ಕಾಶಿ ವಿಶ್ವನಾಥ ಧಾಮದ ಅಭಿವೃದ್ಧಿಗೆ ಶಿವನೇ ನನ್ನನ್ನು ಆರಿಸಿದ್ದಾನೆ: ಪ್ರಧಾನಿ ಮೋದಿ

Update: 2019-03-09 07:41 GMT

ವಾರಣಾಸಿ, ಮಾ. 9:  ಶುಕ್ರವಾರ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ ಮೋದಿ, ಭೋಲೆ ಬಾಬಾ (ಶಿವ)  ಈ ಕಾಶಿ ವಿಶ್ವನಾಥ ಧಾಮದ ಅಭಿವೃದ್ಧಿಗೆ ತನ್ನನ್ನು ಆರಿಸಿದ್ದಾನೆಂದು ಹೇಳಿಕೊಂಡಿದ್ದಾರೆ.

''ಬಹಳ ಸಮಯದಿಂದ ವಿಶ್ವನಾಥ ಧಾಮದ ಬಗ್ಗೆ ಯೋಚಿಸುತ್ತಿದ್ದೆ. ರಾಜಕೀಯದಲ್ಲಿಲ್ಲದಾಗಲೂ ಹಲವಾರು ಬಾರಿ ಕಾಶಿಗೆ ಭೇಟಿ ನೀಡಿದ್ದೆ. ಈ ದೇವಳ ಸಂಕೀರ್ಣದ ಅಭಿವೃದ್ಧಿ ಮತ್ತು ಸುಂದರೀಕರಣಕ್ಕೆ ಏನಾದರೂ ಮಾಡಬೇಕೆಂದು ನಾನು ಅಂದಿನಿಂದ ಯೋಚಿಸುತ್ತಿದ್ದೆ'' ಎಂದು ಮೋದಿ ಹೇಳಿದರು.

ಗಂಗಾ ಮಾತೆ ತನ್ನನ್ನು ಆಹ್ವಾನಿಸಿದ್ದಾಳೆಂದು ಪ್ರಧಾನಿಯಾದ ನಂತರ ಮೊದಲ ಬಾರಿ 2014ರಲ್ಲಿ ತಮ್ಮ ವಾರಣಾಸಿ ಭೇಟಿಯ ವೇಳೆ ಹೇಳಿದ್ದ ಮೋದಿ ತಮ್ಮ ಆ ಭೇಟಿಯನ್ನು ನೆನಪಿಸಿಕೊಂಡರಲ್ಲದೆ ''ಇಂತಹ ಯೋಜನೆಗಳಿಗೆಂದೇ ನನ್ನನ್ನು ಕರೆಸಲಾಗಿದೆ ಎಂದು ನನಗೆ ಅನಿಸುತ್ತದೆ. ಪ್ರಾಯಶಃ ಭೋಲೆ ಬಾಬಾ ನನ್ನನ್ನು ಕಾಶಿ ವಿಶ್ವನಾಥ ಧಾಮದ ಅಭಿವೃದ್ಧಿಗೆ ಆರಿಸಿರಬಹುದು. ಇಂದು ಆ ಕನಸು ನನಸಾಗಿದೆ'' ಎಂದರು.

ಜನರ ನಂಬಿಕೆಗಳಿಗೆ ನೋವಾಗದಂತೆ ಪ್ರತಿಯೊಂದು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಶಂಕುಸ್ಥಾಪನೆ  ಭೋಲೆ ಬಾಬಾನ ಮುಕ್ತಿಯ ಹಬ್ಬ. ಏಕೆಂದರೆ ಆತ ನಾಲ್ಕು ದಿಕ್ಕುಗಳಲ್ಲಿಯೂ ಗೋಡೆಗಳಿಂದ ಸುತ್ತುವರಿದಿದ್ದ. ಶತಮಾನಗಳಿಂದ ಉಸಿರಾಡಲು ಆತ ಕಷ್ಟ ಪಟ್ಟಿರಬಹುದು. ಈ ಯೋಜನೆಗಳಿಗೆ ಕಟ್ಟಡಗಳನ್ನು ಸ್ವಾಧೀನಪಡಿಸಿ ಕೆಡವಲಾದಾಗ ಸುತ್ತಲೂ ಸುಮಾರು 40 ದೇವಳಗಳು ಪತ್ತೆಯಾದವು'' ಎಂದು ಹೇಳಿದ ಮೋದಿ ಹಿಂದಿನ ಸರಕಾರಗಳು ಈ ಯೋಜನೆಗೆ ಸಹಕಾರ ನೀಡಿದ್ದರೆ ಇಂದು ಅದನ್ನು ಉದ್ಘಾಟಿಸಬಹುದಾಗಿತ್ತು ಎಂದರು.

ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಬಗ್ಗೆ ಬನಾರಸ್ ಹಿಂದು ವಿವಿ ಅಧ್ಯಯನ ನಡೆಸಬೇಕೆಂದೂ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News