ವಿದ್ಯಾರ್ಥಿಗಳ ಆತ್ಮಹತ್ಯೆ: ಆರೋಪಿಗಳು ಯಾರು?

Update: 2019-03-14 05:51 GMT

ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ಘೋಷಣೆಯಾಯಿತೆಂದರೆ ವಿದ್ಯಾರ್ಥಿಗಳ ಪಾಲಿಗೆ ಯುದ್ಧ ಘೋಷಣೆಯಾದಂತೆ. ಮನೆಯಲ್ಲೂ, ಶಾಲೆಗಳಲ್ಲೂ ತುರ್ತು ಪರಿಸ್ಥಿತಿ ಘೋಷಣೆಯಾಗಿ ಬಿಡುತ್ತದೆ. ಎಲ್ಲೆಡೆಯೂ ಒತ್ತಡಗಳೇ. ಹಿಂದೆಲ್ಲ ವಿದ್ಯಾರ್ಥಿಗಳಿಗೆ ಉತ್ತೀರ್ಣರಾದರೆ ಸಾಕಿತ್ತು. ಈಗ ಹಾಗಲ್ಲ. ಅತ್ಯುತ್ತಮ ಶ್ರೇಣಿಯಲ್ಲೇ ಉತ್ತೀರ್ಣರಾಗಬೇಕಾದ ಸವಾಲು ಅವರ ಮುಂದಿದೆ. ಕಡಿಮೆ ಅಂಕದ ಜೊತೆಗೆ ಉತ್ತೀರ್ಣರಾಗುವುದಕ್ಕೂ, ಫೇಲಾಗುವುದಕ್ಕೂ ದೊಡ್ಡ ಅಂತರವಿಲ್ಲ ಎನ್ನುವುದನ್ನು ಶಾಲೆ ಮತ್ತು ಮನೆ ಅವರಿಗೆ ಮನದಟ್ಟುಮಾಡಿಸಿದೆ. ತಮ್ಮ ತಮ್ಮ ಮಕ್ಕಳ ಪರೀಕ್ಷೆಯನ್ನು ತಮ್ಮ ಪಾಲಿನ ಪರೀಕ್ಷೆಯಾಗಿ ಶಿಕ್ಷಕರು ಮತ್ತು ಪಾಲಕರು ಪರಿವರ್ತಿಸಿಕೊಂಡಿದ್ದಾರೆ. ನೂರು ಶೇಕಡ ಫಲಿತಾಂಶವನ್ನು ಶಾಲೆಗೆ ತಂದುಕೊಡಲೇ ಬೇಕು ಎನ್ನುವ ಒತ್ತಡ ಶಾಲೆಯ ವ್ಯವಸ್ಥಾಪಕರಿಂದ ಶಿಕ್ಷಕರ ಮೇಲಿದೆ. ಯಾಕೆಂದರೆ ಶಿಕ್ಷಣ ಉದ್ಯಮವಾಗಿದೆ.

ನೂರು ಶೇಕಡ ಫಲಿತಾಂಶ ಬಂದಾಕ್ಷಣ ಎಲ್ಲ ಶಾಲೆಗಳೂ ಅದನ್ನು ಮಾಧ್ಯಮಗಳ ಮೂಲಕ ಘೋಷಣೆ ಮಾಡುತ್ತವೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಸೆಳೆಯುವುದು, ಆ ಮೂಲಕ ಹೆಚ್ಚು ಹೆಚ್ಚು ಹಣವನ್ನು ಸುಲಿಯುವುದು ಅವರ ಗುರಿ. ಕೆಲವೊಮ್ಮೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂಡದಂತೆ ನೋಡಿಕೊಳ್ಳಲಾಗುತ್ತದೆ. ಒಂದು ವೇಳೆ ಆತ ಅನುತ್ತೀರ್ಣನಾದರೆ ಶಾಲೆಯ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎನ್ನುವ ದೂರಾಲೋಚನೆ ಮತ್ತು ದುರಾಲೋಚನೆಯಿಂದ ವಿದ್ಯಾರ್ಥಿ ಬದುಕಿನ ಜೊತೆಗೆ ಶಾಲೆಗಳು ಚೆಲ್ಲಾಟವಾಡುತ್ತವೆ. ಪಾಲಕರಂತೂ ಮದುವೆ, ಹಬ್ಬ, ಹರಿದಿನಗಳನ್ನೆಲ್ಲ ಪಕ್ಕಕ್ಕಿಟ್ಟು ವಿದ್ಯಾರ್ಥಿಗಳ ಬೆನ್ನ ಹಿಂದೆಯೇ ಓಡಾಡತೊಡಗುತ್ತಾರೆ. ಇವೆಲ್ಲದರ ಪರಿಣಾಮವಾಗಿ ವಿದ್ಯಾರ್ಥಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದು, ಇದೆಲ್ಲದರ ಪರಿಣಾಮ ಅತ್ಯಧಿಕ ಅಂಕಗಳನ್ನು ತನ್ನದಾಗಿಸುವುದೇ ಬದುಕಿನ ಏಕೈಕ ಗುರಿ ಎಂದು ಭಾವಿಸುತ್ತಾನೆ. ಒಂದು ವೇಳೆ ಅನುತ್ತೀರ್ಣನಾದರೆ ಅಥವಾ ಕಡಿಮೆ ಅಂಕಗಳು ಬಂದರೆ ಸಮಾಜಕ್ಕೆ, ಪಾಲಕರಿಗೆ, ಶಿಕ್ಷಕರಿಗೆ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಾನೆ.

  ರೈತರ ಆತ್ಮಹತ್ಯೆಯ ಬಳಿಕ ಈ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರು ವಿದ್ಯಾರ್ಥಿಗಳು. ಪ್ರತಿವರ್ಷ ಪರೀಕ್ಷೆಯ ಒತ್ತಡದಿಂದ ದೇಶಾದ್ಯಂತ ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಲವರು ನಾಪತ್ತೆಯಾಗುತ್ತಿದ್ದಾರೆ. ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಯನ್ನು ಎದುರಿಸುತ್ತಿದ್ದಾರೆ. ಇದು ಮಕ್ಕಳ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ, ಮಾನವ ಹಕ್ಕಿನ ಅತಿ ದೊಡ್ಡ ಉಲ್ಲಂಘನೆಯಾಗಿದೆ. ರೈತರ ಆತ್ಮಹತ್ಯೆಯ ಕುರಿತಂತೆ ನಡೆಯುವ ಚರ್ಚೆ, ಈ ವಿದ್ಯಾರ್ಥಿಗಳ ಆತ್ಮಹತ್ಯೆಯ ಸಂದರ್ಭದಲ್ಲಿ ವೌನವಾಗುತ್ತದೆ. ಇದಕ್ಕೆ ಮೊತ್ತ ಮೊದಲ ಕಾರಣ, ಈ ವಿದ್ಯಾರ್ಥಿಗಳು ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ.

ಒಂದು ವೇಳೆ ಇವರಿಗೆ ಮತ ಹಾಕುವ ಹಕ್ಕುಗಳೇನಾದರೂ ಇದ್ದಿದ್ದರೆ ಖಂಡಿತವಾಗಿಯೂ ರಾಜಕಾರಣಿಗಳು ಇವರ ಪರವಾಗಿ ಪ್ರಣಾಳಿಕೆಯನ್ನು ರೂಪಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳ ಆತ್ಮಹತ್ಯೆಯಲ್ಲಿ ಶಾಲೆ, ಸಮಾಜ ಮತ್ತು ಪಾಲಕರು ವ್ಯವಸ್ಥಿತವಾಗಿ ಭಾಗಿಯಾಗುತ್ತಾರೆ. ಇವರೆಲ್ಲರೂ ಪ್ರಕರಣದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಆರೋಪಿಗಳೇ ಆಗಿದ್ದಾರೆ. ಆದುದರಿಂದ, ಇವರಾರಿಗೂ ಈ ವಿಷಯ ಚರ್ಚೆಗೊಳಗಾಗುವುದು ಬೇಕಾಗಿಲ್ಲ. ಆದುದರಿಂದಲೇ ವಿದ್ಯಾರ್ಥಿಗಳ ಆತ್ಮಹತ್ಯೆ ತನಿಖೆಗೊಳಗಾಗುವುದಿಲ್ಲ. ಆತ್ಮಹತ್ಯೆಗೆ ಪ್ರೇರಣೆ ನೀಡಿದವರ ವಿಚಾರಣೆಯೂ ನಡೆಯುವುದಿಲ್ಲ. ಯಾವ ಪಾಲಕರೂ ಅದನ್ನು ಚರ್ಚೆಯ ವಿಷಯವಾಗಿಸಲು ಆಸ್ಪದ ನೀಡುವುದಿಲ್ಲ. ‘ಪರೀಕ್ಷೆಯ ಒತ್ತಡ: ವಿದ್ಯಾರ್ಥಿಯ ಆತ್ಮಹತ್ಯೆ’ ಎನ್ನುವ ಒಂದು ಸಾಲಿನ ತಲೆಬರಹದೊಂದಿಗೆ ಪ್ರಕರಣ ಮುಗಿದು ಹೋಗುತ್ತದೆ.

ಒಬ್ಬನ ಆತ್ಮಹತ್ಯೆಗೆ ಯಾರಾದರೂ ಕುಮ್ಮಕ್ಕು ನೀಡಿದ್ದೇ ಆದಲ್ಲಿ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಬೇಕಾಗುತ್ತದೆ. ಪರೀಕ್ಷೆಯ ಒತ್ತಡದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಎಂದಾದರೆ ಆ ಪರೀಕ್ಷೆಯನ್ನು ಆತನಿಗೆ ಒತ್ತಡವಾಗಿ ಆತ್ಮಹತ್ಯೆಗೆ ದೂಡಿದವರು ಯಾರು ಎನ್ನುವುದು ತನಿಖೆಗೊಳಪಡಬೇಕಾಗುತ್ತದೆ. ಆದುದರಿಂದ, ಪ್ರಕರಣ ಅಲ್ಲಿಗೆ ಮುಗಿದು ಹೋಗದಂತೆ ನೋಡಿಕೊಳ್ಳುವುದು ಪೊಲೀಸರ ಹೊಣೆಗಾರಿಕೆಯಾಗಿದೆ. ಒಬ್ಬ ವಿದ್ಯಾರ್ಥಿ ಪರೀಕ್ಷೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡರೆ, ಪಾಲಕರು, ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಎಲ್ಲರೂ ವಿಚಾರಣೆಗೊಳಪಡಬೇಕು. ಅವರನ್ನು ನ್ಯಾಯಾಲಯದ ಕಟಕಟೆಗೆ ಬರುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಪರೀಕ್ಷೆಯ ದಿನಗಳನ್ನು ‘ತುರ್ತುಪರಿಸ್ಥಿತಿ’ಯನ್ನಾಗಿ ಘೋಷಿಸುವ ಪರಿಪಾಠ ನಿಲ್ಲಬಹುದು. ಪರೀಕ್ಷೆ ಹತ್ತಿರ ಬರುತ್ತಿರುವಂತೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಹೆಚ್ಚು ಅಂಕಗಳನ್ನು ಪಡೆಯಲು ಅವರಿಗೆ ತಯಾರಿ ನೀಡಲಾಗುತ್ತದೆ. ಆದರೆ ಪರೀಕ್ಷೆಯ ಒತ್ತಡಗಳನ್ನು ನಿವಾರಿಸಲು ಯಾವುದೇ ತರಗತಿಗಳು ನಡೆಯುವುದಿಲ್ಲ. ಪರೀಕ್ಷೆ ಮತ್ತು ಫಲಿತಾಂಶವೇ ಅಂತಿಮವಲ್ಲ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವುುದಕ್ಕಾಗಿ ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಅಂಕ ಪಟ್ಟಿ ವಿದ್ಯಾರ್ಥಿಯ ಬದುಕಿನ ಸರ್ವಸ್ವವಲ್ಲ. ಅಂಕಪಟ್ಟಿಯೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದಾದರೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳೆಲ್ಲ ಇಂದು ಸಮಾಜದ ವಿವಿಧ ಅತ್ಯುನ್ನತ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳ ಬೇಕಾಗಿತ್ತು. ಈ ದೇಶದ ಶ್ರೇಷ್ಠ ವಿಜ್ಞಾನಿಗಳು, ಸಾಹಿತಿಗಳು, ಚಿಂತಕರು, ಇಂಜಿನಿಯರ್‌ಗಳು ರ್ಯಾಂಕ್ ಪಡೆದವರಲ್ಲ. ಅವರೆಲ್ಲ ಬದುಕಿನಿಂದ ಕಲಿತವರು ಎನ್ನುವ ಅಂಶವನ್ನು ನಮ್ಮ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕಾದ ಅಗತ್ಯವಿದೆ. ಅವರೊಳಗಿನ ನಿಜವಾದ ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ಅರಳಿಸುವ ಕಡೆಗೆ ಶಿಕ್ಷಣ ಕೆಲಸ ಮಾಡಬೇಕು. ಅಂಕಪಟ್ಟಿ ನಿರುದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬನ ಒಳಗಿರುವ ನಿಜವಾದ ಆಸಕ್ತಿಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ಕೊಟ್ಟರೆ ಆತ ಸ್ವಾವಲಂಬಿಯಾಗಿ ಬದುಕಬಲ್ಲ. ಈ ದೇಶದಲ್ಲಿ ನಿರುದ್ಯೋಗದ ಸಮಸ್ಯೆಯೂ ನಿಧಾನಕ್ಕೆ ಇಲ್ಲವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News