ಲೋಕಪಾಲ್ ಆಯ್ಕೆ ಸಮಿತಿಯಲ್ಲಿ ವಿಶೇಷ ಆಹ್ವಾನಿತರಾಗಲು ಮತ್ತೆ ನಿರಾಕರಿಸಿದ ಖರ್ಗೆ

Update: 2019-03-15 09:55 GMT

ಹೊಸದಿಲ್ಲಿ: ಲೋಕಪಾಲ್ ಆಯ್ಕೆಗಾಗಿನ ಸಮಿತಿ ಸಭೆಯಲ್ಲಿ ವಿಶೇಷ ಆಹ್ವಾನಿತರಾಗುವಂತೆ  ತಮಗೆ ನೀಡಲಾದ ಆಫರ್ ತಿರಸ್ಕರಿಸಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸರಕಾರಕ್ಕೆ ಏಳನೇ ಬಾರಿ ಪತ್ರ ಬರೆದಿದ್ದಾರೆ. ಲೋಕಪಾಲ್  ನೇಮಕಾತಿಗಾಗಿ ಆಯ್ಕೆ ಸಮಿತಿ  ಸಭೆ ಸೇರುವ ದಿನಾಂಕಗಳನ್ನು ತಿಳಿಸಲು ಸುಪ್ರೀಂ ಕೋರ್ಟ್ ಸರಕಾರಕ್ಕೆ  10 ದಿನಗಳ ಕಾಲಾವಕಾಶ ನೀಡಿದ ನಂತರ ಸರಕಾರ  ಖರ್ಗೆಗೆ ಆಫರ್ ಮಾಡಿತ್ತು. ಲೋಕಪಾಲ್ ಗಾಗಿ ಸೂಕ್ತ ಅಭ್ಯರ್ಥಿಯ ಆಯ್ಕೆಗೆ ಸಮಿತಿ ಇಂದು ಸಭೆ ಸೇರುವ ನಿರೀಕ್ಷೆಯಿತ್ತು.

``ವಿಶೇಷ ಆಹ್ವಾನಿತರಿಗೆ  ಲೋಕಪಾಲ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಯಾವುದೇ ಹಕ್ಕುಗಳಿಲ್ಲದೇ ಇರುವುದರಿಂದ ಇಂತಹ ಒಂದು ಪ್ರಮುಖ ವಿಚಾರದಲ್ಲಿ ವಿಪಕ್ಷಕ್ಕೆ ಯಾವುದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿಲ್ಲದ ಆಹ್ವಾನವನ್ನು ನನಗೆ ಒಪ್ಪಲು ಸಾಧ್ಯವಿಲ್ಲ,'' ಎಂದು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಖರ್ಗೆ ವಿವರಿಸಿದ್ದಾರೆ.

``2014ರಿಂದ ಸರಕಾರವು ಲೋಕಪಾಲ್ ನೇಮಕಾತಿ ಆಯ್ಕೆ ಸಮಿತಿಯಲ್ಲಿ ವಿಪಕ್ಷಗಳಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪಕ್ಷದ ನಾಯಕನ್ನು ನೇಮಕಗೊಳಿಸಲು ಅನುವು ಮಾಡಿಕೊಡಲು ಲೋಕಪಾಲ್ ಕಾಯಿದೆಯನ್ನು ತಿದ್ದುಪಡಿ ಮಾಡಿಲ್ಲ, ಏಕಪಕ್ಷೀಯ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಯಾರೂ ಈ ಹುದ್ದೆಯನ್ನು ಒಪ್ಪಿಕೊಳ್ಳಲು ನಿರಾಕರಿಸಬಹುದು,'' ಎಂದು ಅವರು ಎಚ್ಚರಿಸಿದ್ದಾರೆ.

ವಿಪಕ್ಷ ನಾಯಕನಾಗಿ ಅಥವಾ ಸಂಸತ್ತಿನಲ್ಲಿ ಅತಿ ದೊಡ್ಡ ವಿಪಕ್ಷದ ನಾಯಕನಾಗಿ ಖರ್ಗೆಯವರನ್ನು ಆಯ್ಕೆ ಸಮಿತಿಯ ಸದಸ್ಯರಾಗಿ ಸೇರ್ಪಡೆಗೊಳಿಸದೇ ಇರುವುದು ಈಗಾಗಲೇ ವಿವಾದಕ್ಕಿಡಾಗಿದೆ. ತಾನು ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಲು ನಿರಾಕರಿಸುತ್ತಿರುವುದು ಲೋಕಪಾಲ್ ನೇಮಕಾತಿ ಕಳೆದ ಐದು ವರ್ಷಗಳಲ್ಲಿ ನಡೆಯದೇ ಇರುವುದಕ್ಕೆ ಸರಕಾರಕ್ಕೆ ಒಂದು ನೆಪವಾಗಿದೆ ಎಂದು ಖರ್ಗೆ ಆಪಾದಿಸಿದ್ದಾರೆ.

ಲೋಕಸಭೆಯಲ್ಲಿ ಸದ್ಯ ಕಾಂಗ್ರೆಸ್ ಪಕ್ಷಕ್ಕೆ ಕೇವಲ 44 ಸ್ಥಾನಗಳಿವೆ. ಆದರೆ ನಿಯಮಗಳ ಪ್ರಕಾರ ವಿಪಕ್ಷ ನಾಯಕ ಎಂಬ ಅಧಿಕೃತ ಹುದ್ದೆ ಪಡೆಯಲು ಲೋಕಸಭೆಯ ಕನಿಷ್ಠ ಶೇ 10 ಸ್ಥಾನಗಳನ್ನು ಒಂದು ಪಕ್ಷ ಪಡೆಯಬೇಕಿದೆ.

ಕಳೆದ ಫೆಬ್ರವರಿಯಿಂದೀಚೆಗೆ ಖರ್ಗೆ ವಿಶೇಷ ಆಹ್ವಾನಿತರಾಗುವ ಆಫರ್ ಅನ್ನು ಆರು ಬಾರಿ ತಿರಸ್ಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News