‘ಹಿಂದುತ್ವದ ಸನ್ನಿ’ ಭಾರತವನ್ನು ಆಕ್ರಮಿಸುತ್ತಿದೆ: ಡಾ.ಬಂಜಗೆರೆ ಜಯಪ್ರಕಾಶ್

Update: 2019-03-10 13:28 GMT

ಬೆಂಗಳೂರು, ಮಾ.10: ಹಿಂದುತ್ವದ ಸನ್ನಿ ಭಾರತವನ್ನು ವಿಕಾರವಾಗಿ ಆಕ್ರಮಿಸುತ್ತಿರುವಾಗ ಸ್ವಾಮಿ ವಿವೇಕಾನಂದ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಅರಿಯುವ ಅಗತ್ಯತೆ ಬಹಳ ಇದೆ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.

ರವಿವಾರ ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನ ಆಯೋಜಿಸಿದ್ದ ರಾಜ್ಯ ಮಟ್ಟದ ಯುವಜನ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತಕ್ಕೆ ನಿಜವಾದ ಹಿಂದುತ್ವವನ್ನು ಕೊಡಬಲ್ಲಂತಹ ದಾರ್ಶನಿಕತೆ ಗಾಂಧೀಜಿ ಹಾಗೂ ಸ್ವಾಮಿ ವಿವೇಕಾನಂದರಲ್ಲಿ ಇತ್ತು. ಅವರು ಹೆಚ್ಚಿನ ಸಮಾನ ಗುಣಗಳಿದ್ದವು. ಗಾಂಧೀಜಿ ನಾನು ನಿಜವಾದ ಹಿಂದು ಎಂದು ಹೇಳಿದ್ದರು. ಅದರ ಜೊತೆಗೆ ನಿಜವಾದ ಹಿಂದು ನಿಜವಾದ ಮುಸ್ಲಿಮನನ್ನು ದ್ವೇಷಿಸುವುದಕ್ಕೆ ಕಾರಣವೇ ಇಲ್ಲ ಎಂದಿದ್ದರು ಎಂದು ಹೇಳಿದರು.

ಒಬ್ಬ ನಿಜವಾದ ಹಿಂದು ಒಬ್ಬ ನಿಜವಾದ ಮುಸ್ಲಿಂನನ್ನು ದ್ವೇಷಿಸುವ ಕಾರಣ ಏನು? ತಮ್ಮ ಧರ್ಮ ಅನುಸಾರವಾಗಿ ದೇವರನ್ನು ಅನ್ವೇಷಿಸುವುದರಲ್ಲಿ ಯಾವ ಅಪಸ್ವರವಿರುವುದಿಲ್ಲ. ಮೊದಲು ದೇವರ ದರ್ಶನ ಹಿಂದುಗೆ ಆಗುತ್ತೋ ಅಥವಾ ಮುಸ್ಲಿಂಗೆ ಆಗುತ್ತೋ ಗೊತ್ತಿಲ್ಲ. ಆದರೆ, ಅವರವರ ಸಾಧನೆಯ ಮೇಲೆ ನಿರ್ಧಾರವಾಗುತ್ತದೆ. ಧರ್ಮದ ಮೇಲಲ್ಲ. ತಾನು ಇಂತಹ ಧರ್ಮಕ್ಕೆ ಸೇರಿದ್ದೇನೆ ಎಂದಾಗ ಸಿದ್ಧಿ ತನಗೆ ಒದಗಿ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಧಕನಿಗೆ ದೇವರ ಸಾಕ್ಷಾತ್ಕರ ತಾನಾಗೇ ಬರುತ್ತದೆ ಎಂದು ಗಾಂಧೀಜಿ ತಿಳಿಸಿದರು. ಅವರು ಹಿಂದು ಧರ್ಮವನ್ನು ಹೊರತು ಪಡಿಸಿ ಎಂದು ಬದುಕಿದವರಲ್ಲ. ಅವರೊಳಗಿನ ಹಿಂದು ಬಹಳ ಮಾನವೀಯ ಮೌಲ್ಯವುಳ್ಳದಾಗಿತ್ತು. ದಯೆಯೇ ಧರ್ಮದ ಮೂಲ ಎಂದು ಶರಣರು ಹೇಳಿದನ್ನೇ ಗಾಂಧೀಜಿ ಹೇಳಿದ್ದು, ಎಲ್ಲರನ್ನು ಸ್ನೇಹದಿಂದ ನೋಡುವುದೇ ಸರ್ವಧರ್ಮ. ಕಟ್ಟಕಡೆಯವನನ್ನು ಸಮನಾಗಿ ಕಾಣುವುದೇ ಧರ್ಮ ಎಂದು ಅಭಿವ್ಯಕ್ತಗೊಳಿಸಿದ್ದರು ಎಂದು ನುಡಿದರು.

