ಲೋಕಸಭಾ ಚುನಾವಣೆಗೆ ವಾಟಾಳ್ ನಾಗರಾಜ್ ಸ್ಪರ್ಧೆ: ಅಂತಿಮವಾಗದ ಕ್ಷೇತ್ರ

Update: 2019-03-14 17:13 GMT

ಬೆಂಗಳೂರು, ಮಾ.14: ಲೋಕಸಭಾ ಚುನಾವಣೆಯಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ತಾವು ಸ್ಪರ್ಧೆ ಮಾಡುವುದಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಕೂಡ ಸ್ಪರ್ಧೆ ಮಾಡುತ್ತಿದ್ದು, ಯಾವ ಕ್ಷೇತ್ರದಿಂದ ಹಾಗೂ ಚುನಾವಣಾ ಪ್ರಣಾಳಿಕೆಯ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಆದರೆ, ಚುನಾವಣಾ ಆಯೋಗ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಹಣವನ್ನು ಅಭ್ಯರ್ಥಿಗಳು ಚುನಾವಣೆಯಲ್ಲಿ ವ್ಯಯ ಮಾಡುತ್ತಾರೆ. ಚುನಾವಣಾ ಆಯೋಗದ ಹಲವು ಕ್ರಮಗಳನ್ನು ಕೈಗೊಂಡರು ಹಣ ಹಾಗೂ ಜಾತಿಯ ಆಮಿಷವೊಡ್ಡಿ ಚುನಾವಣೆಯಲ್ಲಿ ವಿಜೇತರಾಗುತ್ತಾರೆ. ಎಲ್ಲ ಪಕ್ಷದವರು ಅಭ್ಯರ್ಥಿಯ ಜಾತಿ, ಹಣ ನೋಡಿ ಟಿಕೆಟ್ ಹಂಚುತ್ತಾರೆ. ಇದು ಅತ್ಯಂತ ಘೋರ ಅನ್ಯಾಯ ಎಂದು ಬೇಸರ ವ್ಯಕ್ತಪಡಿಸಿದರು.

ಬೇರೆ ರಾಜ್ಯದ ಸಂಸದರು ತಮ್ಮ ರಾಜ್ಯದ ಸಮಸ್ಯೆಗಳು ಎದುರಾದಾಗ ತೀವ್ರವಾಗಿ ಹೋರಾಟ ಮಾಡಿದ್ದಾರೆ. ಧರಣಿ, ಸಭಾತ್ಯಾಗ ಮಾಡುವ ಮೂಲಕ ತಮ್ಮ ರಾಜ್ಯದ ಬೇಡಿಕೆಗಳ ಬಗ್ಗೆ ದೇಶದ ಗಮನ ಸೆಳೆದಿದ್ದಾರೆ. ರಾಜ್ಯದಿಂದ ಆಯ್ಕೆಯಾದ ಲೋಕಸಭಾ ಸದಸ್ಯರು ಅಷ್ಟು ಚೈತನ್ಯಪೂರ್ಣವಾಗಿ ರಾಜ್ಯದ ಬಗ್ಗೆ ಚರ್ಚೆ ಮಾಡಲಿಲ್ಲ. ನದಿ, ರೈಲ್ವೆ, ಗಡಿನಾಡು, ಹಣಕಾಸು ಹಾಗೂ ಉದ್ಯೋಗ ಸೇರಿದಂತೆ ದೇಶದ ಪ್ರಮುಖ ವಿಚಾರಗಳ ಬಗ್ಗೆ ಒತ್ತಾಯ ಮಾಡಲಿಲ್ಲ. ಈಗ ಇಂತಹ ನಾಯಕರನ್ನೇ ಲೋಕಸಭೆಗೆ ಕಳುಹಿಸಲು ರಾಷ್ಟ್ರೀಯ ಪಕ್ಷಗಳು ಚಿಂತಿಸಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಲೋಕಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವಂತಹ ಅಭ್ಯರ್ಥಿಗಳು ಅಗತ್ಯವಾಗಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ತೀವ್ರವಾದಂತಹ ಚರ್ಚೆ, ಪ್ರತಿಭಟನೆ, ಸಭಾತ್ಯಾಗ ಮಾಡಿ ದೇಶದ ಗಮನ ಸೆಳೆಯುವ ನಾಯಕರು ಬೇಕು. ಆದರೆ ಈಗ ರಾಜ್ಯದ ಯಾವುದೇ ಪಕ್ಷದಲ್ಲಿಯೂ ಅಂತಹ ಪ್ರಬುದ್ಧ ನಾಯಕರಿಲ್ಲ. ಈ ಬಗ್ಗೆ ಮತದಾರರು ಎಚ್ಚರ ವಹಿಸಬೇಕು. ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಜಾತಿ, ಹಣ, ದಬ್ಬಾಳಿಕೆ ಇರಬಾರದು. ರಾಜ್ಯದಲ್ಲಿ ಜಾತಿ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದ್ದು, ಇದು ಸಂವಿಧಾನಕ್ಕೆ ಹಾಗೂ ಚುನಾವಣಾ ಕಾಯ್ದೆಗೆ ವಿರುದ್ಧವಾಗಿದೆ.

-ವಾಟಾಳ್ ನಾಗರಾಜ್, ಕನ್ನಡ ಒಕ್ಕೂಟದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News