ಪ್ರತಿಪಕ್ಷಗಳ ವೈಫಲ್ಯಗಳನ್ನು ಜನತೆಗೆ ಮುಟ್ಟಿಸಿ: ಮಾಜಿ ಡಿಸಿಎಂ ಆರ್.ಅಶೋಕ್

Update: 2019-03-14 14:32 GMT

ಬೆಂಗಳೂರು, ಮಾ.14: ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನಾಯಕ ಎಂಬುದು ಘೋಷಿಸಿಯಾಗಿದೆ. ಆದರೆ, ಇವತ್ತಿನವರೆಗೂ ಪ್ರತಿಪಕ್ಷಗಳಿಗೆ ನಾಯಕನನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಗೊಂದಲ ಬಗೆಹರಿದಿಲ್ಲ. ಇದು ಸೇರಿದಂತೆ ಪ್ರತಿಪಕ್ಷಗಳ ವೈಫಲ್ಯಗಳನ್ನು ಜನತೆಗೆ ಮನವರಿಕೆ ಮಾಡಿಕೊಡಲು ಬಿಜೆಪಿ ಕಾರ್ಯಕರ್ತರು ಮುಂದಾಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದ್ದಾರೆ.

ಗುರುವಾರ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರಿಗೆ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಪ್ರಮಾಣವಚನ ಕಾರ್ಯಕ್ರಮದ ವೇದಿಕೆಯಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಪ್ರತಿಪಕ್ಷಗಳ ನಾಯಕರು, ಕರ್ನಾಟಕದಲ್ಲಿ ಆರಂಭವಾಗಿರುವ ಮೈತ್ರಿ ಮುಂದಿನ ಲೋಕಸಭಾ ಚುನಾವಣೆಗೆ ನಾಂದಿ ಆಡಲಿದೆ ಎಂದು ಒಕ್ಕೊರಲಿನಿಂದ ಘೋಷಿಸಿದ್ದರು. ಆದರೆ, ಇಲ್ಲಿಯವೆಗೂ ಪ್ರತಿಪಕ್ಷಗಳು ಒಮ್ಮತದಿಂದ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲವೆಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಗೊಂಡು 9 ತಿಂಗಳು ಕಳೆದಿದೆ. ಇಲ್ಲಿಯವೆಗೂ ಒಂದು ಯೋಜನೆಯನ್ನು ಘೋಷಿಸಿಲ್ಲ. 46 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು. ಆದರೆ, ಸಾಲ ಮನ್ನ ಮಾಡಿದ್ದು ಕೇವಲ 3.5ಸಾವಿರ ಕೋಟಿ ರೂ.. ತಮ್ಮ ರಾಜಕಾರಣವನ್ನು ಕೇವಲ ಹಾಸನ, ರಾಮನಗರಕ್ಕೆ ಸೀಮಿತಗೊಳಿಸಿರುವ ಸರಕಾರ ನಮಗೆ ಬೇಕಾ ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕೆಂದು ಅವರು ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ಮಾಧ್ಯಮ ಕ್ಷೇತ್ರವು ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿದೆ. ಬಿಜೆಪಿಯ ಆಶಯಗಳು ಜನರಿಗೆ ಮುಟ್ಟಬೇಕಾದರೆ ಮಾಧ್ಯಮಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವುದನ್ನು ಅರಿಯಬೇಕಿದೆ ಎಂದು ತಿಳಿಸಿದರ.

ದಕ್ಷಿಣ ಭಾರತದಲ್ಲಿ ಬಿಜೆಪಿಯ ಶಕ್ತಿಕೇಂದ್ರ ಕರ್ನಾಟಕವೆ ಆಗಿದೆ. ನಮ್ಮ ರಾಜ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾಗೆ ವಿಶ್ವಾಸ ಹೆಚ್ಚಿದೆ. ಹೀಗಾಗಿ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಜಯಿಸುವ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿಯನ್ನು ತರಬೇಕಿದೆ ಎಂದು ಅವರು ಹೇಳಿದರು.

ಈ ವೇಳೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಬಿಜೆಪಿ ಚುನಾವಣಾ ಮಾಧ್ಯಮ ನಿರ್ವಹಣೆ ಸಂಚಾಲಕ ಎ.ಎಚ್.ಆನಂದ, ಬಿಜೆಪಿ ನಾಯಕಿ ಮಾಳವಿಕಾ ಮತ್ತಿತರರಿದ್ದರು.

ಕಣ್ಣೀರು ದೇವೇಗೌಡ ಕುಟುಂಬಕ್ಕೆ ಬ್ರಾಂಡ್ ಆಗಿದೆ. ಕುಟುಂಬದ ಅಧಿಕಾರಕ್ಕಾಗಿ ತಾತ, ಅಪ್ಪ, ಮೊಮ್ಮಕ್ಕಳು ಒಟ್ಟೊಟ್ಟಿಗೆ ಕಣ್ಣೀರು ಸುರಿಸುವುದನ್ನು ಚೆನ್ನಾಗಿ ಕಲಿತಿದ್ದಾರೆ. ದೇವೇಗೌಡರು ತನ್ನ ಕುಟುಂಬದ ಅಭ್ಯರ್ಥಿಗಳ ಪ್ರಚಾರದಲ್ಲಿ ಮಾತ್ರ ಕಣ್ಣೀರು ಹಾಕುತ್ತಾರೆ. ಬೇರೆ ಅಭ್ಯರ್ಥಿಗಳ ಗೆಲುವಿಗೆ ಯಾವತ್ತಾದರು ಕಣ್ಣೀರು ಹಾಕಿದ್ದಾರೆಯೆ. ಆರು ಕೋಟಿ ಜನತೆಯ ಪರವಾಗಿ ಕಣ್ಣೀರು ಹಾಕಿದ್ದಾರೆಯೆ ?

-ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ

ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡುವುದು ಕಾನೂನಿನಡಿ ಅಪರಾಧವಲ್ಲ. ಈ ಕುರಿತು ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ ಸ್ಪಷ್ಟ ಪಡಿಸಿಕೊಂಡಿದ್ದೇವೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಸಮಯ ವ್ಯರ್ಥ ಮಾಡದೆ ಪ್ರಚಾರದಲ್ಲಿ ತೊಡಗಬೇಕು.

-ಅರವಿಂದ ಲಿಂಬಾವಳಿ, ಬಿಜೆಪಿ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News