‘ಅಮ್ಮ’ ನಿಧನದ ನಂತರ ಮೋದಿ ನಮ್ಮ ‘ಡ್ಯಾಡಿ’ ಎಂದ ಎಐಎಡಿಎಂಕೆ ನಾಯಕ

Update: 2019-03-09 08:02 GMT

ಚೆನ್ನೈ, ಮಾ.9: "ತಮಿಳುನಾಡಿನಲ್ಲಿ ಆಡಳಿತಾರೂಢ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (ಎಐಎಡಿಎಂಕೆ)ಗೆ ಪ್ರಧಾನಿ ನರೇಂದ್ರ ಮೋದಿಯವರೇ ತಂದೆ" ಎಂದು ತಮಿಳುನಾಡಿನ ಹೈನು ಅಭಿವೃದ್ಧಿ ಖಾತೆ ಸಚಿವ ಕೆ.ಟಿ.ರಾಜೇಂದ್ರಿಯ ಬಾಲಾಜಿ ಹೇಳಿದ್ದಾರೆ.

ವಿರುಧುನಗರ ಜಿಲ್ಲೆಯ ಶ್ರೀವಿಲ್ಲಿಪುತೂರಿನಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, "ಎಐಎಡಿಎಂಕೆ ನಾಯಕಿಯಾಗಿದ್ದ ಅಮ್ಮ (ಜಯಲಲಿತಾ) ಮೃತಪಟ್ಟ ಬಳಿಕ, ಪ್ರಧಾನಿ ನರೇಂದ್ರ ಮೋದಿಯವರೇ ತಂದೆಯಾಗಿ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ" ಎಂದು ಬಣ್ಣಿಸಿದರು.

"ಮೋದಿ ಇಂದು ನಮ್ಮ ತಂದೆ. ನಮ್ಮ ಅಮ್ಮನನ್ನು ನಾವು ಕಳೆದುಕೊಂಡಿರುವುದರಿಂದ ನಮಗೆ ಮಾರ್ಗದರ್ಶನ ನೀಡಲು ಮತ್ತು ನಮ್ಮನ್ನು ಬೆಂಬಲಿಸಲು ಮೋದಿ ತಂದೆಯಾಗಿ ಬಂದಿದ್ದಾರೆ. ಮೋದಿ ಕೇವಲ ಎಐಎಡಿಎಂಕೆಗೆ ಡ್ಯಾಡಿಯಾಗಿರುವುದು ಮಾತ್ರವಲ್ಲದೇ, ಅವರು ಇಡೀ ರಾಷ್ಟ್ರಕ್ಕೇ ತಂದೆಯ ಸ್ಥಾನದಲ್ಲಿರುವವರು. ಆದ್ದರಿಂದ ಎಐಎಡಿಎಂಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ" ಎಂದು ವಿವರಿಸಿದರು.

2014ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ, "ತಮಿಳುನಾಡಿನ ಮಹಿಳೆಯೇ ಅಥವಾ ಗುಜರಾತ್‌ನ ಮೋದಿಯೇ" ಎಂಬ ಘೋಷವಾಕ್ಯ ಜನಪ್ರಿಯವಾಗಿತ್ತು. ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿಯನ್ನು ವಿರೋಧಿಸಲು ಜಯಲಲಿತಾ ಈ ಘೋಷವಾಕ್ಯ ನೀಡಿದ್ದರು. ಕಳೆದ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಎಐಎಡಿಎಂಕೆ, ಮೋದಿ ಅಲೆಯ ಹೊರತಾಗಿಯೂ ರಾಜ್ಯದ 39 ಲೋಕಸಭಾ ಸ್ಥಾನಗಳ ಪೈಕಿ 37ನ್ನು ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News