ಧಾರ್ಮಿಕ ಧಿರಿಸನ್ನು ಸ್ವಾಮಿ ವಿವೇಕಾನಂದರು ಧರಿಸಿರಬಹುದು. ಆದರೆ, ಅವರು ಬಡವನ ಸೇವೆಯೇ ದೇವರ ಸೇವೆ ಎಂದು ತಿಳಿದವರು. ದೇಶವನ್ನು ಕಟ್ಟು ಧರ್ಮವನ್ನಲ್ಲ ಎಂದು ಸಾರಿ ಹೇಳಿದ್ದರು. ಅಲ್ಲದೆ, ಹಿಂದುತ್ವದ ನಿಜವಾದ ಪ್ರತಿನಿಧಿಗಳು ಗಾಂಧೀಜಿ ಹಾಗೂ ವಿವೇಕಾನಂದರೇ; ಅವರು ಸತ್ಯಶೋಧನೆ ಮಾಡುವ ಮೂಲಕ ಮೌಢ್ಯವನ್ನು ಯಾವುದೇ ಮುಲಾಜಿಲ್ಲದೆ ತೀವ್ರವಾಗಿ ಖಂಡಿಸಿದರು. ಭಾರತೀಯ ಪರಂಪರೆಯನ್ನು ಉಳಿಸಬೇಕಾದರೆ ಅವರಿಬ್ಬರ ಮೂಲಕವೇ ಗ್ರಹಿಸಬೇಕು. ಆಗ ಮಾತ್ರ ಭಾರತಕ್ಕೆ ಓಳ್ಳೆಯದಾಗುತ್ತದೆ ಎಂದರು.

‘ಪಾಕಿಸ್ತಾನ ಎಂದಾಕ್ಷಣ ವಿರೋಧ ಮಾಡಬಾರದು. ಹಿಂದುಸ್ತಾನವನ್ನು ಪ್ರೀತಿಸುವ ಸ್ನೇಹ ಜೀವಿಗಳೂ ಅಲ್ಲೂ ಇದ್ದಾರೆ. ಮಾನವೀಯತೆ ಯುದ್ಧಕ್ಕಿಂತ ದೊಡ್ಡದ್ದು, ಉಗ್ರವಾದ ಹಾಗೂ ಉಗ್ರನನ್ನು ನಿಗ್ರಹಿಸಬೇಕು’

-ಮನುಬಳಿಗಾರ್, ಕಸಾಪ ಅಧ್ಯಕ್ಷ

‘ದುರ್ಗತಿಯನ್ನು ಹೊಂದಿರುವ ದೇಶದಲ್ಲಿ ಧರ್ಮ ಉಳಿಯುವುದಿಲ್ಲ. ಒಂದು ಉನ್ನತ ಸಮಾಜದಲ್ಲಿ ಸಂಸ್ಕಾರವೂ ಸಾಧ್ಯವಿಲ್ಲ. ಸಂಸ್ಕೃತಿಯೂ ಸಾಧ್ಯವಿಲ್ಲ. ನೀನು ನೀಚ, ನೀನು ಕೀಳು, ನೀನು ಅನ್ಯ ಹಾಗೂ ನೀನು ಮನುಷ್ಯನೇ ಅಲ್ಲ ಎನ್ನುವುದು ಧರ್ಮವಲ್ಲ’

-ಡಾ.ಬಂಜಗೆರೆ ಜಯಪ್ರಕಾಶ್, ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News