ರಫೇಲ್ ಒಪ್ಪಂದ: ಪುನರ್‌ಪರಿಶೀಲನಾ ಅರ್ಜಿಗಳ ವಿರುದ್ಧ ಸರಕಾರದ ಆಕ್ಷೇಪಗಳು ದುರುದ್ದೇಶಪೂರಿತ

Update: 2019-03-14 13:58 GMT

ಹೊಸದಿಲ್ಲಿ,ಮಾ.14: ದಾಖಲೆಯೊಂದು ಪ್ರಮುಖ ಸಾಕ್ಷವಾಗಿದ್ದರೆ ಅಂತಹ ದಾಖಲೆಯು ಲಭಿಸಿದ್ದು ಹೇಗೆ ಎಂಬ ಬಗ್ಗೆ ನ್ಯಾಯಾಲಯವು ಚಿಂತಿಸುವ ಅಗತ್ಯವಿಲ್ಲ ಎನ್ನುವುದು ಸ್ಥಾಪಿತ ಕಾನೂನಾಗಿದೆ ಎಂದು ರಫೇಲ್ ಒಪ್ಪಂದದ ಕುರಿತು ವಿಚಾರಣೆಯನ್ನು ಕೋರಿರುವ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ನಿವೇದಿಸಿದರು. ತನ್ನ ಅರ್ಜಿಯ ವಿರುದ್ಧ ಕೇಂದ್ರವು ಎತ್ತಿರುವ ಆಕ್ಷೇಪಗಳು ದುರುದ್ದೇಶದಿಂದ ಕೂಡಿವೆ ಎಂದೂ ಅವರು ವಾದಿಸಿದರು.

ಕೇಂದ್ರ ಮತ್ತು ಅರ್ಜಿದಾರರ ವಾದಗಳನ್ನು ಅಲಿಸಿದ ಬಳಿಕ ಮು.ನ್ಯಾ.ರಂಜನ್ ಗೊಗೊಯಿ ನೇತೃತ್ವದ ಪೀಠವು ಅರ್ಜಿಗಳು ಸಮರ್ಥನೀಯವಲ್ಲ ಎಂಬ ಸರಕಾರದ ವಾದದ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿತು. ಅರ್ಜಿಗಳು ರಹಸ್ಯ ಸರಕಾರಿ ಕಡತಗಳನ್ನು ಆಧರಿಸಿವೆ ಮತ್ತು ಇಂತಹ ಮಾಹಿತಿಗಳನ್ನು ಪ್ರಕಟಿಸುವುದು ಕಾನೂನುಬಾಹಿರ ಮತ್ತು ಭದ್ರತೆಗೆ ಬೆದರಿಕೆಯಾಗಿದೆ,ಹೀಗಾಗಿ ಈ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಸರಕಾರವು ಪ್ರತಿಪಾದಿಸಿತ್ತು. ಪುನರ್‌ಪರಿಶೀಲನಾ ಅರ್ಜಿಗಳನ್ನು ಕೈಗೆತ್ತಿಕೊಳ್ಳುವ ಮುನ್ನ ತಾನು ಈ ಆಕ್ಷೇಪವನ್ನು ಪರಿಶೀಲಿಸುವುದಾಗಿ ನ್ಯಾಯಾಲಯವು ತಿಳಿಸಿತ್ತು.

ಭೂಷಣ್ ಮತ್ತು ಇತರರು ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದ ಕುರಿತು ವಿಚಾರಣೆಯನ್ನು ಕೋರಿ ಕಳೆದ ವರ್ಷ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಡಿಸೆಂಬರ್‌ನಲ್ಲಿ ವಜಾಗೊಳಿಸಿತ್ತು. ಅವರು ಪುನರ್‌ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದು,ಫೆಬ್ರವರಿಯಲ್ಲಿ ಮಾಧ್ಯಮಗಳು ಬಹಿರಂಗಗೊಳಿಸಿದ್ದ ದಾಖಲೆಗಳನ್ನು ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಮಾ.6ರಂದು ನ್ಯಾಯಾಲಯವು ಮೊದಲ ಬಾರಿ ಪುನರ್‌ಪರಿಶೀಲನಾ ಅರ್ಜಿಗಳನ್ನು ಆಲಿಸಿತ್ತು ಮತ್ತು ಈ ವೇಳೆ ಸರಕಾರವು ರಕ್ಷಣಾ ಸಚಿವಾಲಯದಿಂದ ಕಡತಗಳನ್ನು ಕಳವು ಮಾಡಲಾಗಿದೆ ಎಂದು ಹೇಳಿತ್ತು.

ಗುರುವಾರ ಸರಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರು,ಇಂತಹ ಮುಖ್ಯ ದಾಖಲೆಗಳನ್ನು ಸರಕಾರದ ಅನುಮತಿಯಿಲ್ಲದೆ ಪ್ರಕಟಿಸುವಂತಿಲ್ಲ ಮತ್ತು ಅವುಗಳನ್ನು ನ್ಯಾಯಾಲಯದ ದಾಖಲೆಗಳಿಂದ ತೆಗೆದುಹಾಕಬೇಕೆಂದು ಹೇಳಿದರು. ಮಾಹಿತಿ ಹಕ್ಕು ಕಾಯ್ದೆ ಮತ್ತು ಭಾರತೀಯ ಸಾಕ್ಷ ಕಾಯ್ದೆಯಡಿಯೂ ಇಂತಹ ಮಾಹಿತಿಗಳನ್ನು ಬಹಿರಂಗಗೊಳಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾ.ಕೆ.ಎಂ.ಜೋಸೆಫ್ ಅವರು ಮಾಹಿತಿ ಹಕ್ಕು ಕಾಯ್ದೆಯು ಆಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶವನ್ನು ಹೊಂದಿದೆ,ಮತ್ತೆ ಹಿಂದಿನ ಕಾಲಕ್ಕೆ ಮರಳದಿರೋಣ ಎಂದರು. ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳು ಮಾಹಿತಿಗಳನ್ನು ಒದಗಿಸಲು ಬದ್ಧವಾಗಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News