ಪ್ರಜಾಸತ್ತೆಯ ಅಳಿವು ಉಳಿವಿನ ಪ್ರಶ್ನೆ

Update: 2019-03-12 06:08 GMT

ಈ ದೇಶದ ಖ್ಯಾತ ಚಿಂತಕ, ಸಂಶೋಧಕ ರಾಮ್ ಪುನಿಯಾನಿಯವರ ಮನೆಗೆ ಇತ್ತೀಚೆಗೆ ಸಿಐಡಿ ಪೊಲೀಸರು ಎಂದು ಹೇಳಿಕೊಂಡು ಮೂವರು ಆಗಮಿಸಿದರು. ‘ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿರುವುದರಿಂದ ವಿಚಾರಣೆಗೆ ಬಂದಿದ್ದೇವೆ’’ ಎಂದು ಅವರು ತಿಳಿಸಿದರು. ‘‘ನಮ್ಮಲ್ಲಿ ಯಾರೂ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿಲ್ಲ’’ ಎಂದು ಪುನಿಯಾನಿ ಸ್ಪಷ್ಟಪಡಿಸಿದರೂ ಆಗಂತುಕರು ತೆರಳಲಿಲ್ಲ. ಬದಲಿಗೆ ಚಿತ್ರ ವಿಚಿತ್ರವಾದ ಪ್ರಶ್ನೆಗಳನ್ನು ಕೇಳತೊಡಗಿದರು. ಅವರ ವೈಯಕ್ತಿಕ ಬದುಕಿನ ಬಗ್ಗೆ, ಉದ್ಯೋಗಗಳ ಕುರಿತಂತೆ ಅನಗತ್ಯ ಪ್ರಶ್ನೆಗಳನ್ನು ಎಸೆಯತೊಡಗಿದರು. ಕೊನೆಯಲ್ಲಿ ಬೆದರಿಕೆ ರೂಪದ ಸಂದೇಶವೊಂದನ್ನು ಅವರಿಗೆ ನೀಡಿ ಅಲ್ಲಿಂದ ತೆರಳಿದರು. ಇತ್ತೀಚೆಗೆ ಕಾಶ್ಮೀರದಲ್ಲಿ ಎರಡು ಪ್ರಮುಖ ದಿನ ಪತ್ರಿಕೆಗಳಿಗೆ ಸರಕಾರ ಜಾಹೀರಾತು ನೀಡುವುದನ್ನೇ ನಿಲ್ಲಿಸಿತು. ಅವೆರಡೂ ಕಾಶ್ಮೀರದ ಜನರ ಬದುಕಿನಲ್ಲಿ ಅವಿನಾಭಾವವಾಗಿ ಬೆಸೆದ ಪತ್ರಿಕೆಗಳು. ಜಾಹೀರಾತು ನಿಲ್ಲಿಸಲು ಸರಕಾರ ಸ್ಪಷ್ಟ ಕಾರಣವನ್ನೇ ನೀಡಿರಲಿಲ್ಲ. ಆ ಎರಡು ಪತ್ರಿಕೆಗಳು ಅದೆಷ್ಟು ವಿಶ್ವಾಸಾರ್ಹತೆಯನ್ನು ಹೊಂದಿತ್ತೆಂದರೆ ಕಾಶ್ಮೀರದ ಉಳಿದೆಲ್ಲ ಪತ್ರಿಕೆಗಳು ಒಂದಾಗಿ ಸರಕಾರದ ಜಾಹೀರಾತುಗಳನ್ನು ಪ್ರಕಟಿಸದೇ ಸ್ಥಳವನ್ನು ಖಾಲಿ ಬಿಟ್ಟು ತಮ್ಮ ಪ್ರತಿಭಟನೆಗಳನ್ನು ವ್ಯಕ್ತಪಡಿಸಿದವು.

ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿರುವ ದಲಿತ ಚಿಂತಕ ರವಿಕಾಂತ್ ಅವರು ರಾಜ್ಯ ಸರಕಾರಿ ಉದ್ಯೋಗಿಗಳ ಸಾಹಿತ್ಯ ಸಂಸ್ಥೆ ಕೊಡಮಾಡುವ ರಮಣ್‌ಲಾಲ್ ಅಗರ್ವಾಲ್ ಪ್ರಶಸ್ತಿಗೆ ನಾಮಕರಣವಾಗಿದ್ದರು. ತಿಂಗಳಾಂತ್ಯದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ಸರಕಾರ ಪ್ರದಾನ ಮಾಡಬೇಕಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರಿಗೆ ನೀಡಿದ ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಲಾಯಿತು. ಕಾರಣವಿಷ್ಟೇ, ಇತ್ತೀಚೆಗೆ ಅವರು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಸಾಮಾಜಿಕ ತಾಣದಲ್ಲಿ ಟೀಕೆ ಮಾಡಿದ್ದರು. ರಫೇಲ್ ಹಗರಣದ ಕುರಿತಂತೆ ಭಾರೀ ದಾಖಲೆಗಳನ್ನು ಮುಖಪುಟದಲ್ಲಿ ಮುದ್ರಿಸಿದ ದಿ ಹಿಂದೂ ಪತ್ರಿಕೆಯ ಮುಖ್ಯಸ್ಥ ಎನ್. ರಾಮ್ ಅವರ ವಿರುದ್ಧವೇ ಸರಕಾರ ಮೊಕದ್ದಮೆ ದಾಖಲಿಸಲು ಯತ್ನಿಸಿತು. ರಾಜಕಾರಣಿಗಳ ಹಗರಣಗಳನ್ನು ಬಹಿರಂಗ ಪಡಿಸುವುದೇ ಅಪರಾಧ ಎಂಬಂತೆ ನ್ಯಾಯಾಲಯದಲ್ಲಿ ವಾದ ಮಾಡಿತು. ಸ್ವತಃ ಎನ್. ರಾಮ್ ಅವರು ‘‘ಇಂದು ಮಾಧ್ಯಮ ವಲಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ’’ ಎಂಬ ಹೇಳಿಕೆಯನ್ನು ಸಂದರ್ಶನವೊಂದರಲ್ಲಿ ನೀಡಿದರು. ಭಾರೀ ಇತಿಹಾಸವಿರುವ ದಿ ಹಿಂದೂ ಪತ್ರಿಕೆಯ ಮುಖ್ಯಸ್ಥರೇ ಇಂತಹದೊಂದು ಹೇಳಿಕೆಯನ್ನು ನೀಡುತ್ತಾರಾದರೆ, ಸರಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಮಾತನಾಡುವ ಪ್ರಾದೇಶಿಕ ಅಥವಾ ಸಣ್ಣ ಪುಟ್ಟ ಪತ್ರಿಕೆಗಳ ಸ್ಥಿತಿ ಹೇಗಿರಬಹುದು? ಸರಕಾರದ ವಿರುದ್ಧ ಬರೆದ, ಮಾತನಾಡಿದ ಪತ್ರಕರ್ತರನ್ನು ಇದೀಗ ಅಲ್ಲಲ್ಲಿ ಬಂಧಿಸುವ, ಅವರಿಗೆ ಚಿತ್ರಹಿಂಸೆ ನೀಡುವ ಕೆಲಸ ಆರಂಭವಾಗಿದೆ. ಪ್ರಧಾನಿಯನ್ನು ಟೀಕಿಸುವುದೆಂದರೆ ದೇಶವನ್ನು ಟೀಕಿಸಿದಂತೆ ಎಂಬ ಮನಸ್ಥಿತಿಯೊಂದನ್ನು ನಿರ್ಮಿಸಲಾಗಿದೆ.

