ಪನ್ಸಾರೆ ಹತ್ಯೆ ಪ್ರಕರಣದಲ್ಲಿ ನಿಧಾನಗತಿಯ ತನಿಖೆ: ಮಹಾರಾಷ್ಟ್ರ ಸರಕಾರಕ್ಕೆ ಹೈಕೋರ್ಟ್ ತರಾಟೆ

Update: 2019-03-14 16:00 GMT

 ಮುಂಬೈ, ಮಾ.14: ವಿಚಾರವಾದಿ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರಕಾರ ಅನುಸರಿಸಿರುವ ತನಿಖಾ ಕ್ರಮವು ಹಾಸ್ಯಾಸ್ಪದವಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಪ್ರಕರಣದ ವಿಚಾರಣೆ ನಿಧಾನವಾಗಿ ನಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಎಸ್‌ಸಿ ಧರ್ಮಾಧಿಕಾರಿ ಮತ್ತು ಬಿಪಿ ಕೊಲಾಬಾವಾಲ ಅವರನ್ನೊಳಗೊಂಡ ನ್ಯಾಯಪೀಠವು ಮಾರ್ಚ್ 28ಕ್ಕೆ ನ್ಯಾಯಾಲಯದಲ್ಲಿ ಹಾಜರಾಗಿ ಈ ಬಗ್ಗೆ ವಿವರಣೆ ನೀಡುವಂತೆ ಮಹಾರಾಷ್ಟ್ರ ಗೃಹ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗೆ ಸಮನ್ಸ್ ನೀಡಿತು.

ಪನ್ಸಾರೆ ಹತ್ಯೆ ಪ್ರಕರಣದ ವಿಚಾರಣೆಯ ಪ್ರಗತಿ ವರದಿಯನ್ನು ಮಹಾರಾಷ್ಟ್ರ ಸಿಐಡಿ ವಿಭಾಗದ ವಿಶೇಷ ತನಿಖಾ ತಂಡ (ಸಿಟ್)ದ ಅಧಿಕಾರಿಗಳು ಸೀಲ್ ಮಾಡಲಾದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ವರದಿಯನ್ನು ಓದಿದ ನ್ಯಾಯಪೀಠ, ತನಿಖೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅತೃಪ್ತಿ ಸೂಚಿಸಿತು. ಸಿಟ್ ಸಲ್ಲಿಸಿದ್ದ ವರದಿಯಲ್ಲಿ, ಪ್ರಕರಣದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಇವರನ್ನು ಪತ್ತೆಹಚ್ಚುವ ಬದಲು ಅವರ ಸಂಬಂಧಿಗಳನ್ನು ವಿಚಾರಣೆ ನಡೆಸಿರುವುದಾಗಿ ತಿಳಿಸಲಾಗಿದೆ. ಅಲ್ಲದೆ ತಲೆಮರೆಸಿಕೊಂಡಿರುವ ಓರ್ವ ಆರೋಪಿ ರಾಜ್ಯದಲ್ಲಿ ಸ್ಥಿರ ಆಸ್ತಿಯೊಂದನ್ನು ಹೊಂದಿದ್ದು, ಆರೋಪಿಯ ಅಡಗುದಾಣದ ಮಾಹಿತಿ ಪಡೆಯಲು ಆ ಸ್ಥಳಕ್ಕೆ ಭೇಟಿ ನೀಡಿರುವುದಾಗಿ ತಿಳಿಸಲಾಗಿದೆ.

ಈ ಅಂಶಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಪ್ರಕರಣ ನಡೆದು ನಾಲ್ಕು ವರ್ಷಗಳಾದ ಬಳಿಕವೂ ಆರೋಪಿಗಳು ದುಷ್ಕೃತ್ಯ ನಡೆದ ಸ್ಥಳದ ಬಳಿಯೇ , ಅಥವಾ ರಾಜ್ಯದಲ್ಲಿಯೇ ಇರುವ ಸಾಧ್ಯತೆ ಕಡಿಮೆ ಎಂಬುದನ್ನು ‘ಸಿಟ್’ ಅರಿತುಕೊಳ್ಳಬೇಕು ಎಂದು ತಿಳಿಸಿತು. ಸ್ಥಿರ ಆಸ್ತಿ ಇದ್ದರೆ ಅದನ್ನು ಕಾಯ್ದುಕೊಂಡೇ ಆರೋಪಿ ಇರುತ್ತಾನೆಯೇ. ಆರೋಪಿ ದೇಶದ ಇತರೆಡೆ ತಲೆತಪ್ಪಿಸಿಕೊಂಡಿರೆಬಹುದು.

“ಆರೋಪಿಗಳನ್ನು ಪತ್ತೆಹಚ್ಚಲು ರಾಜ್ಯ ಸರಕಾರ ಕೈಗೊಂಡಿರುವ ಪ್ರಾಥಮಿಕ ಕ್ರಮಗಳು ಹಾಸ್ಯಾಸ್ಪದವಾಗಿವೆ” ಎಂದು ತಿಳಿಸಿತು. ಮಹಾರಾಷ್ಟ್ರದಂತಹ ಮುಂದುವರಿದ ರಾಜ್ಯವು ತನ್ನ ಚಿಂತಕರು ಹಾಗೂ ವಿಚಾರವಾದಿಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕು. ದುಷ್ಕೃತ್ಯಗಳ ಬಗ್ಗೆ ಮೂಕಪ್ರೇಕ್ಷರಾಗಿರಲು ಸಾಧ್ಯವಿಲ್ಲ. ಎಲ್ಲವೂ ಮುಗಿದ ಬಳಿಕ ಪೊಲೀಸರು, ತನಿಖಾ ತಂಡದವರು ಸ್ಥಳಕ್ಕೆ ಆಗಮಿಸಲು ಇದು ಸಿನೆಮವಲ್ಲ. ಅಲ್ಲದೆ ರಾಜಕಾರಣಿಗಳು ಪ್ರಜೆಗಳನ್ನು ರಕ್ಷಿಸಲು ಅಸಾಧ್ಯವಾದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನ್ಯಾಯಪೀಠ ತಿಳಿಸಿತು.

ಈ ಮಧ್ಯೆ, 2013ರಲ್ಲಿ ನಡೆದ ವಿಚಾರವಾದಿ ನರೇಂದ್ರ ದಾಭೋಳ್ಕರ್ ಹತ್ಯೆ ಪ್ರಕರಣದ ತನಿಖೆಯ ಬಗ್ಗೆ ವಿವರಣೆ ನೀಡಿದ ಸಿಬಿಐ, ಹತ್ಯೆ ಮಾಡಿದ ಶೂಟರ್‌ಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಮತ್ತು ಆರೋಪಪಟ್ಟಿ ದಾಖಲಿಸಲಾಗಿದೆ. ಆದರೆ ಆರೋಪಿಗಳು ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಶಸ್ತ್ರಾಸ್ತ್ರಗಳ ಬಗ್ಗೆ ತನಿಖೆ ನಡೆಸಲು ಇನ್ನಷ್ಟು ಕಾಲಾವಧಿ ಅಗತ್ಯವಿದೆ ಎಂದು ತಿಳಿಸಿತು. ಇದಕ್ಕೆ ಉತ್ತರಿಸಿದ ನ್ಯಾಯಪೀಠ, ತನಿಖಾ ಪ್ರಕ್ರಿಯೆಯ ಲೋಪವನ್ನು ಕಂಡುಹಿಡಿದು ಅದನ್ನು ಸರಿಪಡಿಸಿ, ಇನ್ನಷ್ಟು ವಿಳಂಬಕ್ಕೆ ಆಸ್ಪದ ನೀಡದೆ ತನಿಖೆಯನ್ನು ಪೂರ್ಣಗೊಳಿಸುವಂತೆ ಸಿಬಿಐಗೆ ಸೂಚಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News