ರೌಡಿಶೀಟರ್ ಲಕ್ಷ್ಮಣ್ ಕೊಲೆ ಪ್ರಕರಣ: ಆರೋಪಿಗಳು ಬಳಸಿದ್ದ ಕಾರು ಪತ್ತೆ

Update: 2019-03-14 15:53 GMT

ಬೆಂಗಳೂರು, ಮಾ.14: ರೌಡಿಶೀಟರ್ ಲಕ್ಷ್ಮಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಕೊಲೆ ಮಾಡಲು ಬಳಸಿದ್ದ ಸ್ಕಾರ್ಪಿಯೋ ಕಾರನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ.

ರೌಡಿಶೀಟರ್ ಲಕ್ಷಣನನ್ನು ಆರೋಪಿಗಳು ಸ್ಕಾರ್ಪಿಯೋದಲ್ಲಿ ಬಂದು ಕೊಲೆ ಮಾಡಿದ್ದರು. ಕೊಲೆ ನಂತರ ಕನಕಪುರ ಬಳಿ ಕಾರನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಕಾರಿನ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈಗ ಸಾತನೂರು ಠಾಣೆ ಬಳಿಯ ಕನಕಪುರದಲ್ಲಿ ಸ್ಕಾರ್ಪಿಯೋ ಕಾರು ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡ ದಿನದಿಂದ ಸತತ ವಿಚಾರಣೆ ಮಾಡಿ ಕೊಲೆ ಹಿಂದೆ ಮಾಜಿ ರೌಡಿಗಳ ಕೈವಾಡವಿದೆಯಾ ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕ್ಯಾಟ್ ರಾಜ, ಹೇಮಂತ್ ಇಬ್ಬರನ್ನೂ ಈಗಾಗಲೇ ಬಂಧಿಸಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಇನ್ನೂ ಕೆಲ ಮಾಜಿ ರೌಡಿಗಳ ಭಾಗಿ ಬಗ್ಗೆ ಶಂಕೆಯಿದ್ದು, ಎ1 ಆರೋಪಿ ರೂಪೇಶ್ ಹಾಗೂ ವರ್ಷಿಣಿ ಬಳಿಯಿಂದ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಅಲ್ಲದೆ, ವರ್ಷಿಣಿಯು ಲಕ್ಷ್ಮಣ್ ಜೊತೆ ಹೆಚ್ಚು ಒಡನಾಟ ಹೊಂದಿದ್ದಳು. ಕೊಲೆಯಲ್ಲಿ ವರ್ಷಿಣಿ ತಾಯಿಯ ಕೈವಾಡ ಇರುವ ಅನುಮಾನ ಇದ್ದು ಸಿಸಿಬಿ ತನಿಖೆ ಮುಂದುವರೆಸಿದ್ದಾರೆ. ಇನ್ನು ಕೊಲೆಯಾದ ರೌಡಿಶೀಟರ್ ಲಕ್ಷ್ಮಣ್ ಬೇನಾಮಿ ಆಸ್ತಿ ಹೊಂದಿದ್ದು, ಆತನ ಬೇನಾಮಿ ಆಸ್ತಿ ಮೇಲೆ ಕೆಲ ರೌಡಿಗಳಿಗೆ ಕಣ್ಣಿತ್ತು. ಈತ ಹಲವಾರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದ. ಹೀಗಾಗಿ ಸಿಸಿಬಿ ಪೊಲೀಸರು ಈ ಬಗ್ಗೆಯೂ ತನಿಖೆ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News