ಮಗುವನ್ನು ನಿಲ್ದಾಣದಲ್ಲಿಯೇ ಮರೆತು ವಿಮಾನ ಹತ್ತಿದ ಮಹಿಳೆ!

Update: 2019-03-11 09:59 GMT

ದುಬೈ, ಮಾ.11: ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ಬೋರ್ಡಿಂಗ್ ಪ್ರದೇಶದಲ್ಲಿದ್ದ ತನ್ನ ಮಗವನ್ನು ಮರೆತು ಬಿಟ್ಟು ಮಹಿಳೆಯೊಬ್ಬರು ವಿಮಾನ ಹತ್ತಿದ್ದರಿಂದ ಜಿದ್ದಾದಿಂದ ಕೌಲಾಲಂಪುರಕ್ಕೆ ಹೊರಟಿದ್ದ ಸೌದಿ ಅರೇಬಿಯಾದ ವಿಮಾನವೊಂದು ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಮತ್ತೆ ಜಿದ್ದಾದ ಕಿಂಗ್ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸಾದ ಕುತೂಹಲಕಾರಿ ಘಟನೆ ನಡೆದಿದೆ.

ಕಳೆದ ವಾರಾಂತ್ಯ ಈ ಘಟನೆ ನಡೆದಿದೆಯೆನ್ನಲಾಗಿದ್ದು, ವಿಮಾನ ಟೇಕ್-ಆಫ್ ಆದ ನಂತರ ತನ್ನ ಮಗುವಿನ  ಬಗ್ಗೆ ಆ ಮಹಿಳೆಗೆ ನೆನಪಾಗಿರಬೇಕು. ತಕ್ಷಣ ವಿಮಾನವನ್ನು ವಾಪಸ್ ನಿಲ್ದಾಣದಕ್ಕೆ ತಿರುಗಿಸಿ ಎಂದು ಮಹಿಳೆ ವಿಮಾನ ಸಿಬ್ಬಂದಿಗೆ ಪರಿಪರಿಯಾಗಿ ವಿನಂತಿಸಿದ್ದರು. ಅರೆಕ್ಷಣ ಅವಾಕ್ಕಾದ ವಿಮಾನ ಸಿಬ್ಬಂದಿ ಹಾಗೂ ಪೈಲಟ್ ಇಂತಹ ಸ್ಥಿತಿಯಲ್ಲಿ ಏನು ಮಾಡಬೇಕೆಂದು ಯೋಚಿಸುವಂತಾಗಿತ್ತು. ಎಟಿಸಿ ಆಪರೇಟರುಗಳನ್ನು ಸಂಪರ್ಕಿಸಿದ ಪೈಲಟ್ ಪರಿಸ್ಥಿತಿಯನ್ನು ವಿವರಿಸಿ ವಿಮಾನವನ್ನು ವಾಪಸ್ ಇಳಿಸಬೇಕೇ ಎಂದು ಅನುಮತಿ ಕೇಳುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

``ದೇವರು ನಮ್ಮ ಜತೆಗಿರಲಿ. ನಾವು ವಾಪಸಾಗಬಹುದೇ?'' ಎಂದು ಪೈಲಟ್ ಎಟಿಸಿಯನ್ನು ಕೇಳಿದ್ದರು. ಈ ಕರೆ ಸ್ವೀಕರಿಸಿ ನಂತರ ಎಟಿಸಿ ಸಿಬ್ಬಂದಿ ``ವಿಮಾನ ವಾಪಸಾಗಲು ಅನುಮತಿ ಕೇಳುತ್ತಿದೆ. ಪ್ರಯಾಣಿಕೆಯೊಬ್ಬರು ತಮ್ಮ ಮಗುವನ್ನು ಮರೆತು ವಿಮಾನ ಹತ್ತಿದ್ದಾರೆ, ಪಾಪ ಮಗು'' ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಮತ್ತೆ ಪೈಲಟ್ ಗೆ ಕರೆ ಮಾಡಿ ಕಾರಣವನ್ನು ದೃಢಪಡಿಸಿಕೊಂಡು ವಿಮಾನಕ್ಕೆ ವಾಪಸಾಗಲು ಅನುಮತಿ ನೀಡಲಾಯಿತು.

ಇದೊಂದು ತುರ್ತು ಪರಿಸ್ಥಿತಿಯೆಂಬಂತೆ ಕಾರ್ಯಾಚರಿಸಿದ ಪೈಲಟ್ ನನ್ನು ಬಹಳಷ್ಟು ಮಂದಿ ಅಭಿನಂದಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News