ಮೈತ್ರಿ ಸರಕಾರ ಶೇ.20 ರಷ್ಟು ಕಮಿಷನ್ ಸರಕಾರ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

Update: 2019-03-15 13:26 GMT

ಬೆಂಗಳೂರು, ಮಾ. 15: ಗ್ರಾಮೀಣಾಭಿವೃದ್ದಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ನಾರಾಯಣಗೌಡ ಪಾಟೀಲ್ ಗೆ ಸೇರಿದ 2 ಕೋಟಿ ರೂ.ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮೈತ್ರಿ ಸರಕಾರ ಕಮಿಷನ್ ಸರಕಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಗುತ್ತಿಗೆದಾರರಿಂದ ಅಧಿಕಾರಿಗಳು ಹಣ ಸಂಗ್ರಹಿಸುತ್ತಿರುವುದು ಐಟಿ ಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಕಾಂಗ್ರೆಸ್ ಸರಕಾರವನ್ನು ಶೇ.10ರಷ್ಟು ಕಮಿಷನ್ ಸರಕಾರ ಎಂದು ಪ್ರಧಾನಿ ಮೋದಿ ಟೀಕಿಸಿದ್ದರು. ಇದೀಗ ಅಧಿಕಾರಿಗಳೇ ಹಣ ಸಂಗ್ರಹಿಸುತ್ತಿರುವುದು ಐಟಿ ತನಿಖೆಯಿಂದ ಬಯಲಾಗಿದೆ. ಮೈತ್ರಿ ಸರಕಾರ ಶೇ.20ರಷ್ಟು ಕಮಿಷನ್ ಸರಕಾರ ಎಂದು ಆರೋಪಿಸಿದರು.

ಅಧಿಕಾರಿಗಳಿಂದ ಹಣ ಸಂಗ್ರಹಿಸುವುದು ಶಿಕ್ಷಾರ್ಹ ಅಪರಾಧ. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಪಕ್ಷದಿಂದ ಹಣ ನೀಡಬೇಕಿತ್ತು. ಅದು ಬಿಟ್ಟು ಭ್ರಷ್ಟಾಚಾರ ಇಲ್ಲವೆ, ವಾಮಮಾರ್ಗದ ಮೂಲಕ ಹಣ ಸಂಗ್ರಹಿಸಿ ಯಾವ ಪುರುಷಾರ್ಥಕ್ಕೆ ಕಾರ್ಯಕ್ರಮ ನಡೆಸುತ್ತೀರಿ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳುತ್ತಾರೆ. ಇದೀಗ ನಿಮ್ಮ ಕಾಲ ಬುಡದಲ್ಲೇ ಭ್ರಷ್ಟಾಚಾರ ನಡೆದಿದ್ದು ಏಕೆ ತುಟಿ ಬಿಚ್ಚುತ್ತಿಲ್ಲ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಶುದ್ಧ ಸುಳ್ಳು: ಖರ್ಗೆ ಅವರನ್ನು ಸಿಎಂ ಮಾಡಲು ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೆ ಎಂಬ ದೇವೇಗೌಡರ ಹೇಳಿಕೆ ಶುದ್ಧ ಸುಳ್ಳು. ಅದನ್ನು ಈಗ ಹೇಳುವ ಅಗತ್ಯ ಇರಲಿಲ್ಲ. ಚುನಾವಣೆ ಫಲಿತಾಂಶ ಬಂದ ವೇಳೆ ಪ್ರಾಮಾಣಿಕವಾಗಿ ಖರ್ಗೆ ಸಿಎಂ ಮಾಡಲು ಪ್ರಯತ್ನಿಸಬೇಕಿತ್ತು. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಖರ್ಗೆ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಟೀಕಿಸಿದರು.

‘ಎಂಜಿನಿಯರ್‌ಗೆ ಸೇರಿದೆ ಎನ್ನಲಾದ ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ತನಿಖೆ ನಡೆಸಿ ವರದಿ ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆದರೆ, ಯಡಿಯೂರಪ್ಪನವರು ತನಿಖೆಗೆ ಮೊದಲೇ ಕಲ್ಪನೆ ಆಧಾರದ ಮೇಲೆ ಮಾತನಾಡುವುದು ಸಲ್ಲ. ಅವರಿಗೆ ಇಂಥ ಕೆಲಸ ಮಾಡಿ ಅಭ್ಯಾಸ. ಹೀಗಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ’

-ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News