ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಿದ ಸುಮಲತಾ ಅಂಬರೀಶ್

Update: 2019-03-15 14:04 GMT

ಬೆಂಗಳೂರು, ಮಾ.15: ಲೋಕಸಭಾ ಚುನಾವಣೆ ಹಿನ್ನೆಲೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಮಾ.18ರಂದು ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸುಮಲತಾ ಅಂಬರೀಶ್ ಇಂದಿಲ್ಲಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಂ.ಎಸ್.ಕೃಷ್ಣ ಅವರನ್ನು ಶುಕ್ರವಾರ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಹಿರಿಯ ನಾಯಕರು. ಮಂಡ್ಯದ ವಸ್ತುಸ್ಥಿತಿಯನ್ನು ಅವರಿಗೆ ವಿವರಿಸಿದ್ದೇನೆ ಎಂದು ತಿಳಿಸಿದರು.

ನನ್ನ ಅನಿಸಿಕೆಯನ್ನು ಕೃಷ್ಣ ಅವರಿಗೆ ತಿಳಿಸಿದ್ದೇನೆ. ಮಾ.18ಕ್ಕೆ ನಿರ್ಧಾರವನ್ನು ಪ್ರಕಟಿಸಲಿದ್ದೇನೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿ ಯಾರನ್ನೂ ಟಿಕೆಟ್ ವಿಷಯಕ್ಕೆ ಭೇಟಿ ಮಾಡಿಲ್ಲ. ಆದರೆ, ಹಿರಿಯ ನಾಯಕರ ಆಶೀರ್ವಾದ ಪಡೆಯಲಿದ್ದೇನೆ ಎಂದು ತಿಳಿಸಿದರು.

ನನಗೆ ಬೆಂಬಲ ನೀಡುವುದಾಗಿ ಅಧಿಕೃತವಾಗಿ ಯಾರೂ ಹೇಳಿಲ್ಲ. ಇಂದಿನ ಸ್ಥಿತಿಯಲ್ಲಿ ಎಲ್ಲರ ಬೆಂಬಲದ ಅಗತ್ಯವಿದೆ. ಗೆಲುವು, ಸೋಲು ನಂತರದ್ದು. ಆದರೆ, ಒಳ್ಳೆಯ ಉದ್ದೇಶ ಇಟ್ಟುಕೊಂಡು ಪ್ರಚಾರ ಆರಂಭಿಸಬೇಕು. ಒಳ್ಳೆಯ ರೀತಿ ಪ್ರಚಾರ ನನ್ನ ಆಸೆ ಎಂದು ಸುಮಲತಾ ನುಡಿದರು.

ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ಕೊಂಡೊಯ್ಯುವ ವಿಷಯದಲ್ಲಿ ನನ್ನ ಜೊತೆ ಯಾರೂ ಮಾತನಾಡಿರಲಿಲ್ಲ. ಅಂಬರೀಶ್ ಹೆಸರನ್ನು ಎಲ್ಲರೂ ಬಳಸಿಕೊಳ್ಳುವ ಸನ್ನಿವೇಶ ಇದೆ. ಯಾರೇ ಆಗಲಿ, ಪದೇ ಪದೇ ಅಂಬರೀಶ್ ಮತ್ತು ನನ್ನ ಹೆಸರು ತರದೇ ಇರೋದು ಒಳ್ಳೆಯದು ಎಂದು ಹೇಳಿದರು.

ಬಳಿಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಾತನಾಡಿ, ಈಗ ಸುಮಲತಾ ಚುನಾವಣೆಗೆ ನಿಲ್ಲುವ ಪ್ರಸ್ತಾಪ ಮಾಡಿದ್ದಾರೆ. ನಾನು ಬಿಜೆಪಿ ವರಿಷ್ಠರ ಜೊತೆ ಮಾತನಾಡುತ್ತೇನೆ. ಈಗಾಗಲೇ ಸುಮಲತಾ ಮಾ.18 ರಂದು ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ. ಆ ಹೊತ್ತಿಗಾಗಲೇ ಬಿಜೆಪಿ ಮಂಡ್ಯದಲ್ಲಿ ಅಭ್ಯರ್ಥಿ ನಿಲ್ಲಿಸಬೇಕಾ ಅಥವಾ ಸುಮಲತಾಗೆ ಬೆಂಬಲ ಘೋಷಣೆ ಮಾಡಬೇಕಾ ಎನ್ನುವ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಬೇಕೆನ್ನುವ ಬೇಡಿಕೆ ಇದೆ. ಅದನ್ನು ಕಡೆಗಣಿಸುವಂತಿಲ್ಲ. ಆದರೂ, ಒಟ್ಟಾರೆಯಾಗಿ ಬಿಜೆಪಿ ನಿರ್ಧಾರ ತೆಗೆದುಕೊಳ್ಳಲಿದೆ. ವ್ಯಕ್ತಿಗತ ವಿಷಯ ಚರ್ಚೆ ಬೇಡವೆಂದು ಸುಮಲತಾ ಹೇಳಿದ್ದಾರೆ. ಅದನ್ನು ಒಪ್ಪುತ್ತೇನೆ ಎಂದು ಹೇಳಿದರು.

ತಮ್ಮಣ್ಣ ಹೇಳಿದ್ದು ಸುಳ್ಳು

ಜೆಡಿಎಸ್ ಪಕ್ಷ ಟಿಕೆಟ್ ನೀಡಲು ಮುಂದಾಗಿತ್ತು ಎನ್ನುವ ಸಚಿವ ಡಿ.ಸಿ.ತಮ್ಮಣ್ಣ ಅವರ ಹೇಳಿಕೆ ಸುಳ್ಳು. ನನಗೆ ಯಾವುದೇ ಆಹ್ವಾನ ಬಂದಿಲ್ಲ. ಅನುಕಂಪದ ಲಾಭಕ್ಕೆ ಯಾರು ಬೇಕಾದರೂ ಯತ್ನಿಸಬಹುದು. ಇದನ್ನೆಲ್ಲಾ ನಾನು ಎದುರಿಸುತ್ತೇನೆ. ಪಾಠ ಕಲಿಯಲಿದ್ದೇನೆ

-ಸಮಲತಾ ಅಂಬರೀಶ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News