ಕೇಂದ್ರ ಚುನಾವಣಾ ಆಯೋಗದ ಸಿವಿಜಿಲ್ ಆ್ಯಪ್ ಅಧಿಕೃತ ಬಿಡುಗಡೆ

Update: 2019-03-15 13:13 GMT

ಬೆಂಗಳೂರು, ಮಾ.15: ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿ ಅಕ್ರಮಗಳಲ್ಲಿ ತೊಡಗಿಸಿಕೊಳ್ಳುವುದನ್ನ ತಡೆಯವ ಸಲುವಾಗಿ ಕೇಂದ್ರ ಚುನಾವಣಾ ಆಯೋಗ ರೂಪಿಸಿರುವ ಸಿವಿಜಿಲ್ ಆ್ಯಪ್ ಅನ್ನು ರಾಜ್ಯ ಮಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಇಂದಿಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದರು. 

ನಗರದ ವಾರ್ತಾ ಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಆ್ಯಪ್ ಬಿಡುಗಡೆ ನಂತರ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದ ಆ್ಯಪ್‌ಅನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿದೆ. ಕೇಂದ್ರ ಚುನಾವಣಾಧಿಕಾರಿ ಚುನಾವಣೆಯ ದಿನಾಂಕ ಘೋಷಿಸಿದ ಕ್ಷಣದಿಂದಲೇ ನೀತಿ ಸಂಹಿತೆ ಅಡಿಯಲ್ಲಿ ಈ ಆ್ಯಪ್‌ಅನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.

186 ದೂರುಗಳು ದಾಖಲು: ಮಾ.10 ರಿಂದ ಇದುವರೆಗೂ ಸಿವಿಜಿಲ್ ಆ್ಯಪ್ ಮೂಲಕ ರಾಜ್ಯದ ವಿವಿಧ ಕಡೆಗಳಿಂದ 186 ದೂರುಗಳು ದಾಖಲಾಗಿವೆ. ಅದರಲ್ಲಿ ಸುಮಾರು 111 ಸುಳ್ಳು ಪ್ರಕರಣಗಳಾಗಿದ್ದು, ಉಳಿದವುಗಳಲ್ಲಿ 45 ಪ್ರಕರಣಗಳು ವಿಲೇವಾರಿ ಮಾಡಲಾಗಿದೆ ಹಾಗೂ 30 ಪ್ರಕರಣಗಳು ತನಿಖೆಯಲ್ಲಿವೆ ಎಂದು ಮಾಹಿತಿ ನೀಡಿದರು.

10 ಸಾವಿರಕ್ಕೂ ಅಧಿಕ ಅಧಿಕಾರಿಗಳು ಕೆಲಸ: ಸಿವಿಜಿಲ್ ಆ್ಯಪ್ ಅಡಿ ದಾಖಲಾಗುವ ದೂರುಗಳ ಪರಿಶೀಲನೆ ಹಾಗೂ ಕ್ರಮ ಕೈಗೊಳ್ಳುವ ಸಲುವಾಗಿ ರಾಜ್ಯಾದ್ಯಂತ 330 ಅಧಿಕಾರಿಗಳು, 7475 ಫೀಲ್ಡ್ ಯೂನಿಟ್‌ಗಳು ಮತ್ತು 10,489 ಫೀಲ್ಡ್ ಸ್ಟಾಫ್‌ಗಳು ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಫೀಲ್ಡ್ ಯೂನಿಟ್‌ನಲ್ಲಿ ಒಬ್ಬರು ಸೆಕ್ಟರ್ ಮ್ಯಾಜಿಸ್ಟ್ರೇಟ್, ಒಬ್ಬರು ಪೊಲೀಸ್‌ರನ್ನು ಒಳಗೊಂಡ ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ನಾಗರಿಕರಿಂದ ಬರುವ ವಿವಿಧ ರೀತಿಯ ದೂರುಗಳನ್ನು ಸ್ವೀಕರಿಸಿ ಸಂಬಂಧಿಸಿದ ಜಿಲ್ಲೆಗಳಿಗೆ ಕ್ರಮಕ್ಕಾಗಿ ಕಳುಹಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಸರಕಾರಿ ಅಧಿಕಾರಿಗಳ ವಿರುದ್ಧ ದೂರು, ಚುನಾವಣಾ ಸಂಬಂಧಿತ ಅವ್ಯವಹಾರ ಇತ್ಯಾದಿಗಳ ಕುರಿತು ಸಾರ್ವಜನಿಕ ಪತ್ರಗಳು, ಈಮೇಲ್, ಆನ್‌ಲೈನ್ ಅರ್ಜಿ, ದೂರವಾಣಿ ಕರೆಗಳ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

ಫೆಬ್ರವರಿ 2019 ರಿಂದ ಇದುವರೆಗೂ ದಾಖಲಾದ ದೂರುಗಳು, ಜಿಲ್ಲಾ ಮತದಾರರ ಸಹಾಯವಾಣಿಯಲ್ಲಿ 20,271 ದೂರು ಸ್ವೀಕಾರವಾಗಿದ್ದು, 19,801 ವಿಲೇವಾರಿ ಮಾಡಲಾಗಿದೆ. ರಾಜ್ಯ ಮತದಾರರ ಸಹಾಯವಾಣಿಗೆ 9,318 ದೂರುಗಳು ದಾಖಲಾಗಿದ್ದು, 9,079 ದೂರುಗಳು ವಿಲೇವಾರಿ ಮಾಡಲಾಗಿದೆ. ಇನ್ನುಳಿದಂತೆ ಪತ್ರ ಹಾಗೂ ಇ-ಮೇಲ್ ಮೂಲಕ 54 ದೂರುಗಳು ಬಂದಿದ್ದು, 12 ವಿಲೇವಾರಿಯಾಗಿದೆ. ಪತ್ರಿಕೆಗಳಲ್ಲಿ ವರದಿಯಾದ 17 ಘಟನೆಗಳಲ್ಲಿ ಎಲ್ಲವನ್ನೂ ತನಿಖೆ ಮಾಡಲಾಗಿದೆ. ಟಿವಿಯಲ್ಲಿ ಪ್ರಸಾರವಾದ ಘಟನೆಗಳಲ್ಲಿ 4 ದೂರುಗಳಿದ್ದು, ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ. ಟ್ವಿಟರ್, ಪೇಸ್‌ಬುಕ್, ಇನ್ಸ್ಟಾಗ್ರಾಮ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ಮೂರು ಹಾಗೂ ಇತರೆ ಮೂಲಗಳಿಂದ ಆರು ದೂರುಗಳು ದಾಖಲಾಗಿದ್ದು, ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ ಎಂದರು.

ಕಳೆದ 24 ಗಂಟೆಗಳ ಅವಧಿಯಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು 13.63 ಲಕ್ಷ ನಗದು, 11.83 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ, 10.10 ಲಕ್ಷ ಮೌಲ್ಯದ ವಾಹನಗಳು, 5.35 ಮೌಲ್ಯದ ಮತ್ತಿತರೆ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ಸ್ ತಂಡಗಳು 40.54 ಲಕ್ಷದ ನಗದು, 51.59 ಲಕ್ಷ ಮೌಲ್ಯದ ವಾಹನಗಳು ಹಾಗೂ ಮತ್ತಿತರೆ ಸಾಮಗ್ರಿಗಳು, 6.35 ಲಕ್ಷದ ಚಿನ್ನಬೆಳ್ಳಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪೊಲೀಸ್ ಪ್ರಾಧಿಕಾರಗಳು 5,790 ನಗದು, 1.08 ಮೌಲ್ಯದ ಮದ್ಯ, 8 ಲಕ್ಷ ಮೌಲ್ಯದ ಮೂರು ವಾಹನಗಳು, 2.50 ಲಕ್ಷ ಮೌಲ್ಯದ ಅಕ್ಕಿ ವಶಪಡಿಸಿಕೊಂಡಿದ್ದು, 21 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.

ಅಬಕಾರಿ ಇಲಾಖೆಯು 8.52 ಕೋಟಿ ಮೌಲ್ಯದ ಐಎಂಎಲ್ ಮದ್ಯ ಹಾಗೂ ಇತರೆ ಮದ್ಯ ಸೇರಿ 1.84 ಕೋಟಿ ಲೀ.ನಷ್ಟು ಮದ್ಯ ವಶಪಡಿಸಿಕೊಳ್ಳಲಾಗಿದೆ. 415 ಘೋರ ಅಪರಾಧ ಪ್ರಕರಣಗಳು ಹಾಗೂ 307 ಮದ್ಯದ ಪರವಾನಿಗೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವಿವರಿಸಿದರು.

ಸಹಾಯವಾಣಿ 24 ಗಂಟೆಯೂ ಕಾರ್ಯಪ್ರವೃತ್ತ

ರಾಜ್ಯಮಟ್ಟದ ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯಪ್ರವೃತ್ತವಾಗಿರುತ್ತದೆ. ಸಹಾಯವಾಣಿ ಸಂಖ್ಯೆ 1800 4255 1950 ಸಂಖ್ಯೆಯನ್ನು ಸಂಪರ್ಕಿಸಬಹುದು. ಪ್ರತಿಜಿಲ್ಲೆಯಲ್ಲಿಯೂ ಸಹಾಯವಾಣಿ ಪ್ರಾರಂಭಿಸಲಾಗಿದೆ. ಆಯಾ ಜಿಲ್ಲೆಯ ಸಾರ್ವಜನಿಕರು 1950 ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಹೊರ ಜಿಲ್ಲೆಗಳಿಂದ ಸಂಪರ್ಕಿಸಬೇಕಾದರೆ ಎಸ್‌ಟಿಡಿ ಕೋಡನ್ನು ಬಳಸಬೇಕು.

-ಸಂಜೀವ್‌ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News