ಸಚಿವ ಕೃಷ್ಣಭೈರೇಗೌಡಗೆ ತಲುಪಿಸುತ್ತಿದ್ದ ಕೋಟ್ಯಂತ ರೂ. ಜಪ್ತಿ: ಎನ್.ರವಿಕುಮಾರ್ ಆರೋಪ

Update: 2019-03-15 14:17 GMT

ಬೆಂಗಳೂರು, ಮಾ.15: ಗ್ರಾಮೀಣಾಭಿವೃದ್ಧಿ ಇಲಾಖೆಯ ಇಂಜಿನಿಯರ್ ನಾರಾಯಣ ಬಿ.ಪಾಟೀಲ್ ಚುನಾವಣೆಗಾಗಿ ಸಚಿವ ಕೃಷ್ಣಭೈರೇಗೌಡಗೆ ತಲುಪಿಸಲು ಗುತ್ತಿಗೆದಾರರಿಂದ ವಸೂಲಿ ಮಾಡಿದ್ದ ಕೋಟ್ಯಂತರ ರೂ.ಗಳು ಐಟಿ ದಾಳಿ ವೇಳೆ ದೊರೆತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆರೋಪಿಸಿದರು.

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾರಾಯಣ ಬಿ.ಪಾಟೀಲ್ ಅವರ ಕಾರು ಚಾಲಕನ ಬಳಿಯೂ 25 ಲಕ್ಷ ರೂ.ಗಳು ದೊರೆತಿದೆ. ಹಾವೇರಿಯಲ್ಲಿ ಅವರ ಮನೆ ಮೇಲೂ ಐಟಿ ದಾಳಿ ಮುಂದುವರೆದಿದ್ದು, ಅವರು ಪರಾರಿಯಾಗಿದ್ದಾರೆ ಎಂದರು. ಒಂದು ಮೂಲಗಳ ಪ್ರಕಾರ ಶೇ.10 ರಿಂದ 20ರಷ್ಟು ಕಮಿಷನ್ ಅನ್ನು ಗುತ್ತಿಗೆದಾರರಿಂದ ಚುನಾವಣೆಗಾಗಿ ವಸೂಲಿ ಮಾಡಲಾಗಿದೆ. ಈ ಹಣವನ್ನು ಸಚಿವರಿಗೆ ತಲುಪಿಸಲು ಬೆಂಗಳೂರಿಗೆ ತರಲಾಗಿತ್ತು. ಇಷ್ಟು ದೊಡ್ಡ ಪ್ರಮಾಣದ ವಸೂಲಿಯು ಮಂತ್ರಿಗಳ ಗಮನಕ್ಕೆ ಬಾರದೆ ನಡೆಯಲು ಅಸಾಧ್ಯ ಎಂದು ರವಿಕುಮಾರ್ ಹೇಳಿದರು.

ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುವ ಸಂದರ್ಭದಲ್ಲಿ 50 ಸಾವಿರಕ್ಕೂ ಹೆಚ್ಚು ಹಣ ಒಯ್ಯಬಾರದು ಎಂಬ ನಿರ್ಬಂಧ ಇರುವ ವೇಳೆಯಲ್ಲಿ ಕೋಟ್ಯಂತರ ರೂ.ಐಟಿ ದಾಳಿಯಲ್ಲಿ ದೊರೆತಿದೆ ಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯೆ ಡಾ.ತೇಜಸ್ವಿನಿ ಗೌಡ ಮಾತನಾಡಿ, ಚುನಾವಣಾ ಆಯೋಗವು ಕೂಡಲೆ ಮಧ್ಯಪ್ರವೇಶಿಸಿ, ಪರಾರಿಯಾಗಿರುವ ನಾರಾಯಣ ಬಿ.ಪಾಟೀಲ್‌ರನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಈ ಹಣವನ್ನು ನೀಡಿರುವ ಗುತ್ತಿಗೆದಾರರನ್ನು ವಿಚಾರಣೆಗೆ ಒಳಪಡಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕೃಷ್ಣಭೈರೇಗೌಡ ಕಪಟ ಅಮಾಯಕತನವನ್ನು ತೋರದೆ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೈತ್ರಿ ಧರ್ಮ ಪಾಲನೆಯ ನೆಪದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಪರಸ್ಪರ ಸಹಕಾರ ನೀಡುತ್ತಿರುವ ಮುಖ್ಯಮಂತ್ರಿಗಳು ಸಚಿವರ ರಾಜೀನಾಮೆಗೆ ಸೂಚಿಸಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ ಈ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆದೇಶಿಸಲು ನಾವು ಒತ್ತಾಯಿಸುತ್ತಿದ್ದೇವೆ. ಮುಂದಿನ 7 ದಿನಗಳಲ್ಲಿ ತನಿಖೆಯನ್ನು ಪೂರೈಸಿ ಇದರ ಹಿಂದಿರುವ ಎಲ್ಲ ತಪ್ಪಿತಸ್ಥರನ್ನು ಬಂಧಿಸಲು ಆದೇಶಿಸುವಂತೆ ಕೋರಲಾಗುವುದು ಎಂದು ತೇಜಸ್ವಿನಿ ಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಸಹವಕ್ತಾರ ಎಸ್.ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News