ಎಲಿವೇಟೆಡ್ ಕಾರಿಡಾರ್ ಯೋಜನೆ ರದ್ದುಗೊಳಿಸಲು ಆಗ್ರಹಿಸಿ ಮಾ.16ರಂದು ಧರಣಿ

Update: 2019-03-14 17:15 GMT

ಬೆಂಗಳೂರು, ಮಾ.14: ಸಿಟಿಜನ್ ಫಾರ್ ಬೆಂಗಳೂರು ಫೋರಂ, ರಾಜ್ಯ ಸರಕಾರದ ಎಲಿವೇಟೆಡ್ ಕಾರಿಡಾರ್ ಯೋಜನೆ ರದ್ದುಗೊಳಿಸಿ ಪರ್ಯಾಯ ಸಾರಿಗೆಯನ್ನು ಅಧಿಕಗೊಳಿಸುವ ಮೂಲಕ ಈ ಯೋಜನೆಯಿಂದ ನಾಶವಾಗುವ 3 ಸಾವಿರ ಮರಗಳನ್ನು ಉಳಿಸಿ ಎಂದು ಆಗ್ರಹಿಸಿ ಮಾ.16ರಂದು ಮೌರ್ಯ ವೃತ್ತದ ಗಾಂಧೀ ಪ್ರತಿಮೆ ಬಳಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಫ್‌ಬಿಯ ತಾರಾಕೃಷ್ಣಸ್ವಾಮಿ, ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆ ಪೂರ್ಣಗೊಳ್ಳಬೇಕಾದರೆ 3 ಸಾವಿರಕ್ಕೂ ಅಧಿಕ ಮರಗಳು ಧರೆಗೆ ಉರುಳಬೇಕು ಹಾಗೂ ಪ್ರಮುಖ ಕೆರೆಗಳ ಒತ್ತುವರಿಯಾಗಬೇಕು. ಹೀಗಾಗಿ, ರಾಜ್ಯ ಸರಕಾರ ಎಲಿವೇಟೆಡ್ ಕಾರಿಡಾರ್‌ನಿಂದ ನಗರದ ವಾತಾವರಣದ ಮೇಲೆ ಎಷ್ಟು ದುಷ್ಪರಿಣಾಮ ಉಂಟಾಗಲಿದೆ ಎನ್ನುವುದರ ಕುರಿತು ಗಮನ ಹರಿಸಬೇಕಿದೆ ಎಂದು ಒತ್ತಾಯ ಮಾಡಿದರು.

ಉಪನಗರ ರೈಲು, ಬಸ್ ಸಂಪರ್ಕ ವ್ಯವಸ್ಥೆ, ಮೆಟ್ರೋ ರೈಲನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಈ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಕೈಬಿಟ್ಟು ಸಮೂಹ ಸಾರಿಗೆಯತ್ತ ಹೆಚ್ಚು ಗಮನ ನೀಡುವ ಮೂಲಕ ಕಾಂಕ್ರೀಟ್ ಸಾಕು, ಸಮೂಹ ಸಾರಿಗೆ ಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಆಗ್ರಹಿಸಿದರು.

ಕುಮಾರಸ್ವಾಮಿಯವರು ಸಾರ್ವಜನಿಕರ ಬಳಿ ಚರ್ಚೆ ನಡೆಸಬೇಕಿತ್ತು, ಆದರೆ ಹಾಗೆಯೇ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದು ಸರಿಯಲ್ಲ, ನಗರದಲ್ಲಿನ ಸಂಚಾರ ದಟ್ಟಣೆ ನಿವಾರಣೆಗಾಗಿ ಕಳೆದ ಹತ್ತಾರು ವರ್ಷಗಳಿಂದ ಮೇಲ್ಸೇತುವೆ, ಕೆಳ ಸೇತುವೆಗಳನ್ನು ನಿರ್ಮಿಸಲಾಗಿದೆ. ರಸ್ತೆಗಳನ್ನು ವಿಸ್ತರಣೆ ಮಾಡುವ ಜತೆಗೆ ಹಲವೆಡೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೂ ಸಂಚಾರ ದಟ್ಟಣೆ ಕಡಿಮೆಯಾಗಿಲ್ಲ ಎಂದು ಒಕ್ಕೊರಲಿನಿಂದ ಸಿಟಿಜನ್ ಫಾರ್ ಬೆಂಗಳೂರು ಫೋರಂನ ಸದಸ್ಯರು ಆರೋಪ ಮಾಡಿದರು.

ಕಾವೇರಿ ನೀರು ಸರಬರಾಜು ಮಾಡುವಾಗ ಶೇ.48ರಷ್ಟು ನೀರು ಪೋಲಾಗುತ್ತದೆ. ಅದಕ್ಕೆ ಸ್ಟೀಲ್ ಪೈಪ್ ಅಳವಡಿಸಲು 26 ಸಾವಿರ ಕೋಟಿ ರೂ. ಹಣ ಸಾಕು. ಇಂತಹ ನಗರದ ಮೂಲಭೂತ ಸಮಸ್ಯೆ ನಿವಾರಿಸಲು ಸರಕಾರದ ಬಳಿ ಹಣವಿಲ್ಲ. ಆದರೆ, ಎಲಿವೇಟೆಡ್ ಕಾರಿಡಾರ್ ಯೋಜನೆಗೆ 35 ಸಾವಿರ ಕೋಟಿ ರೂ. ಹಣ ಇದೆ.

-ಪ್ರಕಾಶ್ ಬೆಳವಾಡಿ, ರಂಗಕರ್ಮಿ

ಎಲ್ಲೆಲ್ಲಿ ಮರಗಳ ಮರಣಹೋಮ

* ಕಬ್ಬನ್ ಪಾರ್ಕ್‌ನಲ್ಲಿ -120

* ಜಯಮಹಲ್ ಪ್ಯಾಲೇಸ್ -356

* ಕೋಲ್ಸ್ ಪಾರ್ಕ್ -47

* ಐಐಎಸ್‌ಸಿ ಕ್ಯಾಂಪಸ್, ಸಿವಿ ರಾಮನ್ ರಸ್ತೆ -195

* ಐಐಎಸ್‌ಸಿ ಕ್ಯಾಂಪಸ್ ಯಶವಂತಪುರ -32

* ರಾಜಾರಾಮ್ ಮೋಹನರಾಯ್ ರಸ್ತೆ -108

ಯೋಜನೆಗೆ ಬಲಿಯಾಗುವ ಪ್ರಮುಖ ಕೆರೆಗಳು

* ಹೆಬ್ಬಾಳ ಕೆರೆ -5 ಮೀಟರ್

* ಕೆಆರ್‌ಪುರಂ ಕೆರೆ -20 ಮೀಟರ್

* ಸರ್ವಜ್ಞನಗರ ಕೆರೆ -20 ಮೀಟರ್

* ಹಲಸೂರು ಕೆರೆ -5 ಮೀಟರ್

* ವರ್ತೂರು ಕೆರೆ -5 ಮೀಟರ್

* ವೃಷಭಾವತಿ ಕೆರೆ -5 ಮೀಟರ್

* ಅಗರ ಕೆರೆ -30 ಮೀಟರ್

* ಚಳ್ಳಕೆರೆ -30 ಮೀಟರ್

* ಬಾಣಸವಾಡಿ ರಾಜಕಾಲುವೆ -1 ಮೀಟರ್

* ಶಾಂತಿನಗರ ರಾಜಕಾಲುವೆ -1 ಮೀಟರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News