ರಾಜ್ಯದಲ್ಲಿ ಬಿಎಸ್ಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಲ್ಲ: ರಾಜ್ಯಸಭಾ ಸದಸ್ಯ ಅಶೋಕ್ ಸಿದ್ಧಾರ್ಥ

Update: 2019-03-14 14:29 GMT

ಬೆಂಗಳೂರು, ಮಾ. 14: ಕರ್ನಾಟಕ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಅಶೋಕ್ ಸಿದ್ಧಾರ್ಥ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಗುರುವಾದ ನಗರದ ಕ್ವೀನ್ಸ್‌ರಸ್ತೆಯಲ್ಲಿನ ಸಭಾಂಗಣದಲ್ಲಿ ಬಿಎಸ್ಪಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಶೆಹ್ರಿಯಾರ್ ಖಾನ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ಬಿಎಸ್ಪಿ ದೇಶದಲ್ಲಿಯೆ ಮೂರನೆ ಅತಿದೊಡ್ಡ ಪಕ್ಷವಾಗಿದೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಬಿಎಸ್ಪಿ ತನ್ನದೆ ಆದ ಮತ ಬ್ಯಾಂಕ್ ಹೊಂದಿದೆ. ಹೀಗಾಗಿ, ಯಾವುದೇ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿಯೂ ಬಿಎಸ್ಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಅವರು ಇದೇ ವೇಳೆ ವಿವರಿಸಿದರು.

ಉತ್ತರ ಪ್ರದೇಶದಲ್ಲಿ ದಲಿತರು ಮತ್ತು ಮುಸ್ಲಿಮರು ಒಗ್ಗಟ್ಟಾಗಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಒಗ್ಗೂಡಬೇಕು. ಹೀಗಾಗಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಮುಸ್ಲಿಮರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಹುತಾತ್ಮ ಯೋಧ ಗುರು ಅವರ ಪತ್ನಿಯನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಪ್ರಸ್ತಾಪವಿಲ್ಲ. ಆಕೆಗೆ ಇನ್ನೂ, 25 ವರ್ಷ ವಯೋಮಿತಿ ಮೀರಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು. 28 ಲೋಕಸಭಾ ಕ್ಷೇತ್ರಗಳಿಗೂ ಶೀಘ್ರದಲ್ಲೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದರು.

ನೂತನವಾಗಿ ಪಕ್ಷಕ್ಕೆ ಸೇರ್ಪಡೆಯಾದ ಶೆಹ್ರಿಯಾರ್ ಖಾನ್ ಮಾತನಾಡಿ, ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಕುರಿತು ಧ್ವನಿಗೂಡಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಬಿಎಸ್ಪಿ ಮುಸ್ಲಿಮರ ಪಕ್ಷವಾಗಿದ್ದು ಸಂಘಟನೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಎಸ್ಪಿರಾಜ್ಯ ಘಟಕ ಅಧ್ಯಕ್ಷ ಪ್ರೊ.ಹರಿರಾಮ್, ಬಿಎಸ್ಪಿ ಕರ್ನಾಟಕ ರಾಜ್ಯ ಉಸ್ತುವಾರಿ ಎಂ.ಎಲ್.ತೋಮರ್, ಪಕ್ಷದ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಖಜಾಂಚಿ ಸಲ್ಮಾ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಎಪ್ರಿಲ್ 10ಕ್ಕೆ ‘ಅಕ್ಕ’ ರಾಜ್ಯಕ್ಕೆ

‘ಲೋಕಸಭಾ ಚುನಾವಣೆ ಹಿನ್ನೆಲೆ ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ಮುಖ್ಯಸ್ಥೆ ಕುಮಾರಿ ಬೆಹನ್ ಮಾಯಾವತಿ ಅವರು ಎಪ್ರಿಲ್ 10ಕ್ಕೆ ಕರ್ನಾಟಕ ರಾಜ್ಯಕ್ಕೆ ಆಗಮಿಸಲಿದ್ದು ಮೈಸೂರಿನಲ್ಲಿ ಪಕ್ಷದಿಂದ ಏರ್ಪಡಿಸಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’

-ಪ್ರೊ.ಹರಿರಾಮ್, ಬಿಎಸ್ಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News