ಸುಳ್ಳು ಅಂಕಿ ಅಂಶಗಳ ಮೂಲಕ ಮೋದಿ ಪ್ರಚಾರ: ದಿನೇಶ್ ಗುಂಡೂರಾವ್

Update: 2019-03-14 14:25 GMT

ಬೆಂಗಳೂರು, ಮಾ.14: ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಪ್ರಧಾನಿ ನರೇಂದ್ರಮೋದಿ ಒಂದೇ ಒಂದು ಗುರುತರವಾದ ಸಾಧನೆ ಮಾಡದಿದ್ದರೂ, ಸುಳ್ಳು ಅಂಕಿ ಅಂಶಗಳನ್ನು ಮುಂದಿಡುವ ಮೂಲಕ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಗುರುವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಸಂಶೋಧನಾ ವಿಭಾಗ ಸಿದ್ಧಪಡಿಸಿರುವ 10 ವರ್ಷಗಳ ಯುಪಿಎ ಸರಕಾರ, ಐದು ವರ್ಷಗಳ ಸಿದ್ದರಾಮಯ್ಯ ಆಡಳಿತ ಹಾಗೂ ಐದು ವರ್ಷಗಳ ನರೇಂದ್ರಮೋದಿ ಸರಕಾರದ ವೈಫಲ್ಯಗಳ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರವು ಕಳೆದ ಐದು ವರ್ಷಗಳಲ್ಲಿ ಯಾವುದೆ ಗುರುತರವಾದ ಸಾಧನೆ ಮಾಡಿಲ್ಲ. ಸಾಮಾಜಿಕ ಬದಲಾವಣೆ ತರುವಂತಹ ಒಂದು ಕಾನೂನನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ಜಿಎಸ್‌ಟಿ ಕಾನೂನು, ಯುಪಿಎ ಸರಕಾರದ ಕೂಸು. ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅದನ್ನು ವಿರೋಧಿಸಿದ್ದರು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ಮಾಹಿತಿ ಹಕ್ಕು ಕಾಯ್ದೆ, ಬುಡಕಟ್ಟು ಜನಾಂಗಗಳಿಗೆ ಅಧಿಕಾರಿ ಕಲ್ಲಿಸುವುದು, ಆಧಾರ್ ಈ ಎಲ್ಲ ಸಾಧನೆಗಳು ಯುಪಿಎ ಅವಧಿಯದ್ದು. ಲೋಕಪಾಲ ಮಸೂದೆಯನ್ನು ನಾವು ಜಾರಿಗೆ ತಂದೆವು. ಆದರೆ, ಮೋದಿ ಸರಕಾರಕ್ಕೆ ಐದು ವರ್ಷಗಳಲ್ಲಿ ಲೋಕಪಾಲರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ನೋಟು ಅಮಾನ್ಯೀಕರಣದಂತಹ ಮೂರ್ಖತನದ ನಿರ್ಧಾರವನ್ನು ಯಾವ ಪ್ರಧಾನಿಯೂ ಮಾಡಿರಲಿಲ್ಲ. ಮುದ್ರಾ ಯೋಜನೆಯಡಿ ಸೃಷ್ಟಿಯಾಗಿರುವ ಉದ್ಯೋಗಗಳ ಬಗ್ಗೆ ಜಾಹೀರಾತು ನೀಡಿದ್ದಾರೆ. ಆದರೆ, ವಾಸ್ತವ ವರದಿ ಬಿಡುಗಡೆ ಮಾಡಲು ಸರಕಾರ ಒಪ್ಪುತ್ತಿಲ್ಲ ಎಂದು ಅವರು ಹೇಳಿದರು.

ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ಅಂಕಿ ಅಂಶ ಹೊರ ಬಿದ್ದಿದ್ದರಿಂದ, ಅಂಕಿ ಅಂಶ ಆಯೋಗದ ಪದಾಧಿಕಾರಿಗಳು ರಾಜೀನಾಮೆ ನೀಡಿ ಹೋಗುವಂತಾಯಿತು. ಜಿಡಿಪಿ, ಉದ್ಯೋಗ ಸೃಷ್ಟಿಯ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಮಾತ್ರ ದೊಡ್ಡದಾಗಿ ಪ್ರಚಾರ ಪಡೆಯುವ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ದೂರಿದರು.