ಇತ್ತೀಚೆಗೆ ಉತ್ತರ ಭಾರತದಲ್ಲಿ, ನಿರುದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡಿದ ಯುವಕನೊಬ್ಬನಿಗೆ ಬಿಜೆಪಿ ಕಾರ್ಯಕರ್ತರು ಯದ್ವಾತದ್ವಾ ಥಳಿಸುವ ವೀಡಿಯೊ ಒಂದು ವೈರಲ್ ಆಯಿತು. ಅಂದರೆ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಯಾರೂ ಮಾತನಾಡಬಾರದು ಎನ್ನುವ ಬೆದರಿಕೆಯನ್ನು ಸರಕಾರವೇ ರವಾನಿಸುತ್ತಿದೆ. ಸರಕಾರ ದುರ್ಬಲವಾಗಿದ್ದಾಗ, ದುಷ್ಕರ್ಮಿಗಳು ಬೀದಿಯಲ್ಲಿ ಎದೆಯುಬ್ಬಿಸಿ ಓಡಾಡ ತೊಡಗುತ್ತಾರೆ. ಚಿಂತಕರ ಮೇಲೆ, ಪತ್ರಕರ್ತರ ಮೇಲೆ ಹಾಡಹಗಲೇ ದಾಳಿ ನಡೆಸುತ್ತಾರೆ. ಆಗ ಕಾನೂನು ವ್ಯವಸ್ಥೆ ಹದಗೆಟ್ಟಿರುವುದು ತೀವ್ರ ಚರ್ಚೆಗೊಳಗಾಗುತ್ತದೆ. ಆದರೆ ಸದ್ಯಕ್ಕೆ ದೇಶದಲ್ಲಿ ನಡೆಯುತ್ತಿರುವುದು ತುಸು ಭಿನ್ನವಾದುದು. ಇಂದು ದುಷ್ಕರ್ಮಿಗಳು ಮಾತ್ರವಲ್ಲ, ಅವರ ಜೊತೆಗೆ ಪೊಲೀಸ್ ಇಲಾಖೆ, ನ್ಯಾಯ ವ್ಯವಸ್ಥೆಗಳೂ ಶಾಮೀಲಾಗಿ ಈ ದೇಶದ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ದಾಳಿ ನಡೆಸುತ್ತಿವೆ.

ದುಷ್ಕರ್ಮಿಗಳು, ಮತಾಂಧರು ಚಿಂತಕರಿಗೆ, ಪತ್ರಕರ್ತರಿಗೆ ಬೆದರಿಕೆಯೊಡ್ಡಿದಾಗ ಸರಕಾರ ಪೊಲೀಸರನ್ನು ರಕ್ಷಣೆಗೆ ಒದಗಿಸುತ್ತದೆ. ಆದರೆ ಇಲ್ಲಿ ಪೊಲೀಸರೇ ಬಂದು ಬರಹಗಾರರನ್ನು ಪೀಡಿಸಿದರೆ? ಮಾನಸಿಕವಾಗಿ ಚಿತ್ರಹಿಂಸೆ ನೀಡಿದರೆ? ಯಾವಾಗ ಸರಕಾರದ ಭಾಗವಾಗಿರುವ ಸಂಸ್ಥೆಗಳು ಜನಸಾಮಾನ್ಯರ ಬಾಯಿ ಮುಚ್ಚಿಸಲು ಬಳಸಲ್ಪಡುತ್ತದೆಯೋ ಆ ಸಂದರ್ಭವನ್ನೇ ನಾವು ತುರ್ತು ಪರಿಸ್ಥಿತಿ ಎಂದು ಕರೆಯಬೇಕಾಗುತ್ತದೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಅಪಾರ ಸಂಖ್ಯೆಯಲ್ಲಿ ಪತ್ರಕರ್ತರು ಜೈಲು ಸೇರಬೇಕಾಯಿತು. ಇಂದಿರಾಗಾಂಧಿಯ ವಿರುದ್ಧ ಬರೆಯಬೇಕಾದರೆ ರೂಪಕಗಳನ್ನು ಬಳಸುವ ಅನಿವಾರ್ಯ ಸ್ಥಿತಿ ಬರಹಗಾರರಿಗೆ ಸೃಷ್ಟಿಯಾಯಿತು. ಆದರೆ ಇಂದು ಯಾವುದೇ ತುರ್ತು ಪರಿಸ್ಥಿತಿ ಘೋಷಣೆಯಾಗದೇ ಇದ್ದರೂ ಬರಹಗಾರರು, ಚಿಂತಕರು ಆತಂಕದಲ್ಲಿ ಬದುಕುವ ಸನ್ನಿವೇಶ ನಿರ್ಮಾಣವಾಗಿದೆ. ಅಧಿಕೃತ ತುರ್ತುಪರಿಸ್ಥಿತಿಗಿಂತ, ಪ್ರಜಾಸತ್ತೆಯ ವೇಷದಲ್ಲಿರುವ ಈ ತುರ್ತು ಪರಿಸ್ಥಿತಿಯೇ ಹೆಚ್ಚು ಅಪಾಯಕಾರಿ.

ರಾಮ್ ಪುನಿಯಾನಿ ಈ ದೇಶದ ಸೌಹಾರ್ದ ಪರಂಪರೆಯನ್ನು ಜನಸಾಮಾನ್ಯರ ಬಳಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವರು. ಸಂಘಪರಿವಾರ ದೇಶದ ಇತಿಹಾಸವನ್ನು ತಿರುಚಿ ಜನರನ್ನು ಹಾದಿ ತಪ್ಪಿಸುತ್ತಿರುವಾಗ ಪುನಿಯಾನಿಯಂತಹ ನೂರಾರು ಬರಹಗಾರರು, ಚಿಂತಕರು ವಾಸ್ತವವನ್ನು ಜನರ ಬಳಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಬಾಯಿ ಮುಚ್ಚಿಸುವ ಭಾಗವಾಗಿಯೇ ಸರಕಾರ ಪೊಲೀಸ್ ಇಲಾಖೆಗಳನ್ನು ಬಳಸಿ ಬೆದರಿಸಲು ಹೊರಟಿದೆ. ಕೋರೆಗಾಂವ್ ಹಿಂಸಾಚಾರದ ನೆಪದಲ್ಲಿ ಈಗಾಗಲೇ ಹಲವು ಲೇಖಕರು, ಚಿಂತಕರು, ಮಾನವಹಕ್ಕು ಹೋರಾಟಗಾರರು ಜೈಲು ಸೇರಿದ್ದಾರೆ. ಸರಕಾರ ಇವರನ್ನು ಅರ್ಬನ್ ನಕ್ಸಲ್ ಎಂದು ಕರೆದಿದೆ. ಹೀಗೆ ಬಂಧಿತರಾದವರಲ್ಲಿ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಕೂಡ ಒಬ್ಬರು. ಒಂದೆಡೆ ನಮ್ಮ ಸರಕಾರ ಅವರನ್ನು ಬಂಧಿಸಿದ್ದರೆ; ಮಗದೊಂದೆಡೆ ಹಾರ್ವರ್ಡ್ ಕಾನೂನು ಕಾಲೇಜು ಅವರನ್ನು ಅಂತರ್‌ರಾಷ್ಟ್ರೀಯ ಮಹಿಳೆಯಾಗಿ ಗೌರವಿಸಿದೆ.

ಅವರ ಮಾನವ ಹಕ್ಕುಗಳ ಹೋರಾಟವನ್ನು ಶ್ಲಾಘಿಸಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾದ ಓರ್ವ ಸಾಮಾಜಿಕ ಕಾರ್ಯಕರ್ತೆಯನ್ನು ಭಾರತ ಜೈಲಲ್ಲಿಟ್ಟಿರುವುದು ಪ್ರಜಾಸತ್ತೆಗೆ ಮಾಡಿದ ಅವಮಾನವಲ್ಲವೇ? ಇದರಿಂದ ದೇಶದ ವರ್ಚಸ್ಸು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕುಸಿಯುತ್ತಿಲ್ಲವೇ? ಖ್ಯಾತ ದಲಿತ ಚಿಂತಕ ಆನಂದ್ ತೇಲ್ತುಂಬ್ಡೆ ಬಂಧನಕ್ಕೂ ಸರಕಾರ ಸರ್ವ ಪ್ರಯತ್ನ ನಡೆಸಿತಾದರೂ, ಕೊನೆಯ ಕ್ಷಣದಲ್ಲಿ ಸರಕಾರದ ಹುನ್ನಾರ ವಿಫಲವಾಯಿತು. ಭಾರತದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿರುವುದನ್ನು ವಿಶ್ವ ಗಮನಿಸುತ್ತಿದೆ. ಮಹಾ ಚುನಾವಣೆ ಮುಗಿಯುವ ಹೊತ್ತಿಗೆ ಇನ್ನಷ್ಟು ಪತ್ರಕರ್ತರು, ಚಿಂತಕರು ಜೈಲು ಸೇರಿದರೆ ಅದರಲ್ಲಿ ಅಚ್ಚರಿಯಿಲ್ಲ. ಈ ಕಾರಣದಿಂದಲೇ ಈ ಬಾರಿಯ ಮಹಾ ಚುನಾವಣೆ ದೇಶದ ಪ್ರಜಾಸತ್ತೆಯ ಅಳಿವು ಉಳಿವಿನ ಪ್ರಶ್ನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News