ಸುಮಲತಾ ಪಕ್ಷೇತರ ಅಭ್ಯರ್ಥಿಯಾದರೆ ಬಿಜೆಪಿ ಬೆಂಬಲಕ್ಕೆ ಚಿಂತನೆ: ಆರ್.ಅಶೋಕ್

Update: 2019-03-14 14:45 GMT

ಬೆಂಗಳೂರು, ಮಾ.14: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಅಂಬರೀಶ್ ಪತ್ನಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಅವರಿಗೆ ಬಿಜೆಪಿ ಬೆಂಬಲಿಸುವುದರ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದ್ದಾರೆ. 

ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಬೇಕೆಂಬುದು ಅಲ್ಲಿನ ಜನತೆಗೆ ಒಕ್ಕೊರಲ ಅಭಿಪ್ರಾಯವಾಗಿದೆ. ಹೀಗಾಗಿ ಅವರಿಗೆ ಬೆಂಬಲಿಸುವುದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೊತೆ ಚರ್ಚಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಈ ಬಗ್ಗೆ ಬಿಜೆಪಿ ಖಚಿತ ನಿಲುವು ತಾಳಲಿದೆ ಎಂದು ತಿಳಿಸಿದರು.

ಮಂಡ್ಯದಲ್ಲಿ ಜೆಡಿಎಸ್ ನಿಖಿಲ್ ಕುಮಾರಸ್ವಾಮಿಯನ್ನು ಅಭ್ಯರ್ಥಿಯನ್ನಾಗಿಸಿರುವುದು ಸರಿಯಾದ ಕ್ರಮವಲ್ಲ. ಇದರ ಬದಲು 20-30ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತನೊಬ್ಬನಿಗೆ ಟಿಕೆಟ್ ನೀಡಬಹುದಾಗಿತ್ತು. ಇದು ಕುಟುಂಬ ರಾಜಕಾರಣದ ಸ್ಪಷ್ಟ ಉದಾಹರಣೆಯೆಂದು ಅವರು ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಡಿ.ದೇವೇಗೌಡರು ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಇದೆ. ಬೆಂಗಳೂರು ನಗರದ ಜನತೆ ಜೆಡಿಎಸ್‌ನ್ನು ಒಪ್ಪಿಕೊಂಡಿಲ್ಲ. ಬಿಬಿಎಂಪಿ 198ಅಭ್ಯರ್ಥಿಗಳಲ್ಲಿ ಕೇವಲ 11ಮಂದಿ ಮಾತ್ರ ಜೆಡಿಎಸ್ ಅಭ್ಯರ್ಥಿಗಳಿದ್ದಾರೆ. ಹೀಗಾಗಿ ಎಚ್.ಡಿ.ದೇವೇಗೌಡರನ್ನು ನಗರದ ಜನತೆ ಸ್ವೀಕರಿಸುವುದಿಲ್ಲ.

-ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News