ನರೇಂದ್ರಮೋದಿ ಸಾಧನೆ ಶೂನ್ಯ. ಸಾಧನೆಯ ಆಧಾರದ ಮೇಲೆ ಮತ ಕೇಳಲು ಸಾಧ್ಯವಿಲ್ಲದೆ, ಭಾವನೆ ಮೇಲೆ ಮತಗಳನ್ನು ಕೇಳುತ್ತಿದ್ದಾರೆ. ಬಡವರು, ಸಾಮಾನ್ಯ ಜನರ ಪರವಾಗಿ ಯಾವ ಬದ್ಧತೆಯೂ ಮೋದಿಗಿಲ್ಲ. ಈ ಹಿಂದೆ ಮಂದಿರ ಎನ್ನುತ್ತಿದ್ದವರೂ ಈಗ ದೇಶದ ರಕ್ಷಣೆ ಎನ್ನುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಬಿಐ ಗವರ್ನರ್ ರಾಜೀನಾಮೆ, ಅಂಕಿ ಅಂಶಗಳ ಆಯೋಗದ ಅಧ್ಯಕ್ಷ ರಾಜೀನಾಮೆ, ಸಿಬಿಐ ಮುಖ್ಯಸ್ಥರನ್ನು ವಜಾ ಮಾಡುವ ಮೋದಿ ಸರಕಾರ, ಮಾಧ್ಯಮಗಳನ್ನು ನಿಯಂತ್ರಿಸುತ್ತಿದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಪ್ರಧಾನಿ ಯಾರಾದರೂ ಅಂಬಾನಿಯನ್ನು ಫ್ರಾನ್ಸ್‌ಗೆ ಕರೆದುಕೊಂಡು ಹೋಗಿ 30 ಸಾವಿರ ಕೋಟಿ ರೂ.ಗಳ ಒಡಂಬಡಿಕೆ ಮಾಡಿಕೊಂಡಿದ್ದರೆ, ಇಷ್ಟೊತ್ತಿಗೆ ಮಾಧ್ಯಮಗಳು ಅವರನ್ನು ಹರಾಜು ಹಾಕುತ್ತಿದ್ದರು ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಸರಕಾರದಲ್ಲಿ ಎಸ್ಸಿ-ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ, ಗ್ರಾಮೀಣಾಭಿವೃದ್ಧಿಗೆ ಗ್ರಾಮ ಸ್ವರಾಜ್ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಮೂರು ಮುಖ್ಯಮಂತ್ರಿಗಳ ಆಡಳಿತದಲ್ಲಿ ಯಾವುದೇ ಸಾಧನೆ ಆಗಿಲ್ಲ ಎಂದು ದಿನೇಶ್ ಗುಂಡೂರಾವ್ ಟೀಕಿಸಿದರು.

ಈ ಕೈಪಿಡಿಯನ್ನು ನಮ್ಮ ಸಂಶೋಧನಾ ವಿಭಾಗ ಸಿದ್ಧಪಡಿಸಿದೆ. ನಾವು ಯಾವುದೇ ಸುಳ್ಳು ಮಾಹಿತಿಯನ್ನು ನೀಡುತ್ತಿಲ್ಲ. ಇದನ್ನು ನಮ್ಮ ಪಕ್ಷದ ವಕ್ತಾರರು, ಕಾರ್ಯಕರ್ತರಿಗೆ ತಲುಪಿಸುತ್ತೇವೆ. ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ, ಎಷ್ಟು ರೈತರ ಆದಾಯ ಹೆಚ್ಚಿಸಿದೆ, ದೇಶದಲ್ಲಿ ಎಷ್ಟು ಸಂಪನ್ಮೂಲ ಹೆಚ್ಚಿಸಿದೆ, ಎಷ್ಟು ಪ್ರಮಾಣದಲ್ಲಿ ಬಡತನವನ್ನು ಕಡಿಮೆ ಮಾಡಿದೆ ಎಂಬುದರ ಬಗ್ಗೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷ ಮನ್ಸೂರ್ ಅಲಿಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News