ಫ್ಲಾಟ್ ಕೊಡಿಸುವುದಾಗಿ ನಂಬಿಸಿ ವಂಚನೆ: ಆರೋಪಿ ಬಂಧನ

Update: 2019-03-14 17:06 GMT

ಬೆಂಗಳೂರು, ಮಾ.14: ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲಾಟ್‌ಗಳನ್ನು ಬಾಡಿಗೆಗೆ ಕೊಡುವುದಾಗಿ ವೆಬ್‌ಸೈಟ್‌ಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮುಹಮ್ಮದ್ ಅಬ್ದುಲ್ ರಹೀಂ(47) ಎಂದು ಗುರುತಿಸಿದ್ದು, ‘99 ಎಕ್ರಾಸ್’, ‘ಕಾಮನ್ ಫ್ರೋ’, ‘ಮ್ಯಾಜಿಕ್ ಬ್ರಿಕ್ಸ್’ ಎಂಬ ವೆಬ್‌ಸೈಟ್‌ಗಳನ್ನು ತೆರೆದಿದ್ದ. ತನ್ನ ಹೆಸರನ್ನು ರಾಹುಲ್ ರಾಹೀಲ್, ಎಂ.ಎ.ಆರ್.ನೌಮಾನ್ ಸಲ್ಮಾನ್, ಎಂ.ಎ.ಆರ್.ಸಾರಿಕ್, ರಿಶಾನ್ ಸೇರಿದಂತೆ ಇನ್ನಿತರ ಹೆಸರುಗಳಿಂದ ಜನರನ್ನು ಪರಿಚಯಿಸಿಕೊಳ್ಳುತ್ತಿದ್ದ. ಮಾರತಹಳ್ಳಿ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲಾಟ್‌ಗಳನ್ನು ಬಾಡಿಗೆಗೆ ಹಾಗೂ ಲೀಸ್‌ಗೆ ಕೊಡುವುದಾಗಿ ಹೇಳುತ್ತಿದ್ದ. ಬೇರೆಯವರ ಫ್ಲಾಟ್‌ಗಳನ್ನು ತೋರಿಸಿ ತಾನೇ ಮಾಲಕನೆಂದು ನಂಬಿಸುತ್ತಿದ. ಜನರಿಂದ ಬಾಡಿಗೆಯ ಮತ್ತು ಲೀಸ್‌ನ ಹಣ ಪಡೆದು ಅಗ್ರಿಮೆಂಟ್ ಮಾಡಿಕೊಟ್ಟು ವಂಚಿಸುತ್ತಿದ್ದ ಎಂದು ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಆರೋಪಿ ವಿರುದ್ಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ. ಸುಮಾರು 25 ಲಕ್ಷ ರೂ. ಹಣ ವಂಚಿಸಿರುವುದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News