ವಿಪ್ರೋ ಸಂಸ್ಥಾಪಕ ದತ್ತಿ ಕಾರ್ಯಕ್ಕೆ ನೀಡಿದ ನಿಧಿ ಎಷ್ಟು ಗೊತ್ತೇ ?

Update: 2019-03-14 03:32 GMT

ಬೆಂಗಳೂರು, ಮಾ. 14: ವಿವಿಧ ದತ್ತಿ ಕಾರ್ಯಗಳಿಗಾಗಿ ವಿಪ್ರೋ ಸಂಸ್ಥೆ ವತಿಯಿಂದ ನೀಡುವ ನಿಧಿಯನ್ನು 52,750 ಕೋಟಿ ರೂಪಾಯಿ (750 ಕೋಟಿ ಡಾಲರ್)ಗೆ ಹೆಚ್ಚಿಸುವುದಾಗಿ ಅಧ್ಯಕ್ಷ ಅಝೀಂ ಪ್ರೇಮ್‌ಜಿ ಘೋಷಿಸಿದ್ದಾರೆ. 

ಇದರಿಂದ ಮಾನವೀಯ ಕಾರ್ಯಗಳಿಗೆ ಅವರು ಒಟ್ಟು 1.45 ಲಕ್ಷ ಕೋಟಿ ರೂ. (21 ಶತಕೋಟಿ ಡಾಲರ್) ನೀಡುವ ವಾಗ್ದಾನ ನೀಡಿದಂತಾಗಿದೆ.

ಇದರಿಂದಾಗಿ ವಿಪ್ರೋ ಫೌಂಡೇಷನ್ ವಿಶ್ವದ ಅತಿದೊಡ್ಡ ಪ್ರತಿಷ್ಠಾನಗಳ ಪೈಕಿ ಒಂದೆನಿಸಿಕೊಂಡಿದೆ. ಬಿಲ್ ಆ್ಯಂಡ್ ಮಿಲಿಂದಾ ಗೇಟ್ಸ್ ಫೌಂಡೇಷನ್ ಸುಮಾರು 40 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದು, ಫೋರ್ಡ್ ಫೌಂಡೇಷನ್ ಸುಮಾರು 12 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ ಎಂದು ಪೆನ್ಷನ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ವೆಬ್‌ಸೈಟ್ ಪ್ರಕಟಿಸಿದೆ.

ಭಾರತದ ಅತಿ ಶ್ರೀಮಂತರು ಸಾಮಾಜಿಕ ಕಾರ್ಯಗಳಿಗೆ ನೀಡುವ ದೇಣಿಗೆ ತೀರಾ ಕಡಿಮೆ ಎಂಬ ಅಂಶ ಬಿಯಾನ್ ಆ್ಯಂಡ್ ಕೋ ಎಂಬ ವ್ಯವಸ್ಥಾಪನಾ ಸಲಹಾ ಸಂಸ್ಥೆ ಪ್ರಕಟಿಸಿದ ಭಾರತದ ದತ್ತಿ ವರದಿ- 2019ರಲ್ಲಿ ಪ್ರಕಟಗೊಂಡ ಬೆನ್ನಲ್ಲೇ ಅಝೀಂ ಪ್ರೇಮ್‌ಜಿ ಈ ಭಾರಿ ಮೊತ್ತದ ಘೋಷಣೆ ಮಾಡಿದ್ದಾರೆ.

ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ಆರಂಭಿಸಿದ ಕೊಡುಗೆ ಪ್ರತಿಜ್ಞೆ (ಗಿವಿಂಗ್ ಪ್ಲೆಡ್ಜ್)ಗೆ ಸಹಿ ಮಾಡಿದವರಲ್ಲಿ ಅಝೀಂ ಪ್ರೇಮ್‌ಜಿ (73) ಮೊತ್ತಮೊದಲ ಭಾರತೀಯ ಉದ್ಯಮಿ.

ಈ ಅಭಿಯಾನದಡಿ ಶತಕೋಟ್ಯಾಧೀಶ್ವರರು ಕನಿಷ್ಠ ತಮ್ಮ ಶೇಕಡ 50ರಷ್ಟು ಸಂಪತ್ತನ್ನು ದತ್ತಿ ಚಟುವಟಿಕೆಗಳಿಗೆ ನೀಡುವ ಬದ್ಧತೆಯನ್ನು ವ್ಯಕ್ತಪಡಿಸಬೇಕಾಗುತ್ತದೆ. ಅಝೀಂ ಪ್ರೇಮ್‌ಜಿ ಇದೀಗ ವಿಪ್ರೋದಲ್ಲಿ ಹೊಂದಿರುವ ಶೇಕಡ 34ರಷ್ಟು ಷೇರಿನಿಂದ ಬರುವ ಎಲ್ಲ ಲಾಭಗಳನ್ನು ದತ್ತಿ ಕಾರ್ಯಕ್ಕೆ ನೀಡಲು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News