ಮಹಿಳಾ ಮೀಸಲಾತಿ: ಬಿಜೆಡಿಯಲ್ಲಿ ಅಪಸ್ವರ !

Update: 2019-03-12 04:01 GMT

ಭುವನೇಶ್ವರ, ಮಾ. 12: ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಶೇಕಡ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮೂಲಕ ಹೊಸ ಕ್ರಾಂತಿಕಾರಕ ಹೆಜ್ಜೆ ಇಟ್ಟಿರುವ ಬಿಜೆಡಿ ಮುಖಂಡ ನವೀನ್ ಪಟ್ನಾಯಕ್ ಅವರ ಕ್ರಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದರೂ, ಅವರ ಪಕ್ಷದಲ್ಲಿ ಮಾತ್ರ ಈ ಕ್ರಮ ಆಂತರಿಕ ಅಸಮಾಧಾನಕ್ಕೆ ಕಾರಣವಾಗಿದೆ.

ಇದು ಎರಡು ಅಲುಗಿನ ಖಡ್ಗದ ಮೇಲಿನ ನಡಿಗೆ ಎಂದು ಪಕ್ಷದಲ್ಲಿ ವಿಶ್ಲೇಷಿಸಲಾಗುತ್ತಿದೆ. 2014ರ ಚುನಾವಣೆಯಲ್ಲಿ 21 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಬಿಜೆಡಿ ಜಯಭೇರಿ ಬಾರಿಸಿತ್ತು.

ಏಳು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟಿರುವುದರಿಂದ ಈ ಕ್ಷೇತ್ರದ ಪುರುಷ ಆಕಾಂಕ್ಷಿಗಳಿಗೆ ಸಹಜವಾಗಿಯೇ ನಿರಾಸೆಯಾಗಿದೆ. ಅವರ ಅಸಮಾಧಾನವನ್ನು ತಣಿಸುವ ಜತೆಗೆ ಮಹಿಳಾ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆಯನ್ನು ಖಾತ್ರಿಪಡಿಸಬೇಕಾದ ಸವಾಲು ಎದುರಿಸುತ್ತಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಪ್ರಾಬಲ್ಯಕ್ಕೆ ಸವಾಲು ಹಾಕಿರುವ ಬಿಜೆಪಿ ಈ ಬಾರಿ ಉತ್ತಮ ಸಾಧನೆಯ ನಿರೀಕ್ಷೆಯಲ್ಲಿದ್ದು, ಮಹಿಳೆಯರಿಗೆ ಟಿಕೆಟ್ ಹಂಚಿಕೆ ನಿರ್ಧಾರ ಬಿಜೆಡಿಗೆ ದುಬಾರಿಯಾಗಬಾರದು ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ.

ನವೀನ್ ಪಟ್ನಾಯಕ್ ಅವರ ನಿರ್ಧಾರ ಪಕ್ಷಕ್ಕೆ ಮತ್ತಷ್ಟು ಮಹಿಳಾ ಮತಗಳನ್ನು ಸೆಳೆಯಲು ಕಾರಣವಾಗುತ್ತದೆ ಎನ್ನಲಾಗಿದ್ದು, ಪಕ್ಷದ ಟಿಕೆಟ್ ಆಕಾಂಕ್ಷಿ ಮಹಿಳೆಯರು ಸಿಎಂ ನಿವಾಸದ ಮುಂದೆ ಸಾಲುಗಟ್ಟಿದ್ದಾರೆ. ಕಳೆದ ಬಾರಿ ಬಿಜೆಡಿಯ ಮೂವರು ಮಹಿಳಾ ಸಂಸದರು ಆಯ್ಕೆಯಾಗಿದ್ದರು. ಪ್ರತ್ಯುಷಾ ರಾಜೇಶ್ವರಿ ಸಿಂಗ್ ಅವರು ಪತಿಯ ನಿಧನದ ಬಳಿಕ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಅವರನ್ನು ಪಕ್ಷ ಉಳಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಕಾಂಗ್ರೆಸ್ ಸಿಎಂ ಹೇಮಾನಂದ ಬಿಸ್ವಾಲ್ ಅವರ ಪುತ್ರಿ ಸುನಿತಾ ಬಿಸ್ವಾಲ್ ಅವರನ್ನು ಸುನಂದಗಢ ಕ್ಷೇತ್ರದಿಂದ ಕಣಕ್ಕೆ ಇಳಿಸುತ್ತದೆ ಎಂಬ ವದಂತಿಯೂ ಇದೆ.

ಎಸ್ಟಿ ಕ್ಷೇತ್ರವನ್ನು ಬಿಜೆಪಿಯ ಜೂಯೆಲ್ ಓರಂ ಪ್ರತಿನಿಧಿಸುತ್ತಿದ್ದಾರೆ. ಪರಾಲಾ ಗಜಪತಿ ರಾಜಕುಟುಂಬದ ಕಲ್ಯಾಣಿ ಗಜಪತಿಯವರನ್ನು ಬೆರ್ಹ್ರಾಂಪುರ ಕ್ಷೇತ್ರದಿಂದ ಪಕ್ಷ ಕಣಕ್ಕೆ ಇಳಿಸಲಿದೆ. ಈ ಕ್ಷೇತ್ರವನ್ನು ನಟಿ ನೇತಾ ಸಿದ್ಧಾಂತ ಮಹೋಪಾತ್ರ ಪ್ರತಿನಿಧಿಸುತ್ತಿದ್ದಾರೆ.

ಉಳಿದ ನಾಲ್ಕು ಸ್ಥಾನಗಳಿಗೆ ಸೂಕ್ತ ಮಹಿಳಾ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News