ನ್ಯೂಝಿಲೆಂಡ್ ಮಸೀದಿಯಲ್ಲಿ ಶೂಟೌಟ್:ಬಾಂಗ್ಲಾದೇಶ ಕ್ರಿಕೆಟ್ ತಂಡ ಅಪಾಯದಿಂದ ಪಾರು

Update: 2019-03-15 04:43 GMT

 ಕ್ರೈಸ್ಟ್‌ಚರ್ಚ್, ಮಾ.15: ನ್ಯೂಝಿಲೆಂಡ್‌ನ ಕ್ರೈಸ್ಟ್‌ಚರ್ಚ್ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಜನ ಸಂದಣಿಯ ಮಸೀದಿಯಲ್ಲಿ ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ  ಘಟನಾ ಸ್ಥಳದಲ್ಲಿದ್ದ ಬಾಂಗ್ಲಾದೇಶದ ಇಡೀ ಕ್ರಿಕೆಟ್ ತಂಡ ಯಾವುದೇ ಅಪಾಯವಿಲ್ಲದೆ ಪಾರಾಗಿದೆ ಎಂದು ವರದಿಯಾಗಿದೆ.

ದಕ್ಷಿಣ ದ್ವೀಪ ನಗರದಲ್ಲಿ ನಡೆದ ಈ ಬೆಚ್ಚಿಬೀಳಿಸುವ ಘಟನೆಯಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿ ನಡೆಸಿರುವ ‘ಸಕ್ರಿಯ ಬಂದೂಕುದಾರ’ನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಎಲ್ಲ ಪ್ರದೇಶದಲ್ಲಿನ ದಾರಿ ಬಂದ್ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 ‘‘ಸಕ್ರಿಯ ಬಂದೂಕುದಾರಿಯ ಪೈಶಾಚಿಕ ಕೃತ್ಯದಿಂದಾಗಿ ಕ್ರೈಸ್ಟ್‌ಚರ್ಚ್‌ನಲ್ಲಿ ಗಂಭೀರ ಹಾಗೂ ಆತಂಕದ ಪರಿಸ್ಥಿತಿ ಉಂಟಾಗಿದೆ. ಪೊಲೀಸರು ತಮ್ಮೆಲ್ಲಾ ಸಾಮರ್ಥ್ಯ ಬಳಸಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ತಿಳಿದುಬಂದಿದೆ.

ಗುಂಡಿನ ದಾಳಿ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ನ್ಯೂಝಿಲೆಂಡ್ ಪ್ರಧಾನಮಂತ್ರಿ ಜಸಿಂಡಾ ಅರ್ಡೆನ್, ‘‘ಇದೊಂದು ದೇಶದ ಕಪ್ಪು ದಿನಗಳಲ್ಲಿ ಒಂದಾಗಿದೆ’’ ಎಂದರು.

‘‘ಬಾಂಗ್ಲಾದೇಶದ ಕ್ರಿಕೆಟ್ ತಂಡದ ಎಲ್ಲ ಸದಸ್ಯರು ಸಕ್ರಿಯ ಬಂದೂಕುದಾರಿಯಿಂದ ಪಾರಾಗಿದ್ದಾರೆ. ಅದೊಂದು ಭಯಾನಕ ಅನುಭವ. ದಯವಿಟ್ಟು ನಮ್ಮ ಬಗ್ಗೆ ನೀವು ಪ್ರಾರ್ಥಿಸಿ’’ಎಂದು ಬಾಂಗ್ಲಾದೇಶದ ಕ್ರಿಕೆಟಿಗ ತಮೀಮ್ ಇಕ್ಬಾಲ್ ಟ್ವೀಟ್ ಮಾಡಿದ್ದಾರೆ.

ನಾಳೆ ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಝಿಲೆಂಡ್ ಟೆಸ್ಟ್ ಪಂದ್ಯವನ್ನಾಡಬೇಕಾಗಿರುವ ಬಾಂಗ್ಲಾದೇಶ ತಂಡ ಮಸೀದಿಯಲ್ಲಿ ನಡೆದ ಗುಂಡಿನ ದಾಳಿಯಿಂದ ಪಾರಾಗಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿಗಾರ ಮುಹಮ್ಮದ್ ಇಸಾಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News