಕ್ಕಳಾದ ನಿಖಿಲ್ ಮತ್ತು ಪ್ರಜ್ವಲ್ ಈಗಾಗಲೇ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಮಂಡ್ಯದಲ್ಲಿ ಸುಮಲತಾ ಇನ್ನಷ್ಟೇ ಜನರನ್ನು ತಲುಪಲು ಪ್ರಯತ್ನಿಸಬೇಕಾಗಿದೆ. ಆದರೆ ನಿಖಿಲ್ ಈಗಾಗಲೇ ಕಾರ್ಯಕರ್ತರೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ, ದೇವೇಗೌಡರ ಕುಟುಂಬವನ್ನು ಏಕಾಂಗಿಯಾಗಿ ಸುಮಲತಾ ಎದುರಿಸುವುದು ಕಷ್ಟ. ಸುಮಲತಾ ಅವರ ಈ ಏಕಾಂಗಿತನವನ್ನು ಬಿಜೆಪಿ ತನಗೆ ಪೂರಕವಾಗಿ ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಸ್ಪರ್ಧಿಸಬೇಕಾದರೆ ಬಿಜೆಪಿ ಸೇರಲೇಬೇಕಾದಂತಹ ಅನಿವಾರ್ಯ ಸುಮಲತಾ ಅವರಿಗೆ ನಿರ್ಮಾಣವಾಗಿದೆ.

ಇದೇ ಸಂದರ್ಭದಲ್ಲಿ ನಟಿ ಸುಮಲತಾ ಕುರಿತಂತೆ ಜೆಡಿಎಸ್ ಮುಖಂಡ ಎಚ್. ಡಿ. ರೇವಣ್ಣ ಅತ್ಯಂತ ಬೇಜವಾಬ್ದಾರಿಯುತವಾದ ಹೇಳಿಕೆಯನ್ನು ನೀಡಿದ್ದಾರೆ. ‘ಪತಿ ತೀರಿ ಒಂದೆರಡು ತಿಂಗಳೂ ಆಗಿಲ್ಲ, ಆಗಲೇ ಅವರು ರಾಜಕೀಯಕ್ಕೇಕೆ ಬರಬೇಕಾಗಿತ್ತು?’ ಎಂದು ಮಾಧ್ಯಮಗಳ ಮುಂದೆ ಆಡಿದ್ದಾರೆ. ಏನೋ ಬಾಯಿ ತಪ್ಪಿ ಆಡಿರಬಹುದು ಎಂದು ಭಾವಿಸಿ ಇದನ್ನು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಈ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಮಾತ್ರವಲ್ಲ, ‘ಈ ಹೇಳಿಕೆಗಾಗಿ ಕ್ಷಮೆ ಕೇಳುವ ಅಗತ್ಯವೇ ಇಲ್ಲ, ಕ್ಷಮೆ ಕೇಳಲು ಹುಚ್ಚು ಹಿಡಿದಿದೆಯೇ?’ ಎಂದು ಮರು ಪ್ರಶ್ನಿಸಿದ್ದಾರೆ. ಪತಿ ತೀರಿದಾಕ್ಷಣ ಮಹಿಳೆ ಮನೆಯಿಂದ ಹೊರ ಬರಬಾರದು, ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂಬ ಕಾನೂನು ಈ ದೇಶದಲ್ಲಿ ಇಲ್ಲ. ಇದೊಂದು ಸಂವಿಧಾನ ವಿರೋಧಿ, ಮಹಿಳಾ ವಿರೋಧಿ ಹೇಳಿಕೆ. ಪುರುಷನ ಭಂಡ ಮನಸ್ಥಿತಿಗೆ ಇದು ಸಾಕ್ಷಿಯಾಗಿದೆ. ‘ನೀನು ಪತಿಯನ್ನು ಕಳೆದುಕೊಂಡವಳು, ಮನೆಯಲ್ಲೇ ಬಿದ್ದಿರು’ ಎನ್ನುವ ಆದೇಶವನ್ನು ರೇವಣ್ಣ ಪರೋಕ್ಷವಾಗಿ ಸುಮಲತಾ ಅವರಿಗೆ ನೀಡಿದ್ದಾರೆ. ಈ ಹೇಳಿಕೆಯ ವಿರುದ್ಧ ವ್ಯಾಪಕ ಟೀಕೆಗಳು ಹೊರ ಬಿದ್ದಿವೆ. ರೇವಣ್ಣ ಅವರ ದರ್ಪ ಮತ್ತು ಸಡಿಲ ನಾಲಗೆಯನ್ನು ಸುಮಲತಾ ತಮಗೆ ಪೂರಕವಾಗಿ ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಇನ್ನಷ್ಟು ಅನುಕಂಪಗಳೂ ಮತಗಳಾಗಿ ಪರಿವರ್ತನೆಯಾಗಬಹುದು. ಸುಮಲತಾರ ಸಿನೆಮಾ ಬದುಕನ್ನೂ ರೇವಣ್ಣ ಅವರು ನಿಂದಿಸಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಮಕ್ಕಳೂ ಅದೇ ಬಣ್ಣದ ಲೋಕದಿಂದ ಬಂದವರು ಎನ್ನುವುದನ್ನು ಮರೆತಿದ್ದಾರೆ. ಅವರದ್ದು ರಾಜಕೀಯ ನಟನೆಯಾಗಿದ್ದರೆ, ಈ ಮೊಮ್ಮಕ್ಕಳ ರಾಜಕೀಯ ಯಾಕೆ ನಟನೆಯಲ್ಲ?

ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಇಡೀ ಕುಟುಂಬವೇ ಸ್ಪರ್ಧಿಸಲು ಹೊರಟಿದೆ. ಆದರೂ ‘ನಾನು ಕುಟುಂಬ ರಾಜಕೀಯ ನಡೆಸಿಲ್ಲ’ ಎಂದು ದೇವೇಗೌಡರು ಹೇಳಿಕೆ ನೀಡುತ್ತಿದ್ದಾರೆ. ಅವರೆಲ್ಲರೂ ತಮ್ಮ ಪ್ರತಿಭೆಯ ಬಲದಿಂದ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದಾರೆ ಎನ್ನುವುದು ಅವರ ವಾದ. ದೇವೇಗೌಡರು ಮುತ್ಸದ್ದಿ ನಾಯಕ. ಗ್ರಾಮೀಣ ಪ್ರದೇಶದಿಂದ, ರೈತ ಕುಟುಂಬದಿಂದ ಹೋರಾಟದ ಮೂಲಕವೇ ರಾಜಕೀಯಕ್ಕೆ ಕಾಲಿಟ್ಟು ಈ ದೇಶದ ಪ್ರಧಾನಿಯಾಗಿ ಕರ್ನಾಟಕದ ಹೆಸರನ್ನು ಜಗದಗಲ ಹರಡಿದವರು. ದೇವೇಗೌಡರ ಹೋರಾಟದ ಹಿನ್ನೆಲೆ ಅವರ ಮಕ್ಕಳಿಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಕುಮಾರಸ್ವಾಮಿ ಮೊದಲ ಬಾರಿ ಮುಖ್ಯಮಂತ್ರಿಯಾಗಲು ಅನುಸರಿಸಿದ ದಾರಿ ಯಾವುದಿತ್ತು ಎನ್ನುವುದೂ ಎಲ್ಲರಿಗೂ ತಿಳಿದಿರುವುದೇ. ವಂಚನೆ, ಸಮಯಸಾಧಕತನವೂ ‘ರಾಜಕೀಯ ಪ್ರತಿಭೆ’ಯೇ ಆಗಿದ್ದರೆ ಕುಮಾರಸ್ವಾಮಿಯವರೂ ಪ್ರತಿಭಾವಂತರೇ.

ಆದರೆ ಒಂದಂತೂ ಸತ್ಯ, ದೇವೇಗೌಡರ ಹಿನ್ನೆಲೆ ಇಲ್ಲದೇ ಇದ್ದಿದ್ದರೆ ಇವರಾರೂ ರಾಜಕೀಯದಲ್ಲಿ ಬೆಳೆಯಲು ಸಾಧ್ಯವಿರುತ್ತಿರಲಿಲ್ಲ. ಇದೀಗ ದೇವೇಗೌಡರ ಮೊಮ್ಮಕ್ಕಳಲ್ಲಿ ಜಾತಿ ಮತ್ತು ದೇವೇಗೌಡರ ಕುಟುಂಬದ ಹಿನ್ನೆಲೆ ಹೊರತು ಪಡಿಸಿದಂತೆ ಇನ್ನಾವ ಪ್ರತಿಭೆಯೂ ಇಲ್ಲ. ಹೀಗಿರುವಾಗ, ದೇವೇಗೌಡರು ಕುಟುಂಬ ರಾಜಕೀಯ ನಡೆಸಿಲ್ಲ ಎಂದು ಸ್ಪಷ್ಟನೆ ನೀಡುವ ಅಗತ್ಯವಿರಲಿಲ್ಲ. ಯಾಕೆಂದರೆ ಇಂದು ಎಲ್ಲ ಪಕ್ಷಗಳ ನಾಯಕರೂ ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ. ಇಂದು ಕುಟುಂಬವೇ ಇಲ್ಲದ ನಾಯಕನೊಬ್ಬ ಈ ದೇಶದ ಪ್ರಧಾನಿಯಾಗಿ ಮಾಡುತ್ತಿರುವ ಯಡವಟ್ಟುಗಳನ್ನು ನೋಡುವಾಗ ಜನರಿಗೆ ಕುಟುಂಬ ರಾಜಕಾರಣವೇ ಇದಕ್ಕಿಂತ ವಾಸಿ ಎಂಬಂತಾಗಿದೆ. ಅದೇನೇ ಇರಲಿ, ಮಂಡ್ಯದಲ್ಲಿ ದೇವೇಗೌಡರ ಮೊಮ್ಮಗ ನಿಖಿಲ್ ಗೆಲ್ಲುವ ದಾರಿ ಸುಲಭವೇನೂ ಇಲ್ಲ. ಅಂಬರೀಷ್ ನೆನಪು ಮತದಾರರನ್ನು ಮತಗಟ್ಟೆಯವರೆಗೂ ಹಿಂಬಾಲಿಸಿದರೆ, ಮೈತ್ರಿ ಪಕ್ಷ ತಾವಾಗಿಯೇ ಗೆಲ್ಲಬಹುದಾದ ಒಂದು ಕ್ಷೇತ್ರವನ್ನು ಬಿಜೆಪಿಗೆ ಹರಿವಾಣದಲ್ಲಿಟ್ಟು ಒಪ್ಪಿಸಿದಂತಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News