ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಚೀನಾ ಹೆಸರನ್ನು ಬೆಂಬಲಿಸಿದವರೇ ನೆಹರೂ: ಜೇಟ್ಲಿ

Update: 2019-03-14 14:28 GMT

ಹೊಸದಿಲ್ಲಿ,ಮಾ.14: ಜೈಶೆ ಮುಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ಬಿಡುಗಡೆಯ ಬಗ್ಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಟೀಕೆಗಳ ಮಧ್ಯೆಯೇ ಮಾತನಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಇದೆಲ್ಲದರ ನಿಜವಾದ ತಪ್ಪಿತಸ್ಥ ನೆಹರೂ ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಇದರ ನಿಜವಾದ ತಪ್ಪಿತಸ್ಥರಾಗಿದ್ದಾರೆ. ಅವರೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯತ್ವಕ್ಕೆ ಭಾರತಕ್ಕಿಂತ ಚೀನಾ ಪರ ಹೆಚ್ಚು ಒಲವು ತೋರಿಸಿದ್ದರು ಎಂದು ಜೇಟ್ಲಿ ಆರೋಪಿಸಿದ್ದಾರೆ. ಮಸೂದ್ ಅಝರ್‌ನನ್ನು ಜಾಗತಿಕ ಉಗ್ರ ಎಂದು ಹೆಸರಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ಚೀನಾ ತಡೆಯೊಡ್ಡಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಎಂದರೆ ಭಯ ಎಂಬ ಕಾಂಗ್ರೆಸ್ ಹೇಳಿಕೆಯ ಹಿನ್ನೆಲೆಯಲ್ಲಿ ಜೇಟ್ಲಿ ಈ ಆರೋಪ ಮಾಡಿದ್ದಾರೆ.

ಕಾಶ್ಮೀರ ಮತ್ತು ಚೀನಾ ಈ ಎರಡು ವಿಷಯಗಳಲ್ಲೂ ನಿಜವಾಗಿ ತಪ್ಪು ಮಾಡಿರುವವರು ಒಬ್ಬರೇ ಎಂದು 1955ರ ಆಗಸ್ಟ್ 2ರಂದು ನೆಹರೂ ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಉಲ್ಲೇಖಿಸಿ ತಿಳಿಸಿದ್ದಾರೆ. ಚೀನಾವನ್ನು ವಿಶ್ವಸಂಸ್ಥೆಗೆ ಪರಿಗಣಿಸಬೇಕು ಆದರೆ ಭದ್ರತಾ ಮಂಡಳಿಗಲ್ಲ. ಚೀನಾ ಬದಲಾಗಿ ಆ ಸ್ಥಾನವನ್ನು ಭಾರತ ಪಡೆದುಕೊಳ್ಳಬೇಕು ಎಂದು ಅಮೆರಿಕ ಅನೌಪಚಾರಿಕ ಸಲಹೆಯನ್ನು ನೀಡಿದೆ. ಆದರೆ ಖಂಡಿತವಾಗಿಯೂ ನಾವು ಈ ಸಲಹೆಯನ್ನು ಸ್ವೀಕರಿಸುವಂತಿಲ್ಲ. ಯಾಕೆಂದರೆ ಇದರರ್ಥ ಚೀನಾದೊಂದಿಗೆ ನಾವು ಸಂಘರ್ಷಕ್ಕಿಳಿಯುವುದು. ಅದಲ್ಲದೆ ಭದ್ರತಾ ಮಂಡಳಿಯ ಸದಸ್ಯತ್ವ ನಿರಾಕರಣೆ ಚೀನಾದಂಥ ಪ್ರಮುಖ ರಾಷ್ಟ್ರಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ನೆಹರೂ ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳ ಸರಣಿಯಲ್ಲಿ ತಿಳಿಸಿದ್ದರು ಎಂದು ಜೇಟ್ಲಿ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News