ಮುಂಬೈ ಮೇಲ್ಸೇತುವೆ ಕುಸಿತದ ಹಿನ್ನೆಲೆ: ಬುಲೆಟ್ ರೈಲು ಯೋಜನೆಯನ್ನು ಕೈಬಿಡುವಂತೆ ಎನ್‌ಸಿಪಿ ಆಗ್ರಹ

Update: 2019-03-15 13:55 GMT

ಮುಂಬೈ,ಮಾ.15: ಬಹುಕೋಟಿ ರೂ.ವೆಚ್ಚದ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಯನ್ನು ಕೈಬಿಡುವಂತೆ ಎನ್‌ಸಿಪಿಯು ಶುಕ್ರವಾರ ಆಗ್ರಹಿಸಿದೆ. ಗುರುವಾರ ಇಲ್ಲಿಯ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನ್ನು ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆಯು ಕುಸಿದು ಆರು ಜನರು ಬಲಿಯಾಗಿರುವ ಬೆನ್ನಿಗೇ ಎನ್‌ಸಿಪಿಯ ಈ ಹೇಳಿಕೆ ಹೊರಬಿದ್ದಿದೆ.

ಭಾರತ ಮತ್ತು ಜಪಾನ್ ಸಹಭಾಗಿತ್ವದ ಹೈಸ್ಪೀಡ್ ರೈಲು ಯೋಜನೆಗಾಗಿ ವ್ಯಯಿಸಲಾಗುತ್ತಿರುವ ಹಣವನ್ನು ಮಹಾನಗರಗಳು ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಉಪನಗರ ರೈಲು ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಬಳಸಬೇಕು ಎಂದು ಪಕ್ಷದ ಶಾಸಕ ಜಿತೇಂದ್ರ ಅವ್ಹಾದ್ ಹೇಳಿದರು.

ಬುಲೆಟ್ ರೈಲು ಯೋಜನೆಯ ರದ್ದತಿ ಎನ್‌ಸಿಪಿ ಚುನಾವಣಾ ಪ್ರಣಾಳಿಕೆಯ ಭಾಗವಾಗಲಿದೆ ಎಂದು ಹೇಳಿದ ಅವರು,ಪಕ್ಷವು ಅಧಿಕಾರಕ್ಕೆ ಬಂದರೆ ಒಂದು ತಿಂಗಳೊಳಗೆ ಈ ಯೋಜನೆಯನ್ನು ಹಿಂದೆಗೆದುಕೊಳ್ಳಲಿದೆ ಎಂದರು.

ಮುಂಬೈ ಮತ್ತು ಉಪನಗರಗಳಲ್ಲಿ ರೈಲ್ವೆ ಹಳಿಗಳ ಮೇಲಿನ ಪಾದಚಾರಿ ಮೇಲ್ಸೇತುವೆಗಳು ಶಿಥಿಲ ಸ್ಥಿತಿಯಲ್ಲಿದ್ದು, ಇವುಗಳ ವಿಶೇಷ ಪರಿಶೀಲನೆ ಮತ್ತು ತಕ್ಷಣದ ನಿರ್ವಹಣೆ ಅಗತ್ಯವಾಗಿದೆ ಎಂದ ಅವರು,ಮುಂಬೈನಲ್ಲಿ ಪ್ರತಿದಿನ 200ಕ್ಕೂ ಅಧಿಕ ರೈಲ್ವೆ ಸಂಬಂಧಿತ ಅಪಘಾತಗಳು ನಡೆಯುತ್ತಿದ್ದು,ಪ್ರಯಾಣಿಕರು ಸಾವುನೋವುಗಳನ್ನು ಅನುಭವಿಸುತ್ತಿದ್ದಾರೆ ಎಂದರು.

ಗುರುವಾರ ಕುಸಿದುಬಿದ್ದ ಮೇಲ್ಸೇತುವೆಯನ್ನು ಕಳೆದ ವರ್ಷ ಪರಿಶೀಲಿಸಿದ್ದ ತಜ್ಞರ ತಂಡವು ಕಿರು ದುರಸ್ತಿ ಕಾಮಗಾರಿಗಳನ್ನು ಶಿಫಾರಸು ಮಾಡಿತ್ತು. ಆದರೆ ಇದಕ್ಕೆ ಹಣವನ್ನು ಬಿಡುಗಡೆಗೊಳಿಸದ ಬಿಎಂಸಿಯೇ ದುರಂತಕ್ಕೆ ಸಂಪೂರ್ಣ ಹೊಣೆಗಾರನಾಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News