ಎಲ್ಲ ರಾಜಕೀಯ ಪಕ್ಷಗಳೂ ಪಿಎಫ್‌ಐ ಪ್ರಣಾಳಿಕೆ ಅಳವಡಿಸಿಕೊಳ್ಳುವಂತೆ ಒತ್ತಾಯ

Update: 2019-03-14 17:10 GMT

ಬೆಂಗಳೂರು, ಮಾ.14: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಬಿಡುಗಡೆ ಮಾಡಲಾಗಿರುವ 75 ಅಂಶಗಳ ಬೇಡಿಕೆಗಳನ್ನು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಮುಹಮದ್ ಶಾಕಿಬ್ ಒತ್ತಾಯಿಸಿದರು. 

ಗುರುವಾರ ಸುದ್ದಿಗೋಷ್ಠಿ ಮಾತನಾಡಿ ಅವರು, 75 ಬೇಡಿಕೆಯುಳ್ಳ ಪ್ರಣಾಳಿಕೆಯನ್ನು ಮಾ.6 ರಂದು ದಿಲ್ಲಿಯಲ್ಲಿ ಬಿಡುಗಡೆ ಮಾಡಿ ಎಲ್ಲ ಪಕ್ಷದವರಿಗೂ ನೀಡಲಾಗಿದೆ. ಅಲ್ಪಸಂಖ್ಯಾಂತರ ಹಕ್ಕುಗಳ ಬಗ್ಗೆ ಕಾಳಜಿ ಇರುವ ಎಲ್ಲ ರಾಜಕೀಯ ಪಕ್ಷಗಳು, ಸಕಾರಾತ್ಮಕವಾಗಿ ಸ್ವಂದಿಸುವಂತೆ ಮತ್ತು ಸಮುದಾಯದ ಬೇಡಿಕೆಯನ್ನು ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದೆ ಎಂದು ತಿಳಿಸಿದರು.

ಬಾಬರಿ ಮಸೀದಿ, ಪ್ರಾತಿನಿಧ್ಯ, ಜನ ವಿರೋಧಿ ಕಾನೂನು ಇತ್ಯಾದಿ ವಿಷಯಗಳಲ್ಲಿ ಇತರ ಪಕ್ಷಗಳು ಮೃದು ಬೆಂಬಲ ನೀಡುತ್ತಿದೆ. ಆದರೆ, ಬಿಜೆಪಿಯ ಕೋಮುವಾದಿ ಪಕ್ಷವು ಮೌನವಹಿಸುತ್ತಿದೆ ಎಂದು ಕಿಡಿಕಾಡಿದರು. ಮುಸ್ಲಿಂ ಸಮುದಾಯದ ಜ್ವಲಂತ ಸಮಸ್ಯೆಗಳನ್ನು ಒಳಗೊಂಡ 25 ಯೋಜನೆಗಳಡಿ ಒಟ್ಟು 75 ಬೇಡಿಕೆಗಳನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಲಾಗಿದೆ. ಬೇಡಿಕೆಗಳಲ್ಲಿ ಸಾಚಾರ್ ಸಮಿತಿ, ಮಿಶ್ರಾ ಆಯೋಗದ ಶಿಫಾರಸ್ಸುಗಳು, ಪೌರತ್ವ ತಿದ್ದುಪಡಿ ಬೆಳವಣಿಗೆ, ಎನ್‌ಕೌಂಟರ್ ಸಾವುಗಳ ಬಗ್ಗೆ, ಮುಸ್ಲಿಂ ವೈಯಕ್ತಿಕ ಕಾನೂನು ಹಾಗೂ ಮಹಿಳಾ ಸಬಲೀಕರಣ ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.

ಆರೆಸ್ಸೆಸ್‌ನ ನಿಯಂತ್ರಣದಲ್ಲಿರುವ ಕೇಂದ್ರದ ಎನ್‌ಡಿಎ ಸರಕಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನ್ಯಾಯದ ರಾಜಕೀಯ ಬದಲಾಗಿ, ದ್ವೇಷದ ರಾಜಕೀಯ ನೀತಿ ಅನುಸರಿಸಿ, ತಾರತಮ್ಯ ಮಾಡುತ್ತಿದೆ. ಇದರಿಂದ ಅಲ್ಪಸಂಖ್ಯಾಂತ ಸಮುದಾಯದ ಅಸ್ತಿತ್ವ ಹಾಗೂ ಅವರ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮೂಲೆಗುಂಪು ಮಾಡುತ್ತಾ ಬಂದಿದೆ ಎಂದು ಆರೋಪಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾಂತ ವಿರೋಧಿ ಬಿಜೆಪಿ ಸರಕಾರದ ವಿರುದ್ಧ, ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ 100 ಲೋಕಸಭಾ ಕ್ಷೇತ್ರಗಳಲ್ಲಿ ಕರಪತ್ರ ವಿತರಣೆ ಮಾಡುವ ಮೂಲಕ ಮತ್ತು ಸಮಾವೇಶ ಮುಂತಾದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಪರಿಣಾಮಕಾರಿಯಾದ ಪ್ರಚಾರವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಬಿಜೆಪಿ ಸರಕಾರಕ್ಕೆ ಸರಿಯಾದ ಪರ್ಯಾಯ ಸೃಷ್ಟಿಸಲು ಇತರ ಪಕ್ಷಗಳು, ತಮ್ಮ ನೀತಿಗಳನ್ನು ಬದಲಿಸಿಕೊಂಡು ಜನಪರವಾದ ಮತ್ತು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ ಜಾತ್ಯತೀತ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಿಎಫ್‌ಐನ ರಾಜ್ಯ ಸಮಿತಿ ಸದಸ್ಯರಾದ ಶಾಫಿ ಬೆಳ್ಳಾರೆ, ಇಲ್ಯಾಸ್ ಅಹ್ಮದ್ ಹಾಗೂ ಜಿಲ್ಲಾಧ್ಯಕ್ಷ ಝಫರುಲ್ಲಾ ಖಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News