ಇವು ಈ ಬಾರಿಯ ಚುನಾವಣೆಯ ವಿಶೇಷತೆಗಳು..

Update: 2019-03-11 03:43 GMT

ಹೊಸದಿಲ್ಲಿ, ಮಾ.11: ಏಳು ಹಂತದ ಚುನಾವಣೆಗೆ ದೇಶ ಸಜ್ಜಾಗುತ್ತಿರುವಂತೆಯೇ, ಈ ಬಾರಿಯ ಸಾರ್ವತ್ರಿಕ ಚುನಾವಣೆ ಹಲವು ವಿಶೇಷತೆಗಳನ್ನು ಹೊಂದಿರುತ್ತದೆ. ಈ ಬಾರಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಪಕ್ಷದ ಚಿಹ್ನೆಗಳ ಜತೆಗೆ ಅಭ್ಯರ್ಥಿಯ ಭಾವಚಿತ್ರ ಕೂಡಾ ಇರುತ್ತದೆ.

ಚುನಾವಣೆ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲವು ವಿನೂತನ ಕ್ರಮಗಳನ್ನು ಕೈಗೊಂಡಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲ ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ ವಿವಿಪಿಎಟಿ (ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ ಟ್ರಯಲ್) ಬಳಸಲಾಗುತ್ತದೆ ಎಂದು ಆಯೋಗ ಪ್ರಕಟಿಸಿದೆ.

ಚುನಾವಣೆ ಘೋಷಣೆಯೊಂದಿಗೆ ಮಾದರಿ ನೀತಿ ಸಂಹಿತೆ ಕೂಡಾ ತಕ್ಷಣದಿಂದ ಜಾರಿಗೆ ಬಂದಿದ್ದು, ರಾಜಕೀಯ ಪಕ್ಷಗಳ ನಡತೆ ಹಾಗೂ ಭಾಷಣ, ಸರ್ಕಾರದ ನಿರ್ಧಾರಗಳ ಮೇಲೆ ನಿರ್ಬಂಧ ಇರುತ್ತದೆ.

ಅಪರಾಧ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳು, ಚುನಾವಣಾ ಪ್ರಚಾರದ ವೇಳೆ ಮೂರು ಬಾರಿ ಈ ಬಗೆಗಿನ ಮಾಹಿತಿಯನ್ನು ಪತ್ರಿಕೆಗಳು ಹಾಗೂ ಟೆಲಿವಿಷನ್‌ಗಳಲ್ಲಿ ಪ್ರಚುರಪಡಿಸಬೇಕಾಗುತ್ತದೆ ಎಂದೂ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಸ್ಪಷ್ಟಪಡಿಸಿದ್ದಾರೆ.

ಹೊಸ ತಂತ್ರಜ್ಞಾನದ ಪ್ರಯೋಜನವನ್ನೂ ಆಯೋಗ ಬಳಸಿಕೊಳ್ಳಲಿದ್ದು, 'ಸಿ ವಿಜಿಲ್' ಆ್ಯಪ್ ಇಂಥ ವಿನೂತನ ಕ್ರಮವಾಗಿದೆ. ಇದರ ಮೂಲಕ ಜನಸಾಮಾನ್ಯರು ಯಾವುದೇ ಚುನಾವಣಾ ರೂಢಿಗಳ ಉಲ್ಲಂಘನೆಯಾಗಿದ್ದಲ್ಲಿ ತಮ್ಮ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಲ್ಲಿ ದಾಖಲಿಸಿಕೊಂಡು ಆಯೋಗಕ್ಕೆ ವರದಿ ಮಾಡಬಹುದಾಗಿದೆ.

ಜನರು ಒಂದು ಫೋಟೊ ಅಥವಾ ಸಣ್ಣ ವೀಡಿಯೊ ದಾಖಲೆಯೊಂದಿಗೆ ಅಕ್ರಮದ ಸಂಕ್ಷಿಪ್ತ ವಿವರಣೆಯನ್ನು ಈ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೇರವಾಗಿ ವರದಿ ಮಾಡಬಹುದಾಗಿದೆ. ದೂರುದಾರನ ಗುರುತು ಬಹಿರಂಗಪಡಿಸಬಾರದು ಎನ್ನುವುದು ಆತನ ಅಪೇಕ್ಷೆಯಾಗಿದ್ದಲ್ಲಿ ಅದಕ್ಕೂ